ADVERTISEMENT

ಅಜಯ್ ಡೈರೆಕ್ಟರ್ ಸರ್ಕಲ್‌ನಲ್ಲಿ ದ್ವಾದಶ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 7:21 IST
Last Updated 8 ಮಾರ್ಚ್ 2021, 7:21 IST
ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರು (ಹಸಿರು ಟೀಷರ್ಟ್‌ ಧರಿಸಿದವರು)
ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕರು (ಹಸಿರು ಟೀಷರ್ಟ್‌ ಧರಿಸಿದವರು)   

ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ. ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ.

ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ಅಂದಿದ್ದವರನ್ನೆಲ್ಲಾ ಕರೆತಂದು ಅವರಿಂದ ಒಂದೊಂದು ಸಿನಿಮಾಗಳನ್ನು ನಿರ್ಮಾಣ ಮಾಡಿಸುತ್ತಿದ್ದಾರೆ.
ಈ ಹನ್ನೆರಡು ಸಿನಿಮಾಗಳ ಮುಹೂರ್ತ, ಶೀರ್ಷಿಕೆ ಬಿಡುಗಡೆ ಸಮಾರಂಭ ಶೀಘ್ರ ಜರುಗಲಿದೆ ಎಂದಿದ್ದಾರೆ ಅಜಯ್‌.

ಶೀರ್ಷಿಕೆಗಳು ಯಾವುವು ಗೊತ್ತಾ?

ADVERTISEMENT

ಅಜಯ್‌ ಕುಮಾರ್‌ ನಿರ್ಮಾಣ, ನಿರ್ದೇಶನ, ಸಂಕಲನ, ಸಂಗೀತ, ಕಥೆ, ಚಿತ್ರಕಥೆ ಹೊಂದಿರುವ ‘ಪ್ರೇಮಂ ಶರಣಂ ಗಚ್ಚಾಮಿ’, ‘ಡ್ರಗ್ ಪೆಡ್ಲರ್’, ಶ್ರೀಯೋಗ ಮಕರಂದ ನಿರ್ಮಾಣದ ‘ಶ್ರೀರಾಮ ಸಿದ್ಧಿ’, ‘ಲಾಕ್ ಡೌನ್’, ಚೆನ್ನಬಸವ ನಿರ್ಮಾಣ, ನವ್ಯಶ್ರೀ ಎಸ್.ನಿರ್ದೇಶನದ ‘ಮಂದಾರ’, ಕುಚೇಲ ನಿರ್ಮಾಣ, ಕಂಕಣವಾಡಿ ಬಸವರಾಜು ನಿರ್ದೇಶನದ ‘ಠಕ್ಕ’, ಮಂಜುನಾಥ್ ಆರ್‌ಜಿ ನಿರ್ಮಾಣದಲ್ಲಿ, ಅಶ್ವಿನಿ ಎಕೆ ನಿರ್ದೇಶನದ ‘ದೇವರ ಮಕ್ಕಳು’, ಡಾ.ದೇವನಹಳ್ಳಿ ದೇವರಾಜ್ ನಿರ್ಮಾಣ ಮತ್ತು ನಿರ್ದೇಶನದ ‘ಆಂಡ್ರಾಯ್ಡ್ ಫೋನ್’, ನೆಲಮನೆ ರಾಘವೇಂದ್ರ ನಿರ್ಮಾಣದಲ್ಲಿ, ವನಿತಾ ನಿರ್ದೇಶಿಸಲಿರುವ ‘ರಕ್ತಾಕ್ಷಿ’, ಲಕ್ಷ್ಮಿ ಸಿ ನಿರ್ಮಾಣ, ಶಿವಸಾಹಿತ್ಯ ನಿರ್ದೇಶನದಲ್ಲಿ ʻಸಂಧ್ಯಾರಾಗʼ, ಶಫಿ ಹೆಬ್ಬಾಳ ನಿರ್ಮಾಣದ, ತನುಶ್ರೀ ಬಿವಿ ನಿರ್ದೇಶನದ ‘ಲವ್ ಯು ಚಿನ್ನ’, ಶಿವರಾಜ್ ಕುಮಾರ್ ಎನ್.ಎಸ್. ನಿರ್ಮಾಣದಲ್ಲಿ, ದಿನೇಶ್ ಉಂಡವಾಡಿ ನಿರ್ದೇಶಿಸಲಿರುವ ‘ವ್ಯಾಕ್ಸಿನ್’ ಇದುವರೆಗೆ ಬಿಡುಗಡೆಯಾದ ಶೀರ್ಷಿಕೆಗಳು.

ಎಲ್ಲ ಹನ್ನೆರಡೂ ಸಿನಿಮಾಗೆ ಸ್ವತಃ ಅಜಯ್ ಕುಮಾರ್ ಅವರೇ ಕತೆ ಬರೆದಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡ ಕತೆಗಳು ಇವು.

‘ತಲೆಯಲ್ಲಿ ಇದ್ದ ಐಡಿಯಾಗಳೆಲ್ಲಾ ಲಾಕ್ ಡೌನ್ ಸಮಯದಲ್ಲಿ ಅಕ್ಷರರೂಪಕ್ಕಿಳಿಯಿತು. ನಾನು ಈ ಹಿಂದೆ ನಿರ್ದೇಶಿಸಿದ್ದ ಎರಡು ಚಿತ್ರಗಳಿಗೆ ಸಹಾಯಕರಾಗಿ ನನ್ನೊಂದಿಗಿದ್ದ ಪ್ರತಿಭಾವಂತರಿಗೆ ಇಲ್ಲಿ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕೊಡಿಸಿದ್ದೇನೆ. ನಿರ್ಮಾಪಕರನ್ನು ಒಪ್ಪಿಸಿ ಸಿನಿಮಾ ಮಾಡುವುದು ಎಷ್ಟು ಕಷ್ಟದ ಕೆಲಸ ಅನ್ನುವುದನ್ನೂ ನಾನು ಬಲ್ಲೆ. ಹೀಗಾಗಿ ನನ್ನ ತಂಡದ ಎಲ್ಲರೂ ಕ್ರಿಯಾಶೀಲತೆಗಷ್ಟೇ ಒತ್ತು ಕೊಟ್ಟು ನಿರ್ದೇಶನ ಮಾಡಲಿ ಎನ್ನುವ ಉದ್ದೇಶ ನನ್ನದುʼ ಎನ್ನುತ್ತಾರೆ ಅಜಯ್‌ ಕುಮಾರ್‌.

ನಟಿ ರಾಗಿಣಿ ಮಾತನಾಡಿ, ‘ಏಕಕಾಲದಲ್ಲಿ ಹನ್ನೆರಡು ಸಿನಿಮಾಗಳನ್ನು ಆರಂಭಿಸುವುದು ಸುಲಭದ ಮಾತಲ್ಲ. ಈ ಪ್ರಯತ್ನವನ್ನು ಕಂಡು ಖುಷಿ ಮತ್ತು ಹೆಮ್ಮೆ ಅನ್ನಿಸುತ್ತಿದೆ. ಹೊಸದಾಗಿ ಸಿನಿಮಾಗೆ ಬಂದು, ಇಲ್ಲಿ ನೆಲೆ ನಿಲ್ಲಲು ಶ್ರಮಿಸುವವರ ಮನಸ್ಥಿತಿ ಹಾಗೂ ತಳಮಳಗಳು ಹೇಗಿರುತ್ತವೆ ಅನ್ನುವುದು ನನಗೆ ಗೊತ್ತು. ನಾನು ಕೂಡಾ ಆ ಘಟ್ಟವನ್ನು ದಾಟಿ ಬಂದವಳು. ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕಿಂತ ಮತ್ತೊಂದು ಚಿತ್ರರಂಗ ಇಲ್ಲ. ಅತ್ಯುತ್ತಮ ಸಿನಿಮಾಗಳು ಬರುವ ಸೂಚನೆಯನ್ನು ಈ ವೇದಿಯಲ್ಲಿ ಕಾಣುತ್ತಿದ್ದೇನೆ. ಮಹಿಳಾ ನಿರ್ದೇಶಕಿಯರು ಕಡಿಮೆ ಇರುವ ನಮ್ಮ ಚಿತ್ರರಂಗದಲ್ಲಿ ಈ ಬ್ಯಾನರ್ ಮೂಲಕ ಒಂದೇ ಸಲಕ್ಕೆ ಇಷ್ಟೊಂದು ನಿರ್ದೇಶಕರು ಬರುತ್ತಿರುವುದು ಖುಷಿಯ ವಿಚಾರ’ ಎಂದರು.

‘ಅಜಯ್‌ ಕುಮಾರ್‌ ಅವರು ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಅಪರೂಪದ ಪ್ರತಿಭೆ. ರಂಗಭೂಮಿಯ ಹಲವಾರು ಹೆಸರಾಂತ ನಾಟಕಗಳಲ್ಲಿ ಅಜಯ್‌ ಅಭಿನಯಿಸಿದ್ದಾರೆ. ಅವರ ಪ್ರತಿಭೆಯ ಜೊತೆ ಶ್ರಮಜೀವಿಯೂ ಹೌದು. ರಂಗಭೂಮಿಯಲ್ಲಿ ಇವರ ಸಾಧನೆಯನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಚಿತ್ರರಂಗದಲ್ಲೂ ಅಜಯ್‌ ಹೆಸರು ಮಾಡಲಿ’ ಎಂದು ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಹಾರೈಸಿದರು.
ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌ ಶುಭಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.