
‘ರೈಡರ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ನಟಿ ಸಂಪದಾ ಸಿನಿಗ್ರಾಫ್‌ಗೆ ದೊಡ್ಡ ತಿರುವು ನೀಡಿದ ಸಿನಿಮಾ ‘ಎಕ್ಕ’. ‘ಮಲ್ಲಿಕಾ’ ಎಂಬ ಪಾತ್ರದ ಮೂಲಕ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿದ ಸಂಪದಾ, ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ಯಲ್ಲೂ ನಾಯಕಿಯಾಗಿ ನಟಿಸಿದ್ದಾರೆ. 16ನೇ ವಯಸ್ಸಿನಲ್ಲೇ ‘ಮಿಥುನ ರಾಶಿ’ ಎನ್ನುವ ಧಾರಾವಾಹಿಯಲ್ಲಿ ನಟಿಸಿ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಇವರು ‘ಬೆಂಕಿ’ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನದಲ್ಲಿ ಗುರುತಿಸಿಕೊಂಡರು. ಸದ್ಯ ಸಂಪದಾ ಕೈಯಲ್ಲಿ ಮೂರು ಸಿನಿಮಾಗಳಿವೆ. ಈ ಪೈಕಿ ಒಂದು ತೆಲುಗು ಪ್ರಾಜೆಕ್ಟ್ ಕೂಡಾ ಇದ್ದು, ಈ ಮೂಲಕ ಟಾಲಿವುಡ್‌ಗೂ ಪಾದವಿಟ್ಟಿದ್ದಾರೆ ಸಂಪದಾ.
‘ಸಿನಿಜೀವನದಲ್ಲಿ ‘ಎಕ್ಕ’ ತೆರೆಕಂಡ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ’ ಎಂದು ಮಾತು ಆರಂಭಿಸಿದ ಸಂಪದಾ, ‘ನಾಲ್ಕೈದು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿದ್ದರೂ ‘ಎಕ್ಕ’ ಬಿಡುಗಡೆಯಾದ ಬಳಿಕವಷ್ಟೇ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಸಿನಿಮಾದಲ್ಲಿನ ನನ್ನ ನಟನೆಯ ಪರಿಣಾಮ ಈ ಮೂಲಕ ನನಗೆ ಕಾಣಿಸುತ್ತಿದೆ’ ಎಂದರು.
‘ನಿರ್ದೇಶಕರಾದ ರೋಹಿತ್ ಪದಕಿ ಅವರು ಈ ಸಿನಿಮಾದ ಕಥೆ ಹೇಳಿದಾಗ ನನಗೆ ‘ಮಲ್ಲಿಕಾ’ ಪಾತ್ರದ ಬಗ್ಗೆ ಬಹಳ ಕುತೂಹಲ ಹುಟ್ಟಿತ್ತು. ಆಗಿನ್ನೂ ಇನ್ನೊಂದು ನಾಯಕಿಯ ಪಾತ್ರದ ಆಯ್ಕೆ ಆಗಿರಲಿಲ್ಲ. ಎರಡು ಪಾತ್ರಗಳಲ್ಲಿ ನನಗೆ ಯಾವುದನ್ನು ನೀಡಬೇಕು ಎನ್ನುವ ಅಂತಿಮ ನಿರ್ಧಾರವೂ ಆಗಿರಲಿಲ್ಲ. ಕೇವಲ ನಾನು ಹಾಗೂ ಯುವ ಅವರು ತಾರಾಬಳಗಕ್ಕೆ ಆಯ್ಕೆಯಾಗಿದ್ದೆವು. ‘ನಿಮಗೆ ಯಾವ ಪಾತ್ರ ಇಷ್ಟವಾಯಿತು’ ಎಂದು ರೋಹಿತ್ ಅವರು ನನ್ನಲ್ಲಿ ಕೇಳಿದ್ದರು. ನಾನು ‘ಮಲ್ಲಿಕಾ’ ಪಾತ್ರವನ್ನು ಉಲ್ಲೇಖಿಸಿದ್ದೆ. ಏಕೆಂದರೆ ಆ ಪಾತ್ರಕ್ಕೊಂದು ತೀವ್ರತೆ ಇತ್ತು. ಜೊತೆಗೆ ನಟನೆಯ ಸಾಮರ್ಥ್ಯ ಪ್ರದರ್ಶಿಸಲು ಸಾಕಷ್ಟು ಅವಕಾಶಗಳು ಅದರಲ್ಲಿ ನನಗೆ ಕಾಣಿಸಿತು. ಕೊನೆಯಲ್ಲಿ ನನಗೇ ಆ ಪಾತ್ರ ದೊರಕಿದ್ದು ಪುಣ್ಯ. ಕಥೆಯ ರೀಡಿಂಗ್ ಸಂದರ್ಭದಲ್ಲೇ ಪಾತ್ರವನ್ನು ಹೇಗೆ ನಿಭಾಯಿಸಬೇಕು ಎನ್ನುವ ತಯಾರಿ ನಡೆಸಿದ್ದೆ. ಪಾತ್ರಕ್ಕೆ ಬೇಕಾದ ವಸ್ತ್ರಗಳನ್ನೂ ನಾನೇ ಆಯ್ಕೆ ಮಾಡಿದ್ದೂ ಇದೆ’ ಎನ್ನುತ್ತಾರೆ ಸಂಪದಾ.
‘ಕರಾವಳಿ’ ಒಂದು ದೀರ್ಘ ಪಯಣ
‘2023ರ ಡಿಸೆಂಬರ್‌ನಲ್ಲಿ ಘೋಷಣೆಯಾಗಿದ್ದ ಈ ಸಿನಿಮಾ 2024ರ ಫೆಬ್ರುವರಿಯಲ್ಲಿ ಸೆಟ್ಟೇರಿತ್ತು. ಖಂಡಿತಾ ಇದೊಂದು ದೊಡ್ಡ ಪಯಣ. ಸಿನಿಮಾದ ಕಥೆಯ ವ್ಯಾಪ್ತಿಯೇ ಹಾಗಿದೆ. ಪ್ರಜ್ವಲ್ ದೇವರಾಜ್, ರಾಜ್ ಬಿ.ಶೆಟ್ಟಿ, ರಮೇಶ್ ಇಂದಿರಾ, ಮಿತ್ರ ಹೀಗೆ ಖ್ಯಾತ ನಟರು ಈ ಸಿನಿಮಾದಲ್ಲಿದ್ದಾರೆ. ಎಲ್ಲರ ಡೇಟ್ಸ್ ಹೊಂದಿಸಿಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಸಿನಿಮಾದ ಸಂಪೂರ್ಣ ಚಿತ್ರೀಕರಣ ಮಂಗಳೂರು, ಮೂಡುಬಿದಿರೆಯಲ್ಲಿ ನಡೆದಿದೆ. ಹಲವು ಸವಾಲುಗಳ ನಡುವೆ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಈ ಸಿನಿಮಾದಲ್ಲಿ ನಾನು ‘ದಕ್ಷಿಣ’ ಎಂಬ ಹೆಸರಿನ ಪಶುವೈದ್ಯೆಯಾಗಿ ಕಾಣಿಸಿಕೊಂಡಿದ್ದೇನೆ. ಕರಾವಳಿಯಿಂದ ಬೆಂಗಳೂರಿಗೆ ಬಂದು ಶಿಕ್ಷಣ ಪೂರ್ಣಗೊಳಿಸಿ ಮರಳಿರುವ ಪಾತ್ರ ನನ್ನದು. ‘ಮಲ್ಲಿಕಾ’ ಪಾತ್ರಕ್ಕೆ ಹೋಲಿಸಿದರೆ ಇದು ಕೊಂಚ ಭಿನ್ನವಾದ ಪಾತ್ರ. ಇದರಲ್ಲಿ ನನ್ನ ಪಾತ್ರ ಅಷ್ಟೊಂದು ಗಂಭೀರವಾದುದಲ್ಲ. ಕ್ಯೂಟ್ ಆಗಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾದುದ್ದಕ್ಕೂ ನಾಯಕನ ಜೊತೆ ಈ ಪಾತ್ರವಿರಲಿದೆ’ ಎಂದರು.
ಸಂಸ್ಕೃತಿಯನ್ನು ಅರಿತುಕೊಂಡೆ...
‘ನನ್ನ ತಂದೆ ಮಂಡ್ಯ ಮೂಲದವರು; ತಾಯಿ ದೊಡ್ಡಬಳ್ಳಾಪುರದವರು. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಹೀಗಾಗಿ ನನಗೆ ಕರಾವಳಿ ಎಂಬುವುದು ಹೊಸ ಲೋಕವಾಗಿತ್ತು. ‘ಕಾಂತಾರ’ ಸಿನಿಮಾ ನೋಡುವವರೆಗೆ ನಮಗೆ ಆ ಲೋಕದ ಹೆಚ್ಚಿನ ಪರಿಚಯವಿರಲಿಲ್ಲ. ಅಲ್ಲಿನ ಸಂಸ್ಕೃತಿಯ ಅರಿವೂ ಇರಲಿಲ್ಲ. ‘ಕರಾವಳಿ’ ಚಿತ್ರೀಕರಣದ ಸಂದರ್ಭದಲ್ಲಿ ಅಲ್ಲಿನ ಭಿನ್ನವಾದ ಸಂಸ್ಕೃತಿ–ಆಚರಣೆಗಳನ್ನು ನೋಡಿ ಬಹಳ ಇಷ್ಟವಾಗಿತ್ತು. ಮಾಂಸಾಹಾರ ಸೇವನೆ ಮಾಡದೇ ಹಲವು ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೆವು. ಹಲವು ದೈವಸ್ಥಾನ, ದೇವಸ್ಥಾನಗಳ ಭೇಟಿಯೂ ಇದೇ ಸಂದರ್ಭದಲ್ಲಿ ಮಾಡಿದ್ದೆ. ‘ಕೊರಗಜ್ಜ’ ದೈವದ ಬಗ್ಗೆ ತಿಳಿದುಕೊಂಡೆ. ಒಂದು ಭಿನ್ನವಾದ ಅನುಭವವನ್ನೇ ‘ಕರಾವಳಿ’ ಸಿನಿಮಾ ನೀಡಿದೆ’ ಎನ್ನುತ್ತಾರೆ ಸಂಪದಾ.
ಲೋಕಸಂಚಾರಿ ಸಂಪದಾ
‘ನನಗೆ ಪ್ರವಾಸ ಎಂದರೆ ಇಷ್ಟ. ಒಂದು ವರ್ಷ ಸಿಂಗಪುರದಲ್ಲಿ ಕೋರ್ಸ್‌ಗಾಗಿ ಇದ್ದೆ. ‘ಎಕ್ಕ’ ಬಳಿಕ ಲಂಡನ್ ಪ್ರವಾಸ ಕೈಗೊಂಡಿದ್ದೆ. ಡಿಸೆಂಬರ್‌ನಲ್ಲಿ ಜಪಾನ್ ಪ್ರವಾಸದ ಯೋಜನೆ ಹಾಕಿಕೊಂಡಿದ್ದೇನೆ. ಹೊಸ ಜಾಗಗಳ ಅನ್ವೇಷಣೆ, ಅಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಕುತೂಹಲಿ’ ಎನ್ನುತ್ತಾ ತಮ್ಮ ಹೊಸ ಸಿನಿಮಾಗಳತ್ತ ಮಾತು ಹೊರಳಿಸಿದರು ಸಂಪದಾ.
ಮೂರು ಪ್ರಾಜೆಕ್ಟ್ಸ್ ಕೈಯಲ್ಲಿ...
‘ಎಕ್ಕ’ ಬಳಿಕ ಅವಕಾಶಗಳ ಸುರಿಮಳೆಯಿತ್ತು. ಈ ಅವಧಿಯಲ್ಲಿ ಸುಮಾರು 15 ಕಥೆಗಳನ್ನು ಕೇಳಿದೆ. ಕಥೆ, ಪಾತ್ರದ ಆಯ್ಕೆಯಲ್ಲಿ ನಾನು ಬಹಳ ಸೂಕ್ಷ್ಮ. ಇವುಗಳಲ್ಲಿ ನಾಲ್ಕೈದು ಕಥೆಗಳು ಇಷ್ಟವಾಗಿವೆ. ಕನ್ನಡದ ಎರಡು ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದೇನೆ. ತೆಲುಗಿನಲ್ಲೂ ಒಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದೇನೆ. ಇದು ‘ಎಕ್ಕ’ ಚಿತ್ರೀಕರಣದ ಸಂದರ್ಭದಲ್ಲೇ ದೊರಕಿತ್ತು. ಇವುಗಳು ಶೀಘ್ರದಲ್ಲೇ ಘೋಷಣೆಯಾಗಲಿವೆ’ ಎನ್ನುತ್ತಾ ಮಾತು ಮುಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.