ADVERTISEMENT

‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌: ‘ವೆಂಕಟೇಶ’ನ ಪ್ರೇಮಕಥೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 0:39 IST
Last Updated 19 ಮೇ 2025, 0:39 IST
ಚಿತ್ರತಂಡ
ಚಿತ್ರತಂಡ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ನಮೋ ವೆಂಕಟೇಶ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಜಯ್‌ ಭಾರದ್ವಾಜ್‌ ಕಥೆ ಬರೆದು ನಿರ್ದೇಶಿಸಿದ್ದಾರೆ.

‘ಟಿ. ಎನ್. ಸೀತಾರಾಮ್ ಜತೆ ಕೆಲಸ ಮಾಡಿದ್ದೆ. ಪರಿಪೂರ್ಣ ನಿರ್ದೇಶಕನಾಗಿ ಮೊದಲ ಚಿತ್ರ. ಈ ಸಿನಿಮಾಕ್ಕೂ ಪುರಾಣ, ಪುಣ್ಯಕಥೆಗಳಲ್ಲಿ ಬರುವ ‘ವೆಂಕಟೇಶ’ನಿಗೂ ಯಾವುದೇ ಸಂಬಂಧವಿಲ್ಲ. ಇದು ಇಂದಿನ ಕಾಲದ ಕಥೆಯನ್ನು ಹೊಂದಿರುವ ಹಾಸ್ಯಮಯ ಚಿತ್ರ. ಪ್ರೇಮಕಥೆ ಹೊಂದಿರುವ ರೊಮ್ಯಾಂಟಿಕ್‌-ಕಾಮಿಡಿ ಶೈಲಿಯ ಚಿತ್ರವಿದು. ಎರಡು ಬೇರೆ, ಬೇರೆ ತಲೆಮಾರುಗಳಿಗೆ ಸೇರಿದ ವ್ಯಕ್ತಿಗಳ ಸುತ್ತ ಸುತ್ತವ ಕಥೆ. ಒಂದು ತಲೆಮಾರಿನ ಆಲೋಚನೆ ಇನ್ನೊಂದು ತಲೆಮಾರಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದರಿಂದ ಏನೆಲ್ಲ ಆಗುತ್ತದ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು. 

ಆರುಶ್ ಪಿಕ್ಚರ್ಸ್‌ ಅಡಿಯಲ್ಲಿ ಶ್ರೀನಿವಾಸ ಗೆಜ್ಜಲಗೆರೆ ಬಂಡವಾಳ ಹೂಡಿದ್ದಾರೆ. ನಿರ್ದೇಶಕರೇ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.  ‘ಗಟ್ಟಿಮೇಳ’ ಧಾರಾವಾಹಿಯ ಅನ್ವಿತಾ ಸಾಗರ್‌ ನಾಯಕಿ. ಶ್ಯಾಮ್‌ ಸುಂದರ್, ನಾಗರಾಜ ರಾವ್‌, ರವಿಕುಮಾರ್‌, ದೀಪಾ, ಮಂಜುನಾಥ್‌ ಹೆಗಡೆ ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಶರತ್‌ ಆರೋಹಣ ಸಂಗೀತ ಸಂಯೋಜಿಸಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಚಿತ್ರದ ಶೀರ್ಷಿಕೆ ವಿನ್ಯಾಸದ ಜತೆಗೆ ಸಾಹಿತ್ಯ  ಬರೆದಿದ್ದಾರೆ. ನಿರಂಜನ್‌ ದಾಸ್‌ ಮತ್ತು ವಿನೋದ್‌ ಲೋಕಣ್ಣನವರ್ ಛಾಯಾಚಿತ್ರಗ್ರಹಣವಿದ್ದು, ಸಮೀರ್‌ ನಗರದ್‌ ಸಂಕಲನವಿದೆ. ಮೈಸೂರು, ಚಿಕ್ಕಮಗಳೂರಿನ ಬಾಳೂರು, ಕೊಟ್ಟಿಗೆಹಾರ, ದೇವರಮನೆ, ಬಣಕಲ್ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.