ಚಿತ್ರ: treesha.thosar02_official
6ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಗೆದ್ದು, ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ ಈ ಪುಟಾಣಿ ಬಾಲನಟಿ.
ಮಂಗಳವಾರ ನವದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮರಾಠಿ ಬಾಲನಟಿ ತ್ರಿಶಾ ಥೋಸರ್ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಯನ್ನು ಪಡೆದಿದ್ದಾರೆ.
ಚಿತ್ರ: treesha.thosar02_official
‘ನಾಲ್ 2’ ಎಂಬ ಮರಾಠಿ ಸಿನಿಮಾದಲ್ಲಿ ಬಾಲನಟಿ ತ್ರಿಶಾ ವಿವೇಕ್ ಥೋಸರ್ ಚಿಮಿ ಪಾತ್ರದಲ್ಲಿ ನಟಿಸಿದ್ದಳು. ಬಾಲನಟಿ ಅಭಿನಯಕ್ಕೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾಳೆ.
ಸುಧಾಕರ್ ರೆಡ್ಡಿ ಯಕ್ಕಂಟಿ ನಿರ್ದೇಶಿಸಿದ ಮತ್ತು ಖ್ಯಾತ ನಿರ್ಮಾಪಕ ನಾಗರಾಜ್ ಮಂಜುಳೆ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಸಿನಿಮಾವು, ಬಾಲ್ಯ ಸಹೋದರ ಸಂಬಂಧಗಳು ಮತ್ತು ಗ್ರಾಮೀಣ ಹಳ್ಳಿಯಲ್ಲಿ ಬೆಳೆಯುವ ಭಾವನಾತ್ಮಕ ಪ್ರಯಾಣದ ಹೃದಯಸ್ಪರ್ಶಿ ಕಥೆಯನ್ನು ಹೇಳುತ್ತದೆ.
ಚಿತ್ರ: treesha.thosar02_official
ವೇದಿಕೆ ಮೇಲೆ ಮಿಂಚಿದ ಬಾಲನಟಿ ತ್ರಿಶಾ ವಿವೇಕ್ ಥೋಸರ್
ಬಾಲನಟಿ ತ್ರಿಶಾ ಮುದ್ದಾಗಿ ಸೀರೆಯನ್ನು ತೊಟ್ಟು ವೇದಿಕೆಗೆ ಬಂದಿದ್ದಾಳೆ. ಮೊದಲು ಎಲ್ಲರಿಗೂ ನಮಸ್ಕರಿಸಿ, ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ತ್ರಿಶಾಳನ್ನು ನೋಡುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಎದ್ದನಿಂತು ಚಪ್ಪಾಳೆ ತಟ್ಟಿದ್ದಾರೆ. ಕೇವಲ 6ನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಗೆದ್ದುಕೊಂಡು ಇಡೀ ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾಳೆ.
ಇನ್ನು, ತ್ರಿಶಾ ಥೋಸರ್ ಸೇರಿದಂತೆ ಒಟ್ಟು ಐದು ಮಕ್ಕಳಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ನೀಡಲಾಗಿದೆ. ತ್ರಿಶಾ ಥೋಸರ್ ಜೊತೆಗೆ, ಶ್ರೀನಿವಾಸ್ ಪೋಕಲೆ, ಭಾರ್ಗವ್ ಜಗ್ತಾಪ್, ಕಬೀರ್ ಖಂಡಾರೆ ಮತ್ತು ಸುಕೃತಿ ವೇಣಿ ಬಂಡ್‌ರೆಡ್ಡಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನುಭವ ಹಂಚಿಕೊಂಡ ತ್ರಿಶಾ, ‘6 ವರ್ಷದ ಚಿಕ್ಕ ವಯಸ್ಸಿನಲ್ಲಿ, ನಾನು ಅಂತಹ ದೊಡ್ಡ ಗೌರವವನ್ನು ಸ್ವೀಕರಿಸಲು ವೇದಿಕೆಯ ಮೇಲೆ ಹೋದಾಗ, ಇಡೀ ಸಭಾಂಗಣ ಎದ್ದು ನಿಂತು ಚಪ್ಪಾಳೆ ತಟ್ಟಿತು. ನನ್ನ ತಂದೆ–ತಾಯಿ ಮತ್ತು ಅಜ್ಜಿ ಪರಸ್ಪರ ಬಿಗಿಯಾಗಿ ಅಪ್ಪಿಕೊಂಡು ಅಳುತ್ತಿದ್ದರು. ಈ ಪ್ರಶಸ್ತಿ ನನ್ನ ಮಹಾರಾಷ್ಟ್ರ ರಾಜ್ಯ ಮತ್ತು ನನ್ನ ಇಡೀ ಕುಟುಂಬದ ಹೆಸರನ್ನು ಶ್ರೇಷ್ಠಗೊಳಿಸಿದೆ ಎಂಬುದು ಮಾತ್ರ ನನಗೆ ತಿಳಿದಿತ್ತು. ಕಳೆದ 70 ವರ್ಷಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡವರಲ್ಲಿ ನೀನು ಅತ್ಯಂತ ಕಿರಿಯ ಬಾಲ ಕಲಾವಿದೆ ಅಂತ ನನ್ನ ತಾಯಿ ಹೇಳುತ್ತಿದ್ದರು,’ ಎಂದು ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.