
ಬಹುತೇಕ ಹೊಸಬರಿಂದಲೇ ಕೂಡಿರುವ ‘ತ್ರಿಕಾರಂ’ ಚಿತ್ರದ ಎರಡನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಸೀದಾ ನಿಂತರೂ ಲೋಕ ಯಾಕೆ ಉಲ್ಟಾ ಕಾಣ್ತದೆ’ ಎಂಬ ಗೀತೆಗೆ ಕೇಶು-ಚೇತನ್ ಸಾಹಿತ್ಯ, ರಾಜೇಶ್ ಕೃಷ್ಣನ್ ಧ್ವನಿ, ವಿವೇಕ್ ಚಕ್ರವರ್ತಿ ಸಂಗೀತವಿದೆ.
ದಿಲೀಪ್ ಕುಮಾರ್ ಜೆ.ಆರ್.ನಿರ್ದೇಶನದ ಚಿತ್ರ ಎಲ್ಲ ಕೆಲಸಗಳನ್ನು ಮುಗಿಸಿ ಬಿಡುಗಡೆಗೆ ಸಿದ್ಧವಿದೆ. ಜಿ.ಗಣೇಶ್ ಮೂರ್ತಿ ಚಿತ್ರಕ್ಕೆ ಬಂಡವಾಳ ಹೂಡುವುದರ ಜತೆಗೆ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.
‘ದೇವರು ಮತ್ತು ದುಷ್ಟರ ನಡುವಿನ ಹೋರಾಟದ ಕಥೆಯನ್ನು ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯಲ್ಲಿ ಹೇಳಿದ್ದೇವೆ. ಅದು ಯಾವ ರೀತಿಯ ಹೋರಾಟ? ಶಿವನನ್ನು ತ್ರಿಕಾರಂ ಎಂದು ಏಕೆ ಕರೆಯುತ್ತಾರೆ? ಎಂಬಿತ್ಯಾದಿ ವಿಷಯಗಳನ್ನು ಚಿತ್ರದಲ್ಲಿಯೇ ನೋಡಬೇಕು. ಶೀಘ್ರದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.
‘ಇದು ಸ್ಮಶಾನ ಅಲ್ಲ’ ಎಂಬ ಅಡಿಬರಹ ಚಿತ್ರಕ್ಕಿದೆ. ಮುಗ್ಧ ಹಾಗೂ ರುದ್ರನಾಗಿ ಎರಡು ಅವತಾರಗಳಲ್ಲಿ ಹರ್ಷವರ್ಧನ್ ಕಾಣಿಸಿಕೊಂಡಿದ್ದಾರೆ. ನಿಶ್ಚಿತ ಶೆಟ್ಟಿ ನಾಯಕಿ. ನಾಗೇಂದ್ರ ಅರಸ್, ಬಲ ರಾಜವಾಡಿ, ಮಂಜು ಪಾವಗಡ ಮುಂತಾದವರು ಅಭಿನಯಿಸಿದ್ದಾರೆ.
ಹೊನ್ನಾಳಿ ಯಾಸಿನ್ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.