ADVERTISEMENT

ಶೇ.50 ರಷ್ಟು ಚಿತ್ರಮಂದಿರ ಭರ್ತಿಗೆ ಮಾತ್ರ ಅವಕಾಶ: ಆಕ್ಷೇಪ ವ್ಯಕ್ತಪಡಿಸಿದ ಸುದೀಪ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 8:04 IST
Last Updated 3 ಏಪ್ರಿಲ್ 2021, 8:04 IST
ಸುದೀಪ್‌
ಸುದೀಪ್‌   

ಬೆಂಗಳೂರು: ಕೋವಿಡ್‌–19 ನಿಯಂತ್ರಣಕ್ಕಾಗಿ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ 50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ನಟ ಸುದೀಪ್‌ ಅವರು ಆಕ್ಷೇಪ ವ್ಯಕ್ತಪ‍ಡಿಸಿದ್ದಾರೆ.

ಸುದೀಪ್‌ ನಟನೆಯ ಕೋಟಿಗೊಬ್ಬ–3 ಚಿತ್ರವೂ ಇದೇ ತಿಂಗಳು ಬಿಡುಗಡೆಯಾಗಲು ಸಜ್ಜಾಗಿದ್ದು, ಈ ಸಂದರ್ಭದಲ್ಲೇ ಟ್ವೀಟ್‌ ಮಾಡಿರುವ ಅವರು, ‘ಈಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳಿಗೆ ಸರ್ಕಾರದ ಈ ನಿರ್ಧಾರವು ಆಘಾತ ತಂದಿದೆ. ಈ ನಿರ್ಧಾರದ ಹಿಂದೆ ಸೂಕ್ತವಾದ ಕಾರಣವಿರುವುದರಿಂದಾಗಿ, ಇದನ್ನು ಗೌರವಿಸುವುದೂ ನಮ್ಮ ಕರ್ತವ್ಯ. ಈ ಪರಿಸ್ಥಿತಿಯಲ್ಲೂ ಗೆದ್ದುಬರುವ ಶಕ್ತಿಯು ಯುವರತ್ನ ಚಿತ್ರತಂಡಕ್ಕೆ ಸಿಗಲಿ ಎಂದು ನಾನು ಆಶಿಸುತ್ತೇನೆ’ ಎಂದು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಉಡುಪಿ, ಬೀದರ್‌ ಮತ್ತು ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಗರಿಷ್ಠ ಶೇ 50 ವೀಕ್ಷಕರಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿತ್ತು. ಈ ನಿರ್ಧಾರಕ್ಕೆ ನಟ ಪುನೀತ್‌ ರಾಜ್‌ಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರ ನಟನೆಯ ಯುವರತ್ನ ಚಿತ್ರವು ಬಿಡುಗಡೆಯಾಗಿ ಕೇವಲ ಎರಡೇ ದಿನಕ್ಕೆ ಸರ್ಕಾರ ಈ ನಿರ್ಬಂಧ ಹಾಕಿದ್ದ ಕಾರಣ, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.