ADVERTISEMENT

ಚಿತ್ರೋತ್ಸವದಲ್ಲಿ ತುಳು ಸಿನಿಮಾ ಕಡೆಗಣನೆ: ರಾಜೇಂದ್ರ ಸಿಂಗ್ ಬಾಬು

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 1:18 IST
Last Updated 26 ಜನವರಿ 2026, 1:18 IST
ರಾಜೇಂದ್ರ ಸಿಂಗ್ ಬಾಬು 
ರಾಜೇಂದ್ರ ಸಿಂಗ್ ಬಾಬು    

ಪುತ್ತೂರು (ದಕ್ಷಿಣ ಕನ್ನಡ): ‘ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ತುಳು ಚಿತ್ರಗಳನ್ನು ಕಡೆಗಣಿಸಲಾಗಿದ್ದು ಇತರ ಭಾಷೆಯ ಚಿತ್ರಗಳಿಗೆ ಪ್ರೋತ್ಸಾಹ ನೀಡಲಾಗಿದೆ’ ಎಂದು ಚಲನ‌ಚಿತ್ರ ನಿರ್ದೇಶಕ ಎಸ್‌.ವಿ ರಾಜೇಂದ್ರ ಸಿಂಗ್ ಬಾಬು ದೂರಿದ್ದಾರೆ. ಈ ಕುರಿತು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ. 

ಇಲ್ಲಿ ನಡೆದ ಕೋಟಿ– ಚನ್ನಯ ಕಂಬಳದಲ್ಲಿ ಶನಿವಾರ ರಾತ್ರಿ ಪಾಲ್ಗೊಂಡ ಅವರು ಪುತ್ತೂರು ಶಾಸಕ, ಕಾಂಗ್ರೆಸ್‌ನ ಅಶೋಕ್‌ ರೈ ಅವರಿಗೂ ಮನವಿ ಸಲ್ಲಿಸಿ, ತುಳುನಾಡಿನ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಸರ್ಕಾರವನ್ನು ಕೋರಲು ವಿನಂತಿಸಿದ್ದಾರೆ. 

ಈ ಕುರಿತು ಭಾನುವಾರ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕಳೆದ ಬಾರಿ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಎರಡನೆ ಮತ್ತು ಮೂರನೇ ಪ್ರಶಸ್ತಿಗಳನ್ನು ತುಳು ಚಿತ್ರಗಳು ಪಡೆದುಕೊಂಡಿದ್ದವು. ಈ ಬಾರಿ ಒಂದೇ ಒಂದು ತುಳು ಚಿತ್ರವನ್ನು ಪರಿಗಣಿಸಲಿಲ್ಲ. ತುಳುನಾಡಿನ ಅಸ್ಮಿತೆ ಬಿಂಬಿಸುವ ಕಂಬಳದ ಕುರಿತು ನಾನು ನಿರ್ದೇಶಿಸಿದ ಚಿತ್ರವನ್ನು ಸ್ಪರ್ಧೆಗೆ ಕಳುಹಿಸಿದ್ದೆ. ಅದನ್ನೂ ಕಡೆಗಣಿಸಲಾಗಿದೆ’ ಎಂದರು. 

ADVERTISEMENT

ಈ ಬಾರಿ ಚಲನಚಿತ್ರೋತ್ಸವದಲ್ಲಿ ಮಲಯಾಳಂನ 6 ಮತ್ತು ಮರಾಠಿಯ 4 ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಒಂದೇ ಒಂದು ಕನ್ನಡ ಚಿತ್ರವನ್ನು ತೆಗೆದುಕೊಂಡಿದ್ದಾರೆ. ನಮ್ಮದೇ ಪ್ರಾದೇಶಿಕ ಭಾಷೆಯ ಚಿತ್ರವನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದು ನಮ್ಮ ನಾಡಿನಲ್ಲಿ ನಾವೇ ಅನಾಥರಾಗುವಂತೆ ಮಾಡುವ ಸ್ಥಿತಿ ಎಂದರು.

‘ಕಂಬಳ’ ಫೆಬ್ರುವರಿಯಲ್ಲಿ ಬಿಡುಗಡೆ

ಕಂಬಳದ ಕುರಿತು ತಾವು ನಿರ್ದೇಶಿಸಿದ ತುಳು ಚಿತ್ರವನ್ನು ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಾಜೇಂದ್ರ ಸಿಂಗ್ ಬಾಬು ತಿಳಿಸಿದರು. ‘ಚಿತ್ರ ಪೂರ್ತಿಯಾಗಿದೆ. ಸೆನ್ಸಾರ್ ಮಂಡಳಿಯಿಂದ ಅನುಮತಿಯೂ ಸಿಕ್ಕಿದೆ. ತುಳುನಾಡಿನಲ್ಲಿ ಕಂಬಳಕ್ಕೆ ದೈವಿಕ ಸ್ಥಾನ ನೀಡುತ್ತಾರೆ. ಅದನ್ನು ಸಿನಿಮಾದಲ್ಲಿ ಬಿಂಬಿಸಲಾಗಿದೆ. ಚಿತ್ರ ಇಂಗ್ಲಿಷ್‌ಗೆ ಡಬ್ಬಿಂಗ್ ಆಗಿ ಕಂಬಳ ಏನೆಂದು ವಿಶ್ವಕ್ಕೇ ಪರಿಚಯಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.