ADVERTISEMENT

ಡಿ.24ಕ್ಕೆ ಶಸ್ತ್ರಚಿಕಿತ್ಸೆ, ಅದರ ಮೊದಲು ‘ಯುಐ’ ನೋಡುವೆ: ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 9:58 IST
Last Updated 17 ಡಿಸೆಂಬರ್ 2024, 9:58 IST
ಉಪೇಂದ್ರ, ವಿಜಯ್‌, ಶಿವರಾಜ್‌ಕುಮಾರ್‌, ಧನಂಜಯ 
ಉಪೇಂದ್ರ, ವಿಜಯ್‌, ಶಿವರಾಜ್‌ಕುಮಾರ್‌, ಧನಂಜಯ    

ಬೆಂಗಳೂರು: ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ, ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ಡಿ.20ರಂದು ಬಿಡುಗಡೆಯಾಗುತ್ತಿದೆ. ಸಿನಿಮಾದ ಪ್ರಿರಿಲೀಸ್‌ ಕಾರ್ಯಕ್ರಮ ಸೋಮವಾರ(ಡಿ.16) ನಡೆಯಿತು. ನಟರಾದ ಶಿವರಾಜ್‌ಕುಮಾರ್‌, ‘ದುನಿಯಾ’ ವಿಜಯ್‌, ‘ಡಾಲಿ’ ಧನಂಜಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಈ ವೇಳೆ ಮಾತನಾಡಿದ ಶಿವರಾಜ್‌ಕುಮಾರ್‌, ‘ಡಿ.24ಕ್ಕೆ ನನಗೆ ಶಸ್ತ್ರಚಿಕಿತ್ಸೆಯಿದೆ. ಡಿ.20ರಂದು ಅಮೆರಿಕದಲ್ಲಿದ್ದುಕೊಂಡೇ ‘ಯುಐ’ ಸಿನಿಮಾ ನೋಡುತ್ತೇನೆ’ ಎಂದಿದ್ದಾರೆ.  

ಶಿವರಾಜ್‌ಕುಮಾರ್‌ ಅವರು ಅನಾರೋಗ್ಯದ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಗಾಗಿ ಒಂದೆರಡು ದಿನಗಳಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ. ಜನವರಿ ಅಂತ್ಯಕ್ಕೆ ಅಮೆರಿಕದಿಂದ ವಾಪಾಸಾಗುವುದಾಗಿ ಇತ್ತೀಚೆಗೆ ಶಿವರಾಜ್‌ಕುಮಾರ್‌ ತಿಳಿಸಿದ್ದರು.  

ADVERTISEMENT

‘ಉಪೇಂದ್ರ ನನ್ನ ಮೊದಲ ಡಾರ್ಲಿಂಗ್‌. ಪಲ್ಲವಿ ಥಿಯೇಟರ್‌ನಲ್ಲಿ ಉಪೇಂದ್ರ ಅವರ ‘ಶ್‌’ ಸಿನಿಮಾದ ಪ್ರೀಮಿಯರ್‌ ನೋಡಿದ್ದು ಇಂದಿಗೂ ಜ್ಞಾಪಕವಿದೆ. ಬಳಿಕ ‘ಓಂ’ ಸಿನಿಮಾ ಬಂತು. ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಮಣಿರತ್ನಂ ಮೀರಿಸುವ ನಿರ್ದೇಶಕ ಇವರು ಎಂದು ಹೇಳಿದ್ದೆ. ‘ಓಂ’ ಸಿನಿಮಾ ಭಿನ್ನವಾಗಿ ಬರಲಿದೆ ಎಂದು ಆವಾಗಲೇ ಹೇಳಿದ್ದೆ. ‘ಓಂ’ ಬೇರೆ ಜಾನರ್‌ನ ಸಿನಿಮಾ ಎಂದೆನಿಸಿತ್ತು. ‘ಮೋಡದ ಮರೆಯಲಿ’ ಎಂಬ ಸಿನಿಮಾ ಮಾಡಿದ್ದೆ. ಅದೊಂದು ಸ್ಟೈಲ್‌ ಇತ್ತು. ಆದರೆ ‘ಓಂ’ನಲ್ಲಿ ಬೇರೆ ರೀತಿಯ ಪಾತ್ರವೇ ಇತ್ತು. ಉಪೇಂದ್ರ ಅವರ ಜೊತೆಯಲ್ಲಿ ‘ಪ್ರೀತ್ಸೆ’, ‘ಲವಕುಶ’ ಸಿನಿಮಾ ಮಾಡಿದ್ದೇನೆ. ಇದೀಗ ‘45’ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದೇವೆ. ಉಪೇಂದ್ರ ಸಿನಿಮಾ ಎಂದರೆ ನನಗೂ ನೋಡುವ ಕುತೂಹಲವಿದೆ. ಅವರ ಸಿನಿಮಾಗಳಲ್ಲೊಂದು ವಿಶೇಷತೆ ಇರುತ್ತದೆ. ಅಪ್ಪು, ಉಪೇಂದ್ರ ಅವರು ಯಾವ ಸಿನಿಮಾ ಮಾಡಿದರೂ ನನಗೆ ಇಷ್ಟವಾಗುತ್ತದೆ. ಒಬ್ಬರನ್ನು ಪ್ರೀತಿಸಿದಾಗಲೇ ಈ ರೀತಿ ಅನಿಸಲು ಸಾಧ್ಯ. ಅಭಿಮಾನಿಗಳು ಇಂದು ಅಭಿಮಾನದಿಂದ ಸಿನಿಮಾ ನೋಡಬೇಕು. ಅದು ನಟರ ಮೇಲೆ ಅವರು ತೋರಿಸುವ ಗೌರವವಾಗುತ್ತದೆ. ಉಪೇಂದ್ರ ತೆರೆಯಲ್ಲಿ ಮ್ಯಾಜಿಕ್‌ ತರುತ್ತಾರೆ. ಅವರು ಇಡೀ ಭಾರತದಲ್ಲೇ ಒಬ್ಬ ಅತ್ಯುತ್ತಮ ನಿರ್ದೇಶಕ. ಅವರು ‘ಓಂ–2’ ಮಾಡಲಿ ಎಂದು ನಾನು ಕಾಯುತ್ತಿದ್ದೇನೆ. ಕನ್ನಡ ಸಿನಿಮಾ ಚೆನ್ನಾಗಿರಬೇಕು. ಅದಕ್ಕಾಗಿ ಎಲ್ಲರಿಗೂ ಬೆಂಬಲ ನೀಡುತ್ತೇನೆ’ ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ. 

ಉಪೇಂದ್ರ ಮಾತನಾಡಿ, ‘ಅಣ್ಣಾವ್ರು ಬಂಗಾರದ ಮನುಷ್ಯ ಆದರೆ ಶಿವರಾಜ್‌ಕುಮಾರ್‌ ಅಪರಂಜಿ. ನಿಮ್ಮಿಂದ ಬ್ರೇಕ್‌ ತೆಗೆದುಕೊಂಡವರು ಅದೆಷ್ಟೋ ಜನರಿದ್ದಾರೆ ಈ ಇಂಡಸ್ಟ್ರಿಯಲ್ಲಿ. ಹೀಗಾಗಿ ಶಿವರಾಜ್‌ಕುಮಾರ್‌ ಅವರು ಹೀರೊ ಆಗಿಯೇ ಇರಬೇಕು. ಶಿವರಾಜ್‌ಕುಮಾರ್‌ ಅವರು ನಿರ್ದೇಶನಕ್ಕೆ ಇಳಿಯಬಾರದು. ಅವರು ನೂರು ವರ್ಷ ಇರಲಿದ್ದಾರೆ, ಆವಾಗ ಅವರ ಜೊತೆಗೊಂದು ಸಿನಿಮಾ ಮಾಡುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.