ADVERTISEMENT

ಹುಸಿ ಚಿಂತನೆಗಳ ಮಾರುಕಟ್ಟೆಯಲ್ಲಿ ಮಾತುಗಳ ಆತ್ಮದ್ರೋಹ

ಟಿ ಬಿ.ಶ್ರೀಪಾದ ಭಟ್ಟ
Published 24 ನವೆಂಬರ್ 2018, 19:30 IST
Last Updated 24 ನವೆಂಬರ್ 2018, 19:30 IST
usisis gaze
usisis gaze   

ಆತ ಗ್ರೀಕ್ ಸಿನಿಮಾ ನಿರ್ದೇಶಕ. ಕಳೆದ 35 ವರ್ಷಗಳಿಂದ ತನ್ನ ಗ್ರೀಕ್ ದೇಶವನ್ನು ತೊರೆದು ಅಮೆರಿಕದಲ್ಲಿ ನೆಲೆಸಿದ್ದ. ಹಾಲಿವುಡ್‌ನಲ್ಲಿ ಸಿನಿಮಾಗಳನ್ನು ತಯಾರಿಸಿದ್ದ, ನಿರ್ದೇಶಿಸಿದ್ದ. ಆ ನಿರ್ದೇಶಕನ ಹೆಸರು ‘A’.

35 ವರ್ಷಗಳ ನಂತರ ತನ್ನ ಅತ್ಯಂತ ವಿವಾದಗ್ರಸ್ತ ಸಿನಿಮಾದ ಪ್ರದರ್ಶನಕ್ಕಾಗಿ ತವರುನೆಲ ಗ್ರೀಕ್‌ಗೆ ಮರಳಿದ್ದ. ಆದರೆ ನಿರ್ದೇಶಕ ‘A’ನ ಉದ್ದೇಶ ಬೇರೆಯದಾಗಿತ್ತು. ಸಿನಿಮಾ ಎನ್ನುವ ಮಾಂತ್ರಿಕತೆಯ ಪ್ರಾರಂಭದ ದಿನಗಳ ಸಂದರ್ಭದಲ್ಲಿ ಅಂದರೆ ಸುಮಾರು 1905ರಲ್ಲಿ ಛಾಯಾಗ್ರಾಹಕರಾದ ಮನಕಿಯಾ ಸಹೋದರರು ಬಾಲ್ಕನ್ ಪ್ರದೇಶಕ್ಕೆ (ಪೂರ್ವ ಸೈಬೀರಿಯಾದ ಪರ್ವತ ಪ್ರದೇಶಗಳಿಂದ ಪೂರ್ವ ಬಲ್ಗೇರಿಯಾದ ಕಪ್ಪು ಸಮುದ್ರದವರೆಗೆ) ದೇಶಾಂತರ ಹೋಗಿ ಅಲ್ಲಿನ ಸಂಸ್ಕೃತಿ, ಸ್ಥಳೀಯ ಜನಾಂಗದ ಆಚರಣೆಗಳು, ಮೂಲ ನಿವಾಸಿಗಳ ಬದುಕಿನ ಕುರಿತಾಗಿ 3 ರೀಲುಗಳ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ಈ 3 ರೀಲುಗಳ ಸಿನಿಮಾ ಕಣ್ಮರೆಯಾಗಿತ್ತು. ಆದರೆ ಎಂದೂ ಬೆಳಕಿಗೆ ಬಾರದ ಈ ನಿಗೂಢ ರೀಲುಗಳ ತಲಾಶೆಗಾಗಿ ಗ್ರೀಕ್ ನಿರ್ದೇಶಕ ‘A’ ತನ್ನ ತಾಯ್ನಾಡಿಗೆ ಮರಳಿ ಬಂದಿದ್ದ. ಮನಕಿಯಾ ಸೋದರರು ಚಿತ್ರೀಕರಿಸಿದ ಆ 3 ರೀಲುಗಳಲ್ಲಿ ಏನು ಅಡಗಿದೆ? ಅಂತಹ ಜನಾಂಗೀಯ ಘರ್ಷಣೆಗಳಿದ್ದ ಬಾಲ್ಕನ್ ಪ್ರದೇಶಕ್ಕೆ ಅಪಾಯಕಾರಿಯಾದ ಪಯಣವನ್ನು ಕೈಗೊಂಡಿರುವ ಉದ್ದೇಶ ಅಲ್ಲಿನ ಮೂಲನಿವಾಸಿಗಳ ಬದುಕನ್ನು ಚಿತ್ರೀಕರಿಸುವುದು ಮಾತ್ರವಾಗಿತ್ತೆ?

ಕಡೆಗೆ ಮನಕಿಯಾ ಸೋದರರ ಈ 3 ರೀಲುಗಳ ಸಿನಿಮಾದ ಹುಡುಕಾಟಕ್ಕೆ ಹೊರಡುವ ನಿರ್ದೇಶಕ ‘A’ ಗ್ರೀಕ್‌ನಿಂದ ತನ್ನ ಪ್ರಯಾಣ ಆರಂಭಿಸುತ್ತಾನೆ. ಅಲ್ಲಿಂದ ಅಲ್ಬೇನಿಯಾದ ಗಡಿಭಾಗಕ್ಕೆ ತಲಪುತ್ತಾನೆ. ನಂತರ ಹಡಗಿನ ಮೂಲಕ ಸರಜೀವೋ ಪ್ರಾಂತ್ಯ ತಲುಪುತ್ತಾನೆ. ಆದರೆ ಅಲ್ಬೇನಿಯನ್, ಬೋಸ್ನಿಯನ್, ಬಲ್ಗೇರಿಯನ್, ಕ್ರೊವೆಶಿಯನ್, ಗ್ರೀಕ್ಸ್, ಸ್ಲೋವಿಯನ್ಸ್, ಸೆರ್ಬಿಯನ್ಸ್, ರೊಮಾನಿಯನ್ಸ್ ಹೀಗೆ ವಿಭಿನ್ನ ಜನಾಂಗಗಳನ್ನೊಳಗೊಂಡ ಇಡೀ ಬಾಲ್ಕನ್ ಪೆನಿನ್ಸುಲಾ ಪ್ರಾಂತ್ಯವು ಜನಾಂಗೀಯ ಯುದ್ಧದಲ್ಲಿ ಮುಳುಗಿ ಹೋಗಿರುತ್ತದೆ. ಇಡೀ ಪ್ರಾಂತ್ಯವನ್ನೇ ಅಪಾಯಕಾರಿ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಇಂತಹ ಭೀಕರ ಜನಾಂಗೀಯ ಯುದ್ಧದ ಸಂದರ್ಭದಲ್ಲಿ, ಪ್ರತಿ ಕ್ಷಣಕ್ಕೂ ಪ್ರಾಣಾಪಾಯವಿರುವ ಪ್ರದೇಶಕ್ಕೆ ನಿರ್ದೇಶಕ ‘A’ ಬಂದು ತಲುಪುತ್ತಾನೆ. ಇದು ಗ್ರೀಕ್ ನಿರ್ದೇಶಕ ಅಂಜೆಲೋಪೋಲಸ್‌ನನಿರ್ದೇಶನದ ‘Ulysses Gaze’ನ ಸ್ಥೂಲ ಕಥೆ.

ADVERTISEMENT

ಆದರೆ ಈ ನಿರ್ದೇಶಕ ‘A’ ಬಾಲ್ಕನ್ ಪ್ರದೇಶಕ್ಕೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಒಂದು ಫ್ಲ್ಯಾಶ್‌ಬ್ಯಾಕ್ ಬರುತ್ತದೆ. ಅದು 1945ರ ಸಂದರ್ಭ. ನಿರ್ದೇಶಕ ‘A’ನ ಬೆಲ್‌ಗ್ರೇಡ್ ಸ್ನೇಹಿತ ಹೇಳುತ್ತಾನೆ– ‘ನಾವು ಒಂದು ಜಗತ್ತಿನಲ್ಲಿ ಗಾಢ ನಿದ್ರೆಗೆ ಜಾರಿಕೊಳ್ಳುತ್ತೇವೆ ಮತ್ತು ಮತ್ತೊಂದು ಜಗತ್ತಿನಲ್ಲಿ ನಮ್ಮನ್ನು ಅತ್ಯಂತ ಒರಟಾಗಿ ಎಚ್ಚರಿಸಲಾಗುತ್ತದೆ’. ಇದು ‘Ulysses Gaze’ ಸಿನಿಮಾದ ಭಾಷ್ಯವನ್ನು ಹೇಳುತ್ತದೆ ಎಂದೆನಿಸುತ್ತದೆ. ಏಕೆಂದರೆ ನಿರ್ದೇಶಕ ‘A’ ಯಾತಕ್ಕಾಗಿ ತನ್ನ ಜೀವದ ಹಂಗನ್ನು ತೊರೆದು ಕಳೆದು ಹೋದ ಆ ನಿಗೂಢ 3 ರೀಲುಗಳ ಸಿನಿಮಾದ ಹುಡುಕಾಟಕ್ಕೆ ಬರುತ್ತಾನೆ? ಆತನಿಗೆ 20ನೇ ಶತಮಾನದ ಆರಂಭದಲ್ಲಿ ಬದುಕಿದ್ದ ಇದೇ ಬಾಲ್ಕನ್ ಪ್ರಾಂತದ ಮೂಲ ನಿವಾಸಿಗಳ ಮನದ ಮಾತುಗಳನ್ನು ಅರಿತುಕೊಳ್ಳುವ ತವಕ. ಎಂಬತ್ತು ವರ್ಷಗಳ ನಂತರ ಇಂದು ವಿಭಿನ್ನ ಜನಾಂಗಗಳ ಪ್ರಾಂತವಾದ ಬಾಲ್ಕನ್ ಪೆನಿನ್ಸುಲಾದಲ್ಲಿ ಜನಾಂಗೀಯ ಘರ್ಷಣೆಗಳಾಗುತ್ತಿವೆ. ಪರಸ್ಪರ ಕಾದಾಡುತ್ತಿದ್ದಾರೆ. ಜನಾಂಗದ ಶ್ರೇಷ್ಠತೆಯ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಆದರೆ ಇವರ ಮೂಲ ನಿವಾಸಿಗಳು ಎಂಬತ್ತು ವರ್ಷಗಳ ಹಿಂದೆ ಏನು ಮಾತನಾಡಿದ್ದರು? ಇದು ಒಬ್ಬ ಕ್ರಿಯಾಶೀಲ ನಿರ್ದೇಶಕನನ್ನು ಗಾಢವಾಗಿ ಕಾಡುತ್ತದೆ. ಹಾಗೆಯೇ ನಿರ್ದೇಶಕ ‘A’ಗೂ ಕಾಡುತ್ತದೆ.

ಲೆನಿನ್‌ನ ಭಗ್ನಪ್ರತಿಮೆ

ಇಡೀ ಸಿನಿಮಾದ ಅವಧಿ ಸುಮಾರು ಮೂರು ತಾಸುಗಳು. ಇಡೀ ಸಿನಿಮಾದ ದಟ್ಟತೆಗೆ ಈ ಅವಧಿ ತುಂಬಾ ದೀರ್ಘವೆನಿಸುತ್ತದೆ. ಅನೇಕ ವೇಳೆ ಪ್ರೇಕ್ಷಕನ ಸಹನೆಯನ್ನು ಪರೀಕ್ಷಿಸುತ್ತದೆ. ಹೋಮರನ ಕಾವ್ಯದ ಓಡೆಶಿಯಸ್ ಟ್ರಾಯ್ ಯದ್ಧದ ಹತ್ತು ವರ್ಷಗಳ ನಂತರ ತನ್ನ ತವರಿಗೆ ಮರಳುತ್ತಾನೆ. ಓಡೆಶಿಯಸ್‌ನ ಈ ಪಯಣವನ್ನು ‘ಯುಲಿಸಿಸ್‌ ಗೇಜ್‌’ ಸಿನಿಮಾದಲ್ಲಿ ಪ್ರತಿನಿಧಿಸುತ್ತಲೇ ನಿರ್ದೇಶಕ ಅಂಜೆಲೋಪೋಲಸ್ ಕೇವಲ ಗತಕಾಲದ ಹುಡುಕಾಟದಲ್ಲಿ ಮಾತ್ರ ತೊಡಗುವುದಿಲ್ಲ, ಆ 3 ರೀಲುಗಳ ಸಿನಿಮಾದ ಮೂಲಕ ಬಾಲ್ಕನ್ ಪೆನಿನ್ಸುಲಾದ ಸ್ಥಳೀಯ ಜನಾಂಗೀಯ ಗುಂಪುಗಳ ಮೂಲ ನಿವಾಸಿಗಳ ಮುಗ್ಧತೆ, ಅವರ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ರಕ್ಷಣೆ ಇಲ್ಲದ ಅಪಾಯಕಾರಿ ಯುದ್ಧನಿರತ ಪ್ರಾಂತ ತಲುಪುತ್ತಾನೆ.

ಸಿನಿಮಾದಲ್ಲಿ ನಿರ್ದೇಶಕ ‘A’ ತನ್ನ ಹುಡುಕಾಟದ ಕುರಿತಾಗಿ ಈ ಪ್ರಾಂತದ ಘರ್ಷಣೆಗಳು, ಸಂದಿಗ್ಧ, ತಲ್ಲಣಗಳು, ವಿರೋಧಾಭಾಸಗಳು ಮನಕಿಯಾ ಸೋದರರ 3 ರೀಲುಗಳ ಸಿನಿಮಾದಲ್ಲಿ ಹೇಳಲಾಗಿದೆ ಎಂದು ಹೇಳುತ್ತಾನೆ. ಅಲ್ಬೇನಿಯಾ, ರೊಮೇನಿಯಾ, ಸ್ಲೋವಿಯಾ ಪ್ರಾಂತಗಳಲ್ಲಿ ಹಾದುಹೋಗುವಾಗ ಆ ಯುದ್ಧದ ಸಾವುಗಳು, ಜನಾಂಗೀಯ ದಾಯಾದಿ ಕಲಹಗಳು ಅಲ್ಲಿನ ಮೂಲ ನಿವಾಸಿಗಳ ಕನಸುಗಳನ್ನು ನಾಶಗೊಳಿಸುತ್ತಿರಬಹುದೆ? ಆ ಮೂಲ ನಿವಾಸಿಗಳ ಕನಸುಗಳನ್ನು, ಬದುಕಿನ ಆಶಯಗಳನ್ನು ಅರಿಯಲು ಆ 3 ರೀಲಿನ ಸಿನಿಮಾಗಳ ಅವಶ್ಯಕತೆ ಇದೆ. ಈ ಎಲ್ಲಾ ಬಿಡಿ ಬಿಡಿಯಾದ ಆಯಾಮಗಳನ್ನು ಒಂದೇ ಎಳೆಯಲ್ಲಿ ಜೋಡಿಸಲು ಹೊರಟ ನಿರ್ದೇಶಕ ಅಂಜೆಲೋಪೋಲಸ್ ಇದನ್ನು ಅತ್ಯಂತ ಕಾವ್ಯಾತ್ಮಕವಾಗಿ ಅನೇಕ ರೂಪಕಗಳಲ್ಲಿ ಹೇಳುತ್ತಾನೆ. ಒಂದು ದೃಶ್ಯದಲ್ಲಿ ದೇಹದಿಂದ ಬೇರ್ಪಟ್ಟ ಲೆನಿನ್‌ನ ತಲೆಯ ಭಾಗ ಮತ್ತು ದೇಹವನ್ನು ಹಡಗಿನಲ್ಲಿ ಮಲಗಿಸಿ ಸಾಗಿಸುತ್ತಾರೆ. ಎಲ್ಲಿಗೆ ಮತ್ತು ಯಾವ ದಿಕ್ಕಿಗೆ ಎಂದು ಗೊತ್ತಾಗುವುದಿಲ್ಲ. ಇದು ಸೋವಿಯತ್ ಛಿದ್ರಗೊಳ್ಳುತ್ತಿರುವ ಸಂದರ್ಭ. ಸೈಬೀರಿಯಾದ ಇಡೀ ಪ್ರಾಂತವೇ ಗಲಭೆಗ್ರಸ್ತವಾಗಿದೆ. ಭಗ್ನಗೊಂಡ ಲೆನಿನ್‌ನ ಭವ್ಯ ವಿಗ್ರಹವನ್ನು ಹಡಗಿನಲ್ಲಿ ಸಾಗಿಸುವ ದೃಶ್ಯ ಪರಿಣಾಮಕಾರಿಯಾಗಿದೆ.

ಚಿಂತನೆಗಳ ತಗಲೂಫಿತನ
ಗರಿಕೆ ಹುಲ್ಲನ್ನು ಕೂಡ ಬೆಳೆಯಲು ಬಿಡದ ಮನುಷ್ಯ ಮೂಲಭೂತವಾಗಿ ಈವಿಲ್ ಎಂದು ಲಂಕೇಶ್ ಹೇಳಿದ್ದರು. ತನ್ನ ಸ್ವಾರ್ಥ ಮತ್ತು ಸ್ವಹಿತಾಸಕ್ತಿಗಾಗಿ ತನ್ನವರ ಕತ್ತನ್ನು ತಾನೇ ಸೀಳುವ ಹಂತಕ್ಕೆ ತಲಪುವ ಸ್ಥಿತಿಯನ್ನು ಸ್ವತಂತ್ರ ಪ್ರವೃತ್ತಿ ಎಂದು ಕರೆಯುವ ಚಿಂತಕ ಗ್ರಾಮ್ಷಿ ಮುಂದೆ ಇದನ್ನು ತನ್ನ ಮೂಲ ಹುಟ್ಟಿನ ನೆಲೆಯಿಂದ ಬಿಡುಗಡೆಗೊಂಡು ತಾನು ಮಾತ್ರ ಬಚಾವಾಗುವ ಪ್ರವೃತ್ತಿ ಎಂದು ಹೇಳುತ್ತಾನೆ. ಈ ಹುಟ್ಟಿನ ಮೂಲವನ್ನು ಹೇಳುವ ಮೂಲನಿವಾಸಿಗಳ ಮಾತುಗಳನ್ನು ಕೇಳುವ ವ್ಯವಧಾನ ನಮ್ಮಲ್ಲಿ ಎಲ್ಲಿದೆ? ತಳ ಸಮುದಾಯಗಳ ಪರವಾಗಿ ಅಕಡೆಮಿಕ್ ಭಾಷೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಮೂಲನಿವಾಸಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನಮ್ಮ ಪಾಂಡಿತ್ಯದ ಪ್ರದರ್ಶನ ಮಾತ್ರ ಅನಾವರಣಗೊಳ್ಳುತ್ತಿರುತ್ತದೆ. ಈ ನೆಲದ ಮಕ್ಕಳ, ಇಲ್ಲಿನ ಮೂಲನಿವಾಸಿಗಳ ಒಳಗುದಿಯನ್ನು ಆಲಿಸಲು ಸದಾ ನಿರಾಕರಿಸುವ ನಾವೆಲ್ಲ ಕೇವಲ ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳ ಮೂಲಕ ನಮ್ಮ ಪಾಂಡಿತ್ಯವನ್ನು ರೂಪಿಸಿಕೊಂಡಿರುತ್ತೇವೆ.

ನವ ಉದಾರೀಕರಣದ ಸಂದರ್ಭದಲ್ಲಿ ಮುಕ್ತ ಮಾರುಕಟ್ಟೆಯ ಫಲಾನುಭವಿಗಳಾದ ನಮ್ಮೆಲ್ಲರ ಸಂವೇದನೆಗಳು ಕ್ಷೀಣಿಸುತ್ತಾ ಹೋಗುತ್ತವೆ. ಸಂವಹನದ ಮಾರ್ಗಗಳು ಕೈಕೊಡುತ್ತವೆ. ನಮ್ಮ ಪ್ರಸ್ತುತತೆಯನ್ನು ಗಟ್ಟಿಗೊಳಿಸಿಕೊಳ್ಳಲು ಮೂಲ ನಿವಾಸಿಗಳನ್ನು ವಿಸ್ಮೃತಿಗೆ ತಳ್ಳಲೂ ಹೇಸದ ಸುಸಂಸ್ಕೃತ ನಾಗರಿಕ ಸಮಾಜವು ಅವರ ಸಂಸ್ಕೃತಿಯ ಪರವಾಗಿ ಕಿರುಚುವುದನ್ನು ನಿಲ್ಲಿಸುವುದಿಲ್ಲ. ಕಣ್ಣಿನ ಪಟ್ಟಿಯನ್ನು ಕಳಚಿಕೊಂಡಿದ್ದೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ‘ನಿಮ್ಮ ಕತ್ತಲನ್ನು ಓಡಿಸುತ್ತೇವೆ’ ಎಂದು ವ್ಯವಸ್ಥೆಯಲ್ಲಿನ ಅವಮಾನಿತ ತಳ ಸಮುದಾಯಗಳಿಗೆ ಆಶ್ವಾಸನೆ ಕೊಡುತ್ತೇವೆ. ಆದರೆ ಸ್ವತಃ ಬೆಳಕನ್ನು ಹಿಡಿದು ನಿಂತ ಮೂಲ ನಿವಾಸಿಗಳನ್ನು ಒದ್ದು ಗೋಳೀಕರಣದ ಗ್ಲೋಬಲ್‌ಗೆ ಜಿಗಿಯುತ್ತೇವೆ.

ಚಾರಿತ್ರಿಕ ದೃಷ್ಟಿಕೋನದಿಂದ ನೋಡಲು ನಿರಾಕರಿಸುವ ನಾವೆಲ್ಲ ಮೂಲ ನಿವಾಸಿಗಳ ಅಂತರಂಗದ ಹತ್ತಿರಕ್ಕೂ ಸುಳಿಯುವಲ್ಲಿ ಸೋಲುತ್ತೇವೆ. ನಮ್ಮೆಲ್ಲರಿಗೂ ಆ ಮೂರು ರೀಲುಗಳ ಸಿನಿಮಾದಲ್ಲಿ ಬಾಲ್ಕನ್ ಪ್ರಾಂತದ ಮೂಲನಿವಾಸಿಗಳು ಏನು ಮಾತನಾಡುತ್ತಿದ್ದಾರೆ, ಅವರ ಸಂವೇದನೆಗಳೇನು ಎಂದು ಅರಿಯುವ ವ್ಯವಧಾನವೇ ಇಲ್ಲ. 80 ವರ್ಷಗಳ ಹಿಂದೆ ಅವರ ಮಾತನಾಡುವ ನುಡಿಕಟ್ಟಿಗೂ ನಮ್ಮ ಇಂದಿನ ಸಂದರ್ಭಕ್ಕೂ ಇರುವ ಕನೆಕ್ಷನ್ ಕುರಿತಾದ ಸೋಜಿಗವೂ ನಮ್ಮಲ್ಲಿ ಉಳಿದಿಲ್ಲ. ಹೀಗಾಗಿಯೇ ನಿರ್ದೇಶಕ ‘A’ ದೇಶಭ್ರಷ್ಟನಾಗಿ, ಪ್ರಾಣವನ್ನು ಪಣಕ್ಕಿಟ್ಟು ಆ ಮೂಲನಿವಾಸಿಗಳ ಸಂವೇದನೆಯನ್ನು ಹೇಳುವ ಸಿನಿಮಾ ರೀಲುಗಳಿಗಾಗಿ ಯುದ್ಧಭೂಮಿಯಲ್ಲಿ ಅಲೆಯುವುದು ನಮಗೆಲ್ಲ ಒಂದು ಹುಚ್ಚಾಟದಂತೆಯೇ ಭಾಸವಾಗುತ್ತದೆ. ಏಕೆಂದರೆ ನಾಗರಿಕ ಸಮಾಜಕ್ಕೆ ನಡೆಕಾರನ ನಡೆಗಳು ಮತ್ತು ಬದುಕು ಸದಾ ಅಪಥ್ಯ. ಎಲ್ಲವನ್ನೂ ತಲಸ್ಪರ್ಶಿಯಾಗಿಯೇ ನೋಡುತ್ತೇವೆ ಎನ್ನುವ ಭ್ರಮೆಯಲ್ಲಿರುವ ನಾವೆಲ್ಲ ಚಾರಿತ್ರಿಕ ಕುರೂಪಗಳನ್ನು ಅರ್ಥ ಮಾಡಿಕೊಂಡಿರುವುದಿಲ್ಲ ಅಥವಾ ನಮ್ಮ ಪ್ರಜ್ಞೆಯನ್ನು ವಿಸ್ಮೃತಿಗೆ ತಳ್ಳಿರುತ್ತೇವೆ.

ಮನಕಿಯಾ ಸಹೋದರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.