ಜಿ.ಮನೋಹರನ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ಡಿ.20ರಂದು ಬಿಡುಗಡೆಯಾಗುತ್ತಿದೆ. ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡ ‘ವಾರ್ನರ್’ ಎಂಬ ವಿಡಿಯೊ ರಿಲೀಸ್ ಮಾಡಿದ್ದು 2040ರ ಕಾಲಘಟ್ಟದ ‘ಡಿಸ್ಟೋಪಿಅ’– ಎಂದರೆ ನರಕಸದೃಶವಾದ ಒಂದು ಪ್ರಪಂಚಕ್ಕೆ ಕರೆದೊಯ್ದಿದ್ದಾರೆ.
‘ವಾರ್ನರ್’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪೇಂದ್ರ, ‘‘ಸೂಪರ್’ ಸಿನಿಮಾಗೂ ‘ಯುಐ’ಗೂ ಯಾವುದೇ ಸಂಬಂಧವಿಲ್ಲ. ‘ಯುಐ’ ಸಿನಿಮಾ ರೂಪಕಗಳಿಂದ ಕೂಡಿದೆ. ಸಾಮಾನ್ಯ ಕಮರ್ಷಿಯಲ್ ಸಿನಿಮಾದಂತೆ ಈ ಸಿನಿಮಾವನ್ನು ನೋಡಿ ಮನರಂಜನೆ ಪಡೆದುಕೊಳ್ಳಬಹುದು. ಆದರೆ ಸಿನಿಮಾದೊಳಗೆ ಸೂಕ್ಷ್ಮವಾದ ಹಲವು ಪದರಗಳು ಇವೆ. ಅರ್ಥವಾಗಬೇಕಾದ ಹಲವು ವಿಷಯಗಳು ಇವೆ. ಇದನ್ನು ಗಮನಿಸುವ ಸಾಮರ್ಥ್ಯ ಪ್ರೇಕ್ಷಕನೊಳಗಿರಬೇಕು. ‘ಯುಐ’ ಒಂದು ಹೀರೊ ಕಥೆ ಅಲ್ಲ, ಇದು ನಮ್ಮ ನಿಮ್ಮ ಕಥೆ’ ಎಂದರು.
‘ಯುಐ’ ಬಿಡುಗಡೆಯಾದ ಒಂದು ವಾರದಲ್ಲೇ ‘ಮ್ಯಾಕ್ಸ್’ ಬಿಡುಗಡೆ ಕುರಿತು ಪ್ರತಿಕ್ರಿಯೆ ನೀಡಿದ ಉಪೇಂದ್ರ, ‘ರಜಾ ದಿನಗಳನ್ನು ಎಲ್ಲರೂ ಬಯಸುತ್ತಾರೆ. ಏಕೆಂದರೆ ಆ ಸಮಯದಲ್ಲಿ ಜಾಸ್ತಿ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಈ ಅವಧಿಯಲ್ಲೇ ದೊಡ್ಡ ಸಿನಿಮಾಗಳು ಬರುತ್ತವೆ. ರಜಾ ದಿನಗಳು ನಿರ್ಮಾಪಕರಿಗೆ ಒಂದು ರೀತಿ ಧೈರ್ಯ ನೀಡುತ್ತವೆ. ಎರಡು ಮೂರು ಸಿನಿಮಾಗಳು ಬಿಡುಗಡೆಯಾದರೂ ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.