ADVERTISEMENT

ಭೂಗತ ದೊರೆಯಾಗಿ ಉಪ್ಪಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:30 IST
Last Updated 21 ನವೆಂಬರ್ 2019, 19:30 IST
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ   

ಈ ಗ ಸ್ಯಾಂಡಲ್‌ವುಡ್‌ನಲ್ಲೂ ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರ ಶುರುವಾಗಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಏಳು ಭಾಷೆಗಳಲ್ಲಿ ಮೂಡಿಬರಲಿದೆ.ಉಪೇಂದ್ರ ಮತ್ತು ಆರ್‌.ಚಂದ್ರು ಕಾಂಬಿನೇಷನ್‌ನಲ್ಲಿ ಬಂದಿರುವ ‘ಬ್ರಹ್ಮ’ ಮತ್ತು ‘ಐ ಲವ್ ಯು’ ಸಿನಿಮಾಗಳು ಯಶಸ್ಸು ಕಂಡಿದ್ದು, ಇದೇ ಹುರುಪಿನಲ್ಲಿ ಚಂದ್ರು, ಉಪೇಂದ್ರ ಜತೆಗೆ ಮೂರನೇ ಸಿನಿಮಾವಾಗಿ ‘ಕಬ್ಜ’ ಕೈಗೆತ್ತಿಕೊಂಡಿದ್ದಾರೆ.

ಈ ಅದ್ದೂರಿ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು. ನಟ ಶಿವರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದರು.

‘ಕಬ್ಜ’ ಎಂದರೆ ಹಿಡಿದಿಟ್ಟುಕೊಳ್ಳುವುದು ಅಥವಾ ವಶಪಡಿಸಿಕೊಳ್ಳುವುದು ಎಂದರ್ಥ. ಭೂಗತಲೋಕದ ಕಥೆ ಆಧರಿಸಿದ ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿ ನಟಿಸುತ್ತಿದ್ದು, ಕೈಯಲ್ಲಿ ಲಾಂಗು, ಗನ್ನು ಹಿಡಿದು ರಗಡ್ ಲುಕ್‌ನಲ್ಲಿ ಉಪೇಂದ್ರ ಕಾಣಿಸಿರುವ ಪೋಸ್ಟರ್‌ ಚಿತ್ರರಸಿಕರ ಗಮನ ಸೆಳೆಯುತ್ತಿದೆ.

ADVERTISEMENT

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳ ಸೇರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಆರ್‌.ಚಂದ್ರು ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ಬಂಡವಾಳ ಹೂಡುತ್ತಿದ್ದಾರೆ.

‘ಐ ಲವ್‌ ಯು ಸಿನಿಮಾ ಯಶಸ್ಸು ಕಾಣದಿದ್ದರೆ ನಾನು ಇಂತಹದೊಂದು ಅದ್ಧೂರಿ ಸಿನಿಮಾದ ಯೋಚನೆಯನ್ನೇ ಮಾಡುತ್ತಿರಲಿಲ್ಲ’ ಎಂದು ನಿರ್ದೇಶಕ ಚಂದ್ರುಸುದ್ದಿಗೋಷ್ಠಿಯಲ್ಲಿ ಮಾತಿಗಿಳಿದರು.

‘ಈ ಚಿತ್ರವನ್ನು ಮೂರು ಭಾಷೆಗಳಲ್ಲಿ ಶೂಟಿಂಗ್‌ ಮಾಡಿದರೆ, ನಾಲ್ಕು ಭಾಷೆಗಳಿಗೆ ಡಬ್‌ ಮಾಡಲಾಗುವುದು. ಇದು ದೊಡ್ಡ ಬಜೆಟ್‌ ಸಿನಿಮಾ. ಈಗಾಗಲೇ ಮುಂಬೈನ ನಾಲ್ಕು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಈ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದೇನೆ’ ಎಂದರು.

‘ನಾಯಕಿಯಾಗಿ ಕಾಜಲ್‌ ಅಗರ್‌ವಾಲ್‌ ನಟಿಸುವ ನಿರೀಕ್ಷೆ ಇದೆ. ಅವರಿಗೆ ಚಿತ್ರದ ಕಥೆ ಹೇಳಿ, ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಅವರ ಡೇಟ್‌ಗೆ ಕಾಯುತ್ತಿದ್ದೇನೆ. ತೆಲುಗಿನ ಜಗಪತಿ ಬಾಬು ಮತ್ತು ಬಾಲಿವುಡ್‌ನ ನಾನಾ ಪಾಟೇಕರ್‌ ಅವರೊಂದಿಗೂ ಮಾತುಕತೆ ನಡೆಯುತ್ತಿದೆ. ಇದು ಕೂಡ ಬಹುತಾರಾಗಣದ ಸಿನಿಮಾ ಆಗಲಿದೆ.ನಾಲ್ಕು ಹಂತಗಳಲ್ಲಿ ಚಿತ್ರದ ಶೂಟಿಂಗ್‌ ನಡೆಯಲಿದೆ. ಬೆಂಗಳೂರು, ಮೈಸೂರು, ಮದುರೆ, ಮುಂಬೈ ಹಾಗೂ ವಾರಾಣಸಿ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ಚಿತ್ರದ ಕಥೆಯ ಬಗ್ಗೆ ಹೆಚ್ಚು ಗುಟ್ಟು ಬಿಡದ ಚಂದ್ರು, ‘ಇದು ನೇರವಾಗಿ ಯಾವ ವ್ಯಕ್ತಿಗೂ ‌ಸಂಬಂಧಿಸಿದ ಕಥೆಯಲ್ಲ. ಕೆಲವು ನೈಜ ಘಟನೆಗಳನ್ನು ಆಧರಿಸಿರಬಹುದು. ಚಿತ್ರಕಥೆ ತಯಾರಿ ಸೇರಿ ಪಾತ್ರಕ್ಕೆ ಬೇಕಾದಂತೆ ದೇಹ ಹುರಿಗೊಳಿಸುವುದರಿಂದ ಹಿಡಿದು ಚಿತ್ರದ ತಾಂತ್ರಿಕ ಕೆಲಸಗಳಿಗೆ ಉಪ್ಪಿ ಕೈಜೋಡಿಸಿದ್ದಾರೆ. ಭೂಗತ ಜಗತ್ತಿನ ಕಥೆಯ ಚಿತ್ರಗಳಿಗೆ ಓಂಕಾರ ಹಾಕಿದವರು ಉಪ್ಪಿ. ಭೂಗತ ಜಗತ್ತಿಗೆ ಸಂಬಂಧಿಸಿ ನಾವು ಹೊಸದಾಗಿ ಏನೋ ಹೇಳಲಿದ್ದೇವೆ. ಅದನ್ನು ಈಗ ಹೇಳುವುದಿಲ್ಲ. ಕೆಲಸದ ಮೂಲಕವೇ ಅದನ್ನು ಮುಂದೆ ಹೇಳಲಿದ್ದೇವೆ. ನಾನು ಕಂಟೆಂಟ್‌ ಇಲ್ಲದೆ ಸಿನಿಮಾ ಮಾಡುವುದೇ ಇಲ್ಲ. ಇದರಲ್ಲಿ ಅಂಥದ್ದೊಂದು ಗಟ್ಟಿ ಕಂಟೆಂಟ್‌ ಇರಲಿದೆ. ಉಪ್ಪಿ ಎರಡುಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಕುತೂಹಲ ಕಾಯ್ದುಕೊಂಡರು.

‘ಇದು ಹೊಸ ಪೀಳಿಗೆಯ ಸಿನಿಮಾ. ಒಂದು ಸಿನಿಮಾದ ಕಥೆಗೆ ಗಟ್ಟಿ ಎಳೆ ಇದ್ದರೆ ಸಾಕು ಅದನ್ನು ಹೊಸ ಪೀಳಿಗೆಯವರು ಇಷ್ಟಪಡುತ್ತಾರೆ. ಸಿನಿಮಾ ಕೂಡ ಯಶಸ್ಸು ಕಾಣುತ್ತದೆ. ಕಬ್ಜ ಎಂದರೆ ಕ್ಯಾಪ್ಚರ್‌, ನಾವು ಏಳು ಭಾಷೆಗಳನ್ನು ಈ ಸಿನಿಮಾ ಮೂಲಕ ಕ್ಯಾಪ್ಚರ್‌ ಮಾಡುತ್ತೇವೆ’ ಎಂದು ಚುಟುಕಾಗಿ ಉತ್ತರಿಸಿದರು.

ಈ ಚಿತ್ರಕ್ಕೆ ಛಾಯಾಗ್ರಹಣ ಎ.ಜೆ‌. ಶೆಟ್ಟಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.