ADVERTISEMENT

ಒಎನ್‌ವಿ ಸಾಹಿತ್ಯ ಪ್ರಶಸ್ತಿ ಹಿಂತಿರುಗಿಸಲು ಗೀತರಚನೆಕಾರ ವೈರಮುತ್ತು ನಿರ್ಧಾರ

ಪಿಟಿಐ
Published 29 ಮೇ 2021, 11:28 IST
Last Updated 29 ಮೇ 2021, 11:28 IST
ವೈರಮುತ್ತು
ವೈರಮುತ್ತು   

ಚೆನ್ನೈ: ‘ಮಿ ಟೂ’ ಆರೋಪ ಎದುರಿಸುತ್ತಿರುವ ತಮಿಳು ಚಿತ್ರರಂಗದ ಖ್ಯಾತ ಗೀತರಚನೆಕಾರ ವೈರಮುತ್ತು ಅವರು ತಮಗೆ ನೀಡಿರುವ ಒಎನ್‌ವಿ ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಹೇಳಿದ್ದಾರೆ.

‘ಕೆಲವರು ನನ್ನ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ಧಾರೆ. ನನಗೆ ನೀಡಿರುವ ಪ್ರಶಸ್ತಿಯ ಬಗ್ಗೆ ಮರುಚಿಂತನೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ತೀರ್ಪುಗಾರರು ಮುಜುಗರ ಎದುರಿಸಬಾರದು ಎಂಬ ಕಾರಣಕ್ಕಾಗಿ ಒಎನ್‌ವಿ ಸಾಂಸ್ಕೃತಿಕ ಅಕಾಡೆಮಿಗೆ ಪ್ರಶಸ್ತಿಯನ್ನು ಹಿಂತಿರುಗಿಸುತ್ತಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

‘ಈ ಪ್ರಶಸ್ತಿಯೊಂದಿಗಿನ ₹3 ಲಕ್ಷನಗದು ಪುರಸ್ಕಾರವನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಬೇಕೆಂದು ಅಕಾಡೆಮಿಗೆ ನಾನು ಮನವಿ ಮಾಡಿದ್ದೇನೆ. ಕೇರಳದ ಜನರ ಮೇಲಿನ ಪ್ರೀತಿಯ ಸಂಕೇತವಾಗಿ ನಾನು ಕೂಡ ಪರಿಹಾರ ನಿಧಿಗೆ ₹2 ಲಕ್ಷ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ವೈರಮುತ್ತು ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪಾರ್ವತಿ ತಿರುವೋತ್ತ್ , ಗೀತು ಮೊಹನ್‌ದಾಸ್‌ ಮತ್ತು ಗಾಯಕಿ ಚಿನ್ಮಯಿ ಶ್ರೀಪಾದ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ವೈರಮುತ್ತುಗೆ ನೀಡಿರುವ ಒಎನ್‌ವಿ ಸಾಹಿತ್ಯ ಪ್ರಶಸ್ತಿಯ ಬಗ್ಗೆ ಮರು ಚಿಂತನೆ ನಡೆಸಬೇಕು ಎಂದು ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ.

ಇದರ ಬೆನ್ನಲ್ಲೇ ಒಎನ್‌ವಿ ಸಾಂಸ್ಕೃತಿಕ ಅಕಾಡೆಮಿಯು ವೈರಮುತ್ತು ಅವರಿಗೆ ಪ್ರಶಸ್ತಿ ನೀಡುವ ಬಗ್ಗೆ ಮರುಚಿಂತನೆ ನಡೆಸುವುದಾಗಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.