ADVERTISEMENT

ಅಲ್ಲು ಅರ್ಜುನ್ ಮನೆಯಲ್ಲಿ ದಾಂಧಲೆ:ಅಭಿಮಾನಿಗಳಿಂದ ಬೆದರಿಕೆ; ಪ್ರತಿಭಟನಾಕಾರರ ಆರೋಪ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 5:53 IST
Last Updated 30 ಡಿಸೆಂಬರ್ 2024, 5:53 IST
<div class="paragraphs"><p>ಪ್ರತಿಭಟನಾಕಾರರು ನಟ ಅಲ್ಲು ಅರ್ಜುನ್ ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದರು.</p></div>

ಪ್ರತಿಭಟನಾಕಾರರು ನಟ ಅಲ್ಲು ಅರ್ಜುನ್ ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದರು.

   

Credit: X/@sudhakarudumula

ಹೈದರಾಬಾದ್: ತೆಲುಗು ನಟ ಅಲ್ಲು ಅರ್ಜುನ್ ಅವರ ನಿವಾಸದಲ್ಲಿ ಇತ್ತೀಚೆಗೆ ದಾಂಧಲೆ ನಡೆಸಿದ್ದ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಸದಸ್ಯರು ಅಲ್ಲು ಅರ್ಜುನ್‌ ಅಭಿಮಾನಿಗಳಿಂದ ಬೆದರಿಕೆ ಕರೆ ಬರುತ್ತಿವೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ಇತ್ತೀಚೆಗೆ ‘ಪುಷ್ಪ 2: ದಿ ರೂಲ್‌’ ಸಿನಿಮಾ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣ ಸಂಬಂಧ ಸಂತ್ರಸ್ತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ಈ ಘಟನೆ ಸಂಬಂಧ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ (ಒಯು-ಜೆಎಸಿ) ಮೂವರು ಸದಸ್ಯರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಅವರಿಗೆ ನ್ಯಾಯಾಲಯ ಜಾಮೀನು ನೀಡಿತ್ತು.

ಇದೀಗ ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಸದಸ್ಯರಿಗೆ ಅಲ್ಲು ಅರ್ಜುನ್‌ ಅಭಿಮಾನಿಗಳು ಕರೆ ಮಾಡಿ ನಟನ ಮೆನೆಗೆ ಪ್ರವೇಶಿಸಿದ ಸಂಬಂಧ ನೀವು ಇದರ ಪರಿಣಾಮವನ್ನು ಎದುರಿಸುತ್ತೀರಿ ಎಂದು ಬೆದರಿಕೆ ಹಾಕಿದ್ದಾರೆ ಎಂಬುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಸಿನಿಮಾಗಳಲ್ಲಿ ನಟರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇತ್ತ ಸಿನಿಮಾ ನೋಡುವವರು ಸಾಯುತ್ತಿದ್ದಾರೆ’ ಎಂಬ ನಾಮಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು.

ನಟ ಅಲ್ಲು ಅರ್ಜುನ್‌ ಮನೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪುಷ್ಪ–2 ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ರೇವತಿ ಕುಟುಂಬಕ್ಕೆ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಒಟ್ಟು ₹2 ಕೋಟಿ ಪರಿಹಾರ ನೀಡಿದ್ದಾರೆ.

ಈ ಘಟನೆ ಸಂಬಂಧ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದ ಅಲ್ಲು ಅರ್ಜುನ್, ‘ಈ ದುರ್ಘಟನೆ ಬಹಳ ಬೇಸರ ತರಿಸಿದೆ. ಮೃತರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ’ ಎಂದು ಹೇಳಿದ್ದರು.

ಸಂಧ್ಯಾ ಚಿತ್ರಮಂದಿರದಲ್ಲಿ ಈಚೆಗೆ ಪ್ರೀಮಿಯರ್‌ ಶೋ ವೇಳೆ ಜನ ದಟ್ಟಣೆ ಹೆಚ್ಚಿದ ಪರಿಣಾಮ ಉಸಿರುಗಟ್ಟಿ ರೇವತಿ (35) ಎಂಬುವವರು ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ್‌ (8) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ನಟ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.