
ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಫೆಬ್ರುವರಿಯಲ್ಲಿ ತೆರೆಗೆ ಬರಲಿದೆ. ತುಳುನಾಡಿನ ಕಂಬಳದ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ತೆರೆ ಕಾಣಲಿದೆ.
‘ಕಂಬಳ ಎಂಬುದು ತುಳುನಾಡಿನ ನೆಲಮೂಲದ ಸಾಂಸ್ಕೃತಿಕ ಕ್ರೀಡೆ. ಅದಕ್ಕೆ ಎಂಟುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳಿಂದ ಕಂಬಳ ರೂಪಾಂತರಗಳನ್ನು ಹೊಂದಿದೆ. ದಕ್ಷಿಣ ಕನ್ನಡದ ಮೂಡುಬಿದಿರೆಯ ಬಳಿಯಲ್ಲಿ ವಿಶಾಲವಾದ ಕಂಬಳದ ಗದ್ದೆಯನ್ನು ಸಿದ್ಧಪಡಿಸಿ, ಚಿತ್ರೀಕರಿಸಲಾಗಿದೆ. ಪ್ರತೀ ದಿನವೂ ಇಪ್ಪತ್ತು ಜೊತೆ ಕೋಣಗಳು ಹಾಗೂ ಐನೂರಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಕಂಬಳದಲ್ಲಿ ಕೋಣಗಳನ್ನು ಓಡಿಸುವುದರಲ್ಲಿ ದಾಖಲೆ ಬರೆದಿರುವ ಶ್ರೀನಿವಾಸ್ ಗೌಡ ಇಲ್ಲಿಯೂ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ. ಸ್ವರಾಜ್ ಶೆಟ್ಟಿ ಅವರಿಗೆ ಜೊತೆಯಾಗಿದ್ದಾರೆ. ದುಬೈನಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ’ ಎಂದರು ರಾಜೇಂದ್ರ ಸಿಂಗ್ ಬಾಬು.
‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ನಾಯಕನಾಗಿ ನಟಿಸಿದ್ದಾರೆ. ವಿಜಯ್‌ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರಾಜ್, ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರೆ, ರಾಧಿಕಾ ಚೇತನ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ನಟರು ನಟಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಆರ್.ಗಿರಿ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಎಸ್. ಬಾಬು ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.