ಮುಂಬೈ: ಬಾಲಿವುಡ್‌ನ ಹಿರಿಯ ನಟ ಅರುಣ್ ಬಾಲಿ(79) ನಿಧನರಾಗಿದ್ದಾರೆ. ಈ ಕುರಿತಂತೆ ಸುದ್ದಿ ಸಂಸ್ಥೆಎಎನ್‌ಐ ಟ್ವಿಟ್ ಮಾಡಿದೆ.
ಬಾಲಿ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನರಗಳು ಮತ್ತು ಸ್ನಾಯುಗಳ ನಡುವಿನ ಸಂವಹನ ವೈಫಲ್ಯದಿಂದ ಉಂಟಾದ ಆಟೋ ಇಮ್ಯೂನ್ ಕಾಯಿಲೆಯಾದ ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ತಮ್ಮ ತಂದೆ ಬಳಲುತ್ತಿದ್ದರು ಎಂದು ಬಾಲಿ ಅವರ ಮಗ ಅಂಕುಶ್ ಹೇಳಿದರು.
ತಮ್ಮ ತಂದೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಆದರೆ, ಇಂದು ಮುಂಜಾನೆ 4.30 ರ ಸುಮಾರಿಗೆ ನಿಧನರಾದರು ಎಂದು ಅಂಕುಶ್ ಹೇಳಿದರು.
‘ನನ್ನ ತಂದೆ ನಮ್ಮನ್ನು ಅಗಲಿದ್ದಾರೆ. ಅವರು ಮೈಸ್ತೇನಿಯಾ ಗ್ರ್ಯಾವಿಸ್‌ನಿಂದ ಬಳಲುತ್ತಿದ್ದರು. ಎರಡು-ಮೂರು ದಿನಗಳಿಂದ ಅವರಿಗೆ ಮೂಡ್ ಸ್ವಿಂಗ್ ಇತ್ತು. ಕೇರ್‌ಟೇಕರ್ ಸಹಾಯದಿಂದ ಶೌಚಾಲಯಕ್ಕೆ ಹೋಗಿ ಬಂದು ಕುಳಿತುಕೊಂಡಿದ್ದರು. ಆದರೆ, ಬಳಿಕ ಅವರು ಎದ್ದೇಳಲಿಲ್ಲ’ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.
ಸಿನಿಮಾ ಮತ್ತು ಟಿ.ವಿ ಕಾರ್ಯಕ್ರಮಗಳ ಮೂಲಕ ಅವರು ಜನಪ್ರಿಯರಾಗಿದ್ದರು. 1991 ರಲ್ಲಿ ಅಕ್ಷಯ್ ಕುಮಾರ್ ಅವರ ‘ಸೌಗಂಧ್‘ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ, ರಾಜು ಬನ್ ಗಯಾ ಜಂಟಲ್‌ಮ್ಯಾನ್, ಸಬ್ಸೆ ಬಡಾ ಕಿಲಾಡಿ, ಸತ್ಯ, 3 ಈಡಿಯಟ್ಸ್, ರೆಡಿ, ಬರ್ಫಿ!, ಪಿಕೆ, ಬಾಘಿ, ಕೇದಾರನಾಥ್, ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಪಾಣಿಪತ್, ಸಾಮ್ರಾಟ್ ಪೃಥ್ವಿರಾಜ್ ಮತ್ತು ಲಾಲ್ ಸಿಂಗ್ ಚಡ್ಡಾ ಮುಂತಾದ ಇತ್ತೀಚಿನ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದರು. ಇಂದು ತೆರೆ ಕಂಡಿರುವ ಅಮಿತಾಬ್ ಬಚ್ಚನ್-ರಶ್ಮಿಕಾ ಮಂದಣ್ಣ ಅಭಿನಯದ ‘ಗುಡ್ ಬೈ’ ಅವರುಅಭಿನಯದ ಕೊನೆಯ ಚಿತ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.