ಮುಂಬೈ: ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ ಮನೋಜ್ ಕುಮಾರ್ (87) ಶುಕ್ರವಾರ ಇಲ್ಲಿನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾದರು.
‘ಭಾರತ್’ದ ಆಶಯ ಬಿಂಬಿಸುವ, ದೇಶಭಕ್ತಿಯ ಸರಣಿ ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಇದೇ ಕಾರಣದಿಂದ ‘ಭಾರತ್ ಕುಮಾರ್’ ಎಂದೂ ಚಲನಚಿತ್ರವಲಯದಲ್ಲಿ ಹೆಸರಾಗಿದ್ದರು. ಜನಪ್ರಿಯ ‘ಉಪಕಾರ್, ಪೂರಬ್ ಔರ್ ಪಶ್ಚಿಮ್, ರೋಟಿ ಕಪಡಾ ಔರ್ ಮಕಾನ್’ ಅವರ ನಟನೆಯ ಪ್ರಮುಖ ಚಿತ್ರಗಳು.
ಕೆಲ ತಿಂಗಳಿಂದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ‘ತಂದೆ ಯಾತನೆಯಿಂದ ಈಗ ಪಾರಾಗಿದ್ದಾರೆ’ ಎಂದು ಮೃತರ ಪುತ್ರ, ನಟ ಕುನಾಲ್ ಪ್ರತಿಕ್ರಿಯಿಸಿದರು. ಅಂತ್ಯಕ್ರಿಯೆ ಶನಿವಾರ ನಡೆಯಲಿದೆ. ಮೃತರಿಗೆ ಪತ್ನಿ ಶಶಿ ಮತ್ತು ಇಬ್ಬರು ಪುತ್ರರಿದ್ದಾರೆ.
ಮನೋಜ್ ಕುಮಾರ್ 1960, 1970ರ ದಶಕದಲ್ಲಿ ಜನಪ್ರಿಯತೆ ಉತ್ತುಂಗದಲ್ಲಿದ್ದರು. ದೇಶಭಕ್ತಿ ಅಲ್ಲದೆ, ಪ್ರಣಯ ಪ್ರಧಾನ ‘ಹಿಮಾಲಯ ಕೀ ಗೋಡ್ ಮೇ’, ‘ಪತ್ತರ್ ಕೇ ಸನಂ’ ಚಿತ್ರಗಳಲ್ಲೂ ನಟಿಸಿದ್ದರು.
ಅವಿಭಜಿತ ಭಾರತದ, ಈಗಿನ ಪಾಕಿಸ್ತಾನದ ಗ್ರಾಮದಲ್ಲಿ ಪಂಜಾಬಿ ಹಿಂದೂ ಕುಟುಂಬವೊಂದರಲ್ಲಿ ಜನಿಸಿದ್ದರು. ಅವರ ಮೂಲ ಹೆಸರು ಹರಿಕೃಷನ್ ಗೋಸ್ವಾಮಿ. ದೇಶ ವಿಭಜನೆಯ ಬಳಿಕ ಕುಟುಂಬ 1947ರಲ್ಲಿ ದೆಹಲಿಗೆ ವಲಸೆ ಬಂದಿತ್ತು. ದೆಹಲಿ ವಿ.ವಿ.ಯಲ್ಲಿ ಪದವಿ ಶಿಕ್ಷಣದ ಬಳಿಕ ಮುಂಬೈಗೆ ತೆರಳಿದ್ದರು.
ನಟ ದಿಲೀಪ್ ಕುಮಾರ್ ಅವರ ಅಭಿಮಾನಿಯಾಗಿದ್ದರು. ‘ದಿಲೀಪ್ ಕುಮಾರ್ ನಟನೆಯ ‘ಶಬ್ನಮ್’ ವೀಕ್ಷಿಸಿದ ಬಳಿಕ ಅವರಂತೇ ನಟನಾಗುವ ಹಂಬಲ ಹೊಂದಿದ್ದೆ. ಆಗ ನನ್ನ ವಯಸ್ಸು 11’ ಎಂದು ಪಿಟಿಐಗೆ 2021ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ವತಃ ಹೇಳಿಕೊಂಡಿದ್ದರು.
ಮುಂದೊಂದು ದಿನ ತಮ್ಮ ನಿರ್ಮಾಣದ ‘ಕ್ರಾಂತಿ’ಯಲ್ಲಿ ಸ್ವತಃ ದಿಲೀಪ್ ಕುಮಾರ್ ಅವರೇ ನಟಿಸುವಂತೆ ನೋಡಿಕೊಂಡರು. ದಿಲೀಪ್ ಕುಮಾರ್ ಅವರೊಂದಿಗೆ ‘ಆದ್ಮಿ’ ಚಿತ್ರದಲ್ಲೂ ನಟಿಸಿದ್ದರು.
2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿದ್ದರು. ‘ಪದ್ಮಶ್ರೀ’ ಗೌರವವೂ ಸಂದಿತ್ತು.
ಬಾಲಿವುಡ್‌ನ ಪ್ರಮುಖರು ಮನೆಗೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಸಮಕಾಲೀನ ನಟರಾದ ಧರ್ಮೇಂದ್ರ, ಹೇಮಮಾಲಿನಿ, ಅವರು ‘ನಮ್ಮ ಆತ್ಮೀಯರಲ್ಲಿ ಒಬ್ಬರು’ ಎಂದು ಸ್ಮರಿಸಿದರು.
‘ರಾಷ್ಟ್ರ ನಾಯಕರು, ರೈತರು, ಯೋಧರ ಪಾತ್ರಗಳಿಗೆ ಜೀವ ತುಂಬಿದ್ದರು. ಅವರ ಚಿತ್ರಗಳು ವೀಕ್ಷಕರಲ್ಲಿ ದೇಶಭಕ್ತಿಯ ಭಾವನೆ ಬೆಳೆಸಿದ್ದವು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ‘ಎಕ್ಸ್‘ನಲ್ಲಿ ಸ್ಮರಿಸಿದ್ದಾರೆ.
‘ಮನೋಜ್ ಕುಮಾರ್ ಭಾರತ ಚಿತ್ರರಂಗದ ಪ್ರಮುಖ ನಟ. ದೇಶಭಕ್ತಿ ಬಿಂಬಿಸುವ ಪಾತ್ರಗಳಿಗಾಗಿ ಅವರು ಎಂದಿಗೂ ನೆನಪಿನಲ್ಲಿ ಉಳಿಯುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.