ADVERTISEMENT

ಹಿರಿಯ ನಟಿ ಸರೋಜಾದೇವಿ ನಿಧನ: ಪ್ರಧಾನಿ ಮೋದಿ, ಚಂದ್ರಬಾಬು ನಾಯ್ಡು ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜುಲೈ 2025, 11:26 IST
Last Updated 14 ಜುಲೈ 2025, 11:26 IST
   

ಬೆಂಗಳೂರು: ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಬಿ. ಸರೋಜಾದೇವಿ(87) ಸೋಮವಾರ ನಿಧನರಾಗಿದ್ದಾರೆ.

ಸರೋಜಾದೇವಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ರಾಜಕಾರಣಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಸರೋಜಾದೇವಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಸರೋಜಾದೇವಿ ಅವರ ನಿಧನವು ನೋವುಂಟು ಮಾಡಿದೆ. ಅವರು ಭಾರತೀಯ ಸಿನಿಮಾ ಮತ್ತು ಸಂಸ್ಕೃತಿಯ ಅಪ್ರತಿಮ ಉದಾಹರಣೆಯಾಗಿ ನೆನಪಿನಲ್ಲಿ ಉಳಿಯುತ್ತಾರೆ. ಬೇರೆ ಬೇರೆ ಭಾಷೆಗಳಲ್ಲಿನ ಅವರ ಅಭಿನಯ, ಅವರ ಸಿನಿಮಾಗಳು ಹಾಗೂ ಬಹುಮುಖ ಪ್ರತಿಭೆಯು ತಲೆಮಾರುಗಳ ಆಚೆಯೂ ಅಳಿಸಲಾಗದ ಗುರುತು ಮೂಡಿಸಿದೆ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದಿದ್ದಾರೆ.

ADVERTISEMENT

'ಬಹುಭಾಷಾ ತಾರೆ ಸರೋಜಾದೇವಿ ಅವರು ಬೆಂಗಳೂರಿನಲ್ಲಿ ನಿಧನರಾದ ಸುದ್ದಿ ತಿಳಿದು ದುಃಖವಾಗಿದೆ. ಅವರು ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಅಪ್ರತಿಮ ಸಾಧನೆ ಮಾಡಿದ್ದಾರೆ. ತೆಲುಗಿನ ಅದ್ಭುತ ನಟರಾದ ಎನ್‌ಟಿಆರ್‌ ಹಾಗೂ ಎಎನ್‌ಆರ್‌ ಅವರ ಜೊತೆಗೂ ಸರೋಜಾದೇವಿ ಅವರು ನಟಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಸಾಮಾಜಿಕ ಜಾಲತಾಣಗಳಲ್ಲಿ ತೆಲುಗಿನಲ್ಲೇ ಪೋಸ್ಟ್‌ ಮಾಡಿದ್ದಾರೆ.

'ಸರೋಜಾದೇವಿ ಅವರು ನಮ್ಮ ಕುಟುಂಬ ಸದಸ್ಯರಂತೆ ಇದ್ದರು. ನಾವು ಭೇಟಿಯಾದಾಗಲೆಲ್ಲಾ ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದರು. ಅವರ ಕೆಲಸ ಮತ್ತು ಸಾಧನೆಗಳು ಅದ್ಭುತವಾಗಿವೆ. ಅವರ ಸಾವು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕರ್ನಾಟಕದ ಚನ್ನಪಟ್ಟಣ ಮೂಲದ ಸರೋಜಾದೇವಿ ಅವರು ಬಹುಭಾಷಾ ತಾರೆಯಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.