ADVERTISEMENT

ಭಾವತಂತುಗಳಿಗೆ ಪದವಾದ ಯೋಗೇಶ್‌ ಗೌರ್‌

ಎಸ್.ರಶ್ಮಿ
Published 29 ಮೇ 2020, 19:39 IST
Last Updated 29 ಮೇ 2020, 19:39 IST
ಯೋಗೇಶ್‌ ಗೌರ್‌ (ಚಿತ್ರಕೃಪೆ: ವಿಕಿಪಿಡಿಯಾ)
ಯೋಗೇಶ್‌ ಗೌರ್‌ (ಚಿತ್ರಕೃಪೆ: ವಿಕಿಪಿಡಿಯಾ)   

‘ಜಾನೆಮನ್‌ ಜಾನೆಮನ್‌ ತೇರೆ ದೋ ನಯನ್‌.. ಚೋರಿ ಚೋರಿ ಲೇಕೆ ಗಯೆ ದೇಖೊ ಮೇರಾ ಮನ್‌, ಜಾನೆಮನ್‌ ಜಾನೆಮನ್‌ ಜಾನೆಮನ್‌’ಈ ಹಾಡಿನ ಧಾಟಿಗಾಗಿಯೇ ಮರಳಾಗಿದ್ದು. ಆದರೆ ಹಾಡು ಖುಷಿಕೊಟ್ಟಿದ್ದು ಸಹಸ್ರಮಾನದ ಆರಂಭದಲ್ಲಿ. ವೈಯಕ್ತಿಕ ಕಾರಣಕ್ಕೆ. ಸದ್ಯ ಅದು ಅಸಂಗತ. ಆದರೆ ಆ ಹಾಡು ಬರೆದ ಯೋಗೇಶ್‌ ಗೌರ್‌ ಇಂದು ನಿಧನರಾದರು.

16ರ ಹರೆಯದಲ್ಲಿ ತಾವು ಹುಟ್ಟಿದೂರು ಲಖನೌ ಬಿಟ್ಟು, ಕನಸಿನ ನಗರಿ ಮುಂಬೈಗೆ ಕೆಲಸ ಅರಸಿಕೊಂಡು ಬಂದಿದ್ದರು. ಅವರ ಕವಿತೆಗಳು ಹಾಡಾಗಿದ್ದು ಹೃಷಿಕೇಶ್‌ ಮುಖರ್ಜಿ ಅವರ ಚಿತ್ರಗಳಿಂದ. ಬ್ರೇಕ್‌ ಸಿಕ್ಕಿದ್ದೂ ಅವರ ನಿರ್ದೇಶನದ ‘ಆನಂದ್‌’ ಚಿತ್ರದಿಂದ.ಅವರ ಹಾಡುಗಳ ಕೇಳುಗರ ಭಾವಲೋಕದಲ್ಲಿ ಈ ಹಾಡುಗಳಿರದಿದ್ದರೆ ನಿರ್ವಾತ ಸೃಷ್ಟಿಸಿದಂತಾಗಿದೆ!

ಯೋಗೇಶ್‌ ಹಾಡುಗಳೇ ಹಾಗೆ. ಏಕಾಂತದಲ್ಲಿ ಸಾಥ್‌ ನೀಡುವ ಸಂಗಾತಿ ಇದ್ದಂತೆ. ಹಾಡಿನ ಸಾಂಗತ್ಯದಲ್ಲಿಯೇ ಏಕಾಂತ ಆನಂದಿಸುವಂತೆ. ಅನುಭವಿಸುವಂತೆ!!

ADVERTISEMENT

ಬದುಕು ಬೇಜಾರಾದಾಗ ಹೆಗಲಮೇಲೆ ತಲೆ ಇರಿಸಿಕೊಂಡು, ಕಣ್ಣೀರು ಒರೆಸುವ ಕೈ ಇದ್ದಂತೆ. ಒರೆಸದಿದ್ದರೂ ಒದ್ದೆಯಾದ ಭುಜವನ್ನು ಒಮ್ಮೆಯೂ ಕೊಡವದಂತೆ ಬಳಸಿ ಹಿಡಿಯುವ ಸಂಗಾತಿಯಂತೆ ಹಾಡುಗಳು.

ಒಮ್ಮೆ ನೆನಪಿಸಿಕೊಳ್ಳಿ ‘ಜಿಂದಗಿ... ಕೈಸಿ ಹೈ ಪಹೇಲಿ ಹಾಯೆ... ಕಭಿ ಯೇ ಹಸಾಯೆ.. ತೊ ಕಭಿ ಯೇ ರುಲಾಯೆ’ ಸಾವಿನ ಹೊಸಿಲಿಗೆ ನೊಸಲನ್ನಿಟ್ಟು ನಗುವ ‘ಆನಂದ್‌’ ಚಿತ್ರದ ಹಾಡು ಅದೆಷ್ಟು ಸಲ ನಮ್ಮನ್ನ ಧೃತಿಗೆಡದಂತೆ ಕೈಹಿಡಿದು ನಡೆಸಿಲ್ಲ..?ಮಿಲಿ ಚಿತ್ರದ ಕಿಶೋರ್‌ ದಾ ಧ್ವನಿಯಲ್ಲಿರುವ ‘ಬಡಿ ಸೂನಿ ಸೂನಿ ಹೈ.. ಜಿಂದಗಿ ಯೇ ಜಿಂದಗಿ’ ಹಾಡು ಒಮ್ಮೆ ನೆನಪಿಸಿಕೊಳ್ಳಿ.

ನಮ್ಮೆಲ್ಲ ದುಃಖದ ದಿನಗಳಲ್ಲೂ ಭಾವಗಳನ್ನು ಪದಕ್ಕಿಳಿಸಿ, ನೋವನ್ನೇ ಮಾಧುರ್ಯವಾಗಿಸಿದ ಪದಗಳವು.

‘ಕಭೀ ಏಕ್‌ ಪಲ್‌ಭಿ ಕಹೀ ಯೇ ಉದಾಸಿ,

ದಿಲ್‌ ಮೇರಾ ಭೂಲೆಕಭಿ ಮುಸ್ಕುರಾಕರ್‌,

ದಬೆ ಪಾಂವ್‌ ಆಕರ್‌, ದುಃಖ್‌ ಮುಝೆ ಛೂಲೆ

ನಕರ್‌ ಮುಝಸೆ ಘಮ್‌ ಮೇರೆ ದಿಲ್ಲಗಿ

ಬಡಿ ಸೂನಿ ಸೂನಿ ಹೈ..
ನಮ್ಮೆಲ್ಲ ದುಃಖ, ದುಮ್ಮಾನಗಳು ಹೆಜ್ಜೆಯ ಮೇಲೊಂದು ಹೆಜ್ಜೆಯನ್ನಿಕ್ಕಿ, ಆಗಾಗ ಸೋಕಿ, ತಾಕಿ ಹೋಗುವ ಈ ನೋವುಗಳೆಲ್ಲ ಈ ಸಾಲುಗಳಲ್ಲಿ ಸಮಸ್ಯೆಗಳಿಗೆ ದಮ್ಮಯ್ಯ ಮನಸಿನೊಂದಿಗೆ ಕಳ್ಳಾಟ ಬೇಡ ಎಂದು ಕೇಳುತ್ತವೆ.

ಪ್ರತಿ ಮಳೆಗೂ ಒಂದು ನೆನಪಿರುತ್ತದೆ. ಪ್ರತಿ ಮಳೆಗೂ ಒಂದು ಕತೆ. ಆದರೆ ಈ ಪ್ರತಿ ಮಳೆಯನ್ನು ನೆನೆಯುವುದೇ, ನೆನಪಿಸಿಕೊಳ್ಳುವ ಹಾಡೆಂದರೆ ‘ರಿಮ್‌ ಝಿಮ್‌ ಗಿರೆ ಸಾವನ್‌...' ಮಂಜಿಲ್‌ ಚಿತ್ರದ ಈ ಹಾಡು ಮರೆಯಲಾಗುವುದೇ ಇಲ್ಲ. ಮಳೆ ಹನಿಗಳು ಭುಜದ ಮೇಲೆ ಮುತ್ತಿಟ್ಟಾಗ ಆಗುವ ರೋಮಾಂಚನವೇ ಪ್ರತಿಸಲವೂ ಈ ಹಾಡು ಕೇಳಿದಾಗ ಆಗುತ್ತದೆ.

ನಮ್ಮ ಪ್ರೀತಿಗೂ, ಯೋಗೇಶ್‌ ಬರೆಯುವ ಹಾಡುಗಳಿಗೂ ಅದೆಷ್ಟು ಸಾಮ್ಯತೆಯೆಂದರೆ.. ‘ಕಹೀಂ ದೂರ್‌ ಜಬ್‌ ದಿನ್‌ ಢಲ್‌ ಜಾಯೆ..' ಹಾಡು ಪ್ರತಿ ಸಂಜೆಯನ್ನು ಆಸ್ವಾದಿಸುವಾಗಲೂ ಕಡಲದಂಡೆ, ಉಸಿರಿನ ಬಸಿರಿನಂತೆ ಕಾಣುವ ಬಲೂನುಗಳು, ಜೀವನೋತ್ಸಾಹ ತೋರುವ ಅಲೆಗಳು, ಆ ಮರಳು ನೆನೆಯದೇ ಇರುವುದಿಲ್ಲ. ಹಾಗೆ ಸಂಜೆಗೊಂದು ಚಿತ್ರಣ ತಂದು ನೀಡಿದ್ದೆ ಆನಂದ್‌ ಚಿತ್ರದ ಈ ಹಾಡು.

ಇವಷ್ಟೇ ಅಲ್ಲ, ‘ನ ಜಾನೆ ಕ್ಯೂಂ ಹೋತಾಹೈ ಯೇ ಜಿಂದಗಿ ಮೆ ಬಾರ್‌ ಬಾರ್‌..’ ಹಾಡು, ಹಾಡಿನ ಗುಂಗು ಒಮ್ಮೆ ಕೇಳಿದರೆ ಮರುದಿನದವರೆಗೂ ಗುಂಗಿಹುಳದಂತೆ ಗುಂಗು ಹಿಡಿಸುತ್ತದೆ.

ಭಾವತಂತುಗಳನ್ನು ಪದಗಳಿಂದ ಮೀಟಿದ ಯೋಗೇಶ್‌ ಗೌರ್‌ ಕಣ್ಮರೆಯಾದರು. ಆದರೆ ಪ್ರೀತಿ, ಜೀವನ, ಜೀವನಪ್ರೀತಿ, ಉದಾಸೀನ, ದುಃಖವನ್ನೂ ಸಂಭ್ರಮಿಸುವ ಬಗೆ ಹಾಡಿಹೋದರು. ನಾವು ಗುನುಗುತ್ತಲೇ ಇದ್ದೇವೆ. ಅವರು ಗುಂಗಾಗಿ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.