ಸದ್ಯ ನಟಿ ವಿದ್ಯಾಬಾಲನ್ ‘ಮಿಷನ್ ಮಂಗಲ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಿಡುಗಡೆಯಾದ ಬಳಿಕ ‘ಮಾನವ ಕಂಪ್ಯೂಟರ್’ ಎಂದೇ ಖ್ಯಾತರಾಗಿದ್ದ ಕನ್ನಡತಿ ಶಕುಂತಲಾ ದೇವಿ ಅವರ ಬಯೋಪಿಕ್‌ನ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈಗ ಈ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.
ಜೀಷು ಸೇನ್‌ಗುಪ್ತಾ ಅವರು ಶಕುಂತಲಾ ದೇವಿಯ ಪತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಹಾಗೇಶಕುಂತಲಾ ಅವರ ಅಳಿಯನ ಪಾತ್ರಕ್ಕೆ ಅಮಿತ್ ಸಾಧ್ ಆಯ್ಕೆಯಾಗಿದ್ದಾರೆ.ಅಮಿತ್, ಹೃತಿಕ್ ರೋಷನ್ ಅಭಿನಯದ ‘ಸೂಪರ್ 30’ ಹಾಗೂ ಹಿಂದಿಯ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಲು ಅಮಿತ್ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ.
ಶಕುಂತಲಾ ಪತಿ, ಕೋಲ್ಕತ್ತ ಮೂಲದ ಪಾರಿತೋಷ್ ಬ್ಯಾನರ್ಜಿಯ ಪಾತ್ರದಲ್ಲಿ ಜೀಷು ಗುಪ್ತಾ ನಟಿಸಲಿದ್ದಾರೆ.
ಐಎಎಸ್ ಅಧಿಕಾರಿಯಾಗಿದ್ದ ಪಾರಿತೋಷ್ ಅವರು1960ರಲ್ಲಿ ಶಕುಂತಲಾ ದೇವಿಯನ್ನು ವಿವಾಹವಾಗಿದ್ದರು. 1979ರಲ್ಲಿ ಅವರಿಬ್ಬರು ಬೇರೆಯಾಗಿದ್ದರು.ಈ ಚಿತ್ರವನ್ನು ಅನು ಮೆನನ್ ನಿರ್ದೇಶಿಸಲಿದ್ದು, ಚಿತ್ರದ ಬಗ್ಗೆ ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರು. ಬೇರೆ ಪಾತ್ರಗಳ ಆಯ್ಕೆ ನಡೆಯುತ್ತಿದೆ.
ಮಹಾನ್ ಗಣಿತಜ್ಞೆ, 'ಮಾನವ ಕಂಪ್ಯೂಟರ್' ಎಂದು ವಿಶ್ವ ಖ್ಯಾತಿ ಗಳಿಸಿದ್ದ ಶಕುಂತಲಾ ದೇವಿ ಜ್ಯೋತಿಷಿ, ಜಾದೂಗಾರ್ತಿಯಾಗಿ ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದ್ದವರು. ತಮ್ಮ ಐದನೇ ವಯಸ್ಸಿನಲ್ಲಿ ಶಕುಂತಲಾ ದೇವಿ ಅವರು ಗಣಿತದ ಕ್ಲಿಷ್ಟಕರವಾದ ಸಮಸ್ಯೆಗಳನ್ನು ಮನಸಲ್ಲೇ ಲೆಕ್ಕಿಸಿ ಥಟ್ ಎಂದು ಉತ್ತರ ಹೇಳುತ್ತಿದ್ದರಂತೆ.ಗಣಿತದ ಕ್ಲಿಷ್ಟ ಸಮಸ್ಯೆಗಳನ್ನು ಅವರು ಬಿಡಿಸುತ್ತಿದ್ದರು.
ಶಕುಂತಲಾ ದೇವಿ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕಷ್ಟೇ. 2020ಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.