ADVERTISEMENT

ಸಿನಿ ಬಿಟ್ಸ್‌ | ‘ವಿದ್ಯಾಪತಿ’ಗೆ ‘ಪ್ರೇರಣಾಪತಿ’ ಸಾಥ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 23:30 IST
Last Updated 20 ಮಾರ್ಚ್ 2025, 23:30 IST
ಧನಂಜಯ 
ಧನಂಜಯ    

ಇತ್ತೀಚೆಗಷ್ಟೇ ಮದುವೆಯಾದ ‘ಧನ್ಯತಾ’ಪತಿ ನಟ ಡಾಲಿ ಧನಂಜಯ ಅವರನ್ನು ತುಂಟ ಮಾತುಗಳಿಂದ ‘ಪ್ರೇರಣಾ’ಪತಿ ನಟ ಧ್ರುವ ಸರ್ಜಾ ಕಾಲೆಳೆಯುತ್ತಿದ್ದರು. ಅತ್ತ ‘ಪೂಜಾ’ಪತಿ ನಟ ನಾಗಭೂಷಣ್‌ ಪತ್ನಿ ನೀಡಿದ ‘ಆ್ಯಕ್ಷನ್‌ ಸ್ಟಾರ್‌’ ಬಿರುದಿಗೆ ನಾಚಿ ನೀರಾಗಿದ್ದರು. ಇತ್ತ ಏಕಾಂಗಿಯಾಗಿ ಕುಳಿತಿದ್ದ ನಟ ಶ್ರೀವತ್ಸ ನಾನ್ಯಾರ ಪತಿಯಾಗೋದು ಎಂಬ ಯೋಚನೆಯಲ್ಲಿದ್ದರು.     

ಇವೆಲ್ಲವುದಕ್ಕೆ ವೇದಿಕೆಯಾಗಿದ್ದು ‘ವಿದ್ಯಾಪತಿ’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ. ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ, ಡಾಲಿ ಪಿಕ್ಚರ್ಸ್‌ ನಿರ್ಮಾಣದ ‘ವಿದ್ಯಾಪತಿ’ ಏ.10 ರಂದು ರಿಲೀಸ್‌ ಆಗುತ್ತಿದೆ. ಟ್ರೇಲರ್‌ ಬಿಡುಗಡೆ ಮಾಡಿ ಧ್ರುವ ಸರ್ಜಾ ತಂಡಕ್ಕೆ ಶುಭಹಾರೈಸಿದರು. 

‘ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ‘ಬಡವ ರಾಸ್ಕಲ್‌’ ಸಿನಿಮಾ ಮೂಲಕ ನಿರ್ಮಾಣ ಕ್ಷೇತ್ರಕ್ಕೆ ಕೈಹಾಕಿದೆ. ನಂತರದಲ್ಲಿ ಹಲವು ಸಿನಿಮಾಗಳನ್ನು ಪ್ರಸ್ತುತಪಡಿಸಿದೆ. ಸಿನಿಮಾ ನಿರ್ಮಾಣ ಎಂಬ ಪಯಣದಲ್ಲಿ ಧೈರ್ಯವಾಗಿ ಸಾಗುತ್ತಿದ್ದೇನೆ ಎಂದರೆ ಅದಕ್ಕೆ ಪ್ರೇಕ್ಷಕರು ಕಾರಣ. ‘ನಿನಗೆ ಯಾಕೆ ಬೇಕು ಪ್ರೊಡಕ್ಷನ್‌ ಕೆಲಸ’ ಎಂದು ಹಲವರು ಕೇಳಿದ್ದರು. ನಾನೂ ಹೀಗೆ ಅಂದುಕೊಳ್ಳುತ್ತಿದ್ದೆ. ಆದರೆ ಒಳ್ಳೆಯ ಕಥೆ ಕೇಳಿದಾಗ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಒಂದಿಷ್ಟು ಮಾತುಗಳು ಕೇಳಿಬರುವಾಗ ಇನ್ನೊಂದು ಒಳ್ಳೆಯ ಪ್ರಯತ್ನ ಮಾಡಿದರೆ ಎಲ್ಲವೂ ಸರಿಹೋಗುತ್ತದೆ ಎಂದುಕೊಂಡೇ ಹೆಜ್ಜೆ ಇಡುತ್ತಿದ್ದೇನೆ. ಸಿನಿಮಾ ನಿರ್ಮಾಣ ಎನ್ನುವುದು ಒಂದು ಅಪಾಯವೇ. ಆದರೆ ಚಿತ್ರರಂಗ ಉಸಿರಾಡುತ್ತಿರಬೇಕಾದರೆ ಪ್ರಯತ್ನಗಳು ಇರಲೇಬೇಕು. ‘ವಿದ್ಯಾಪತಿ’ ಒಂದು ಕೌಟುಂಬಿಕ ಸಿನಿಮಾ. ಮನರಂಜನೆ ಭರಪೂರವಿದೆ’ ಎಂದರು ಧನಂಜಯ. 

ADVERTISEMENT

‘ನಾನು ಹೀರೊ ಆಗಬೇಕು ಎಂದು ಬಂದವನೇ ಅಲ್ಲ. ಈ ಸಿನಿಮಾಗಳೆಲ್ಲವೂ ಬೋನಸ್‌’ ಎಂದು ಮಾತು ಆರಂಭಿಸಿದ ನಾಗಭೂಷಣ್‌, ‘ಡಾಲಿ ಪಿಕ್ಚರ್ಸ್‌ ಬಿಟ್ಟು ಬೇರೆಯವರ ಸಿನಿಮಾ ಮಾಡೋದಿಲ್ವಾ’ ಎಂದು ಹಲವರು ಕೇಳುತ್ತಾರೆ. ನನ್ನ ಮೇಲೆ ₹5–₹6 ಕೋಟಿ ಬಂಡವಾಳ ಹೂಡಲು ಬೇರೆ ಯಾರೂ ಬಂದಿಲ್ಲ. ನನ್ನ ಗೆಳೆಯ ಧನಂಜಯ ಒಬ್ಬನೇ ಈ ಮಾತನ್ನು ಹೇಳಿರುವುದು. ಇದೇ ಆ ಪ್ರಶ್ನೆಗೆ ಉತ್ತರ’ ಎಂದರು.    

ಸಿನಿಮಾದಲ್ಲಿ ನಾಯಕಿಯಾಗಿ ಮಲೈಕಾ ಟಿ.ವಸುಪಾಲ್‌ ನಟಿಸಿದ್ದು, ಸಿನಿಮಾದೊಳಗೆ ‘ಸೂಪರ್‌ಸ್ಟಾರ್‌ ವಿದ್ಯಾ’ ಆಗಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ ಅವರೂ ‘ಅನಕೊಂಡಾ’ ಎಂಬ ಭಿನ್ನವಾದ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.