ADVERTISEMENT

‘ಲೆಗಸಿ’ ಕಥೆ ಹೇಳಿದ ವಿಹಾನ್‌

ಪ್ರಜಾವಾಣಿ ವಿಶೇಷ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ವಿಹಾನ್‌ ಗೌಡ
ವಿಹಾನ್‌ ಗೌಡ   

ಯೋಗರಾಜ್‌ ಭಟ್‌ ನಿರ್ದೇಶಿಸಿದ್ದ ‘ಪಂಚತಂತ್ರ’ ಸಿನಿಮಾದಲ್ಲಿ ಪಕ್ಕಾ ಲವರ್‌ಬಾಯ್‌ ಆಗಿ ಮಿಂಚಿದ್ದ ವಿಹಾನ್‌ ಅವರು, ‘ಲೆಗಸಿ’ ಚಿತ್ರದ ಮೂಲಕ ಆ್ಯಕ್ಷನ್‌ ಹಾದಿಗೆ ಹೊರಳಿದ್ದಾರೆ. ಇದರಲ್ಲಿ ಅವರದು ಬರಹಗಾರನ ಪಾತ್ರ. ಓದುವ ಹವ್ಯಾಸವಿರುವ ಅವರಿಗೆ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳೆಂದರೆ ಅಚ್ಚುಮೆಚ್ಚು. ಈ ಚಿತ್ರದ ಮೂಲಕ ಹೊಸ ಇಮೇಜ್‌ ಸೃಷ್ಟಿಸಿಕೊಳ್ಳುವ ಹಂಬಲ ಅವರಲ್ಲಿದೆ.

ಕೊರೊನಾ ಸೋಂಕಿನ ಭೀತಿಯಿಂದ ಇಡೀ ಕನ್ನಡ ಚಿತ್ರರಂಗವೇ ಸ್ತಬ್ಧಗೊಂಡಿದೆ. ಮತ್ತೊಂದೆಡೆ ಈ ಭೀತಿಯು ಬಡವರ ಹೊಟ್ಟೆಗೂ ಬರೆ ಎಳೆದಿದೆ. ವಿಹಾನ್‌ ಹಾಗೂ ಅವರ ಸ್ನೇಹಿತರು ಹಸಿದವರ ಹೊಟ್ಟೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಬೆಂಗಳೂರಿನ ಕೊಳೆಗೇರಿಗಳಿಗೆ ಬೆಳಿಗ್ಗೆಯೇ ತೆರಳಿ ಉಪಾಹಾರ ಹಂಚುವುದು ಅವರ ಕಾಯಕ. ಕಳೆದ ಒಂದು ವಾರದಿಂದಲೂ ಈ ಕೆಲಸ ಮಾಡುತ್ತಿದ್ದಾರೆ. ಎಂ. ಸುಭಾಷ್‌ ಚಂದ್ರ ಆ್ಯಕ್ಷನ್‌ ಕಟ್‌ ಹೇಳಿರುವ ‘ಲೆಗಸಿ’ ಚಿತ್ರದ ಕೊನೆಯ ಹಂತದ ಶೂಟಿಂಗ್‌ ಬಾಕಿಯಿದೆಯಂತೆ. ಅವರೊಟ್ಟಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

‘ಲೆಗಸಿ’ ಚಿತ್ರದ ಕಥೆಯ ಎಳೆ ಎಂತಹದ್ದು?

ADVERTISEMENT

1990ರಿಂದ 2019ರವರೆಗೆ ನಡೆಯುವ ಬರಹಗಾರನೊಬ್ಬನ ಬದುಕು ಮತ್ತು ಆತ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎನ್ನುವುದೇ ಈ ಸಿನಿಮಾದ ಹೂರಣ. ಪ್ರೀತಿಯ ಜೊತೆಗೆ ತಂದೆ-ಮಗನ ಸೆಂಟಿಮೆಂಟ್ ಕೂಡ ಇದೆ.ನಾನು ಶಾಲಾ ಹಂತದಲ್ಲಿ ಜಿಮ್ನಾಸ್ಟಿಕ್‌ ಪಟುವಾಗಿದ್ದೆ. ಎಲ್ಲಿಯೂ ನನ್ನ ಪ್ರತಿಭೆ ತೋರಿಸಿಕೊಳ್ಳಲು ಅವಕಾಶ ಸಿಗುತ್ತಿರಲಿಲ್ಲ. ಈ ಸಿನಿಮಾದ ಮೂಲಕ ಅವಕಾಶಕ್ಕೆ ಸಿಕ್ಕಿದೆ.

ಈ ಚಿತ್ರದ ಪಾತ್ರಕ್ಕೆ ಸಿದ್ಧತೆ ಹೇಗಿತ್ತು?

ನನ್ನ ಲುಕ್‌ನಿಂದ ಹಿಡಿದು ಎಲ್ಲದರಲ್ಲೂ ಬದಲಾವಣೆ ಕಾಣಬಹುದು. ನಾನು ನಿಜ ಬದುಕಿನಲ್ಲಿ ಹೇಗಿದ್ದೇನೊ ಅಂತಹದ್ದೇ ಪಾತ್ರ ‘ಲೆಗಸಿ’ಯಲ್ಲಿ ಸಿಕ್ಕಿದೆ. ‘ಪಂಚತಂತ್ರ’ದಲ್ಲಿ ಇಪ್ಪತ್ತು ವರ್ಷದ ಹುಡುಗನಾಗಿ ಕಾಣಿಸಿಕೊಳ್ಳಬೇಕಿತ್ತು. ಭಟ್ಟರು ಹೇಳಿದಂತೆ 10 ಕೆಜಿ ತೂಕ ಇಳಿಸಿಕೊಂಡಿದ್ದೆ. ಪ್ರೇಕ್ಷಕರಿಗೂ ಮಾಸ್‌ ಸಿನಿಮಾಗಳೆಂದರೆ ಇಷ್ಟ. ಹಾಗಾಗಿ, ಇದರಲ್ಲಿ ಪಕ್ಕಾ ಮಾಸ್‌ ಹೀರೊ ಆಗಿ ಕಾಣಿಸಿಕೊಂಡಿರುವೆ.

ನಿಮಗೆ ಓದುವ ಹವ್ಯಾಸ ಇದೆಯೇ?

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಕರ್ವಾಲೊ‘, ‘ಜುಗಾರಿ ಕ್ರಾಸ್‌’ ಕಾದಂಬರಿಗಳು ಸೇರಿದಂತೆ ಹಲವು ಪುಸ್ತಕಗಳನ್ನು ಓದಿದ್ದೇನೆ. ಯೋಗರಾಜ್‌ ಭಟ್ಟರೇ ನನಗೆ ಈ ಪುಸ್ತಕಗಳನ್ನು ಓದಲು ಕೊಟ್ಟಿದ್ದು. ಈಗ ಕಾದಂಬರಿಗಳನ್ನು ಓದುವ ಹವ್ಯಾಸ ರೂಢಿಸಿಕೊಂಡಿದ್ದೇನೆ.

ನೀವು ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ಒಳ್ಳೆಯ ತಂಡಕ್ಕೆ ನನ್ನ ಮೊದಲ ಆದ್ಯತೆ. ಅವರಿಗೆ ಎಷ್ಟು ಹೊಟ್ಟೆ ಹಸಿದಿದೆ ಎನ್ನುವುದನ್ನು ನೋಡಿ ಒಪ್ಪಿಕೊಳ್ಳುತ್ತೇನೆ. ಕೆಲವರು ನಿರ್ಮಾಪಕರು ಸಿಕ್ಕಿದ್ದಾರೆ ಎಂದುಕೊಂಡು ಸಿನಿಮಾ ಮಾಡಲು ಅಣಿಯಾಗುತ್ತಾರೆ. ಅಂತಹವರಿಗೆ ನಾನು ಮಣೆ ಹಾಕುವುದಿಲ್ಲ. ಚಿತ್ರ ಒಪ್ಪಿಕೊಳ್ಳುವುದಕ್ಕೂ ಮೊದಲು ಸಿಕ್ಕಾಪಟ್ಟೆ ತಲೆ ತಿನ್ನುತ್ತೇನೆ. ನಾನು ನಿರ್ದೇಶನದ ಕೋರ್ಸ್‌ ಕೂಡ ಮಾಡಿರುವೆ. ಯೋಗರಾಜ್‌ ಭಟ್ಟರಿಗೆ ನನ್ನಲ್ಲಿ ಹೀರೊ ಕಂಡಿದ್ದರಿಂದ ‘ಪಂಚತಂತ್ರ’ದಲ್ಲಿ ನಟಿಸಲು ಅವಕಾಶ ಕೊಟ್ಟರು. ಹಾಗಾಗಿ, ಹೀರೊ ಆದೆ.

ಸ್ಕ್ರಿಪ್ಟ್‌ ಚೆನ್ನಾಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಹೊಸಬರು ಅಥವಾ ಹಳೆಬರ ಸಿನಿಮಾ ಎಂದು ವರ್ಗೀಕರಿಸುವುದಿಲ್ಲ. ಎಲ್ಲರ ಸಿನಿಮಾಗಳಲ್ಲೂ ನಟಿಸುತ್ತೇನೆ. ಆದರೆ, ಕಥೆ ಚೆನ್ನಾಗಿರಬೇಕು ಅಷ್ಟೆ. ನಿರ್ದೇಶಕರ ನೈಜ ಉದ್ದೇಶ ಬಹುಬೇಗ ಅರ್ಥವಾಗುತ್ತದೆ. ಸಿನಿಮಾಗಳ ಆಯ್ಕೆಯಲ್ಲಿ ಡೈರೆಕ್ಷನ್‌ ಕೋರ್ಸ್‌ ನನ್ನ ನೆರವಿಗೆ ಬರುತ್ತಿದೆ.

ಸಿನಿಮಾವೊಂದು ಕಮರ್ಷಿಯಲ್‌ ಆಗಿ ಸೂಪರ್‌ ಹಿಟ್‌ ಆಗುವುದು ಅಥವಾ ಸೋಲುವುದು ಬೇರೆಯ ವಿಷಯ. ಆದರೆ, ಹಲವು ವರ್ಷದ ಬಳಿಕವೂ ಸಿನಿಮಾವನ್ನು ಕುಳಿತುಕೊಂಡು ನೋಡಿದಾಗ ಅದು ಜನರಿಗೆ ಇಷ್ಟವಾಗಬೇಕು. ಅಂತಹ ಚಿತ್ರಗಳಲ್ಲಿ ನಟಿಸುವುದೇ ನನ್ನಾಸೆ. ‘ಕಾಲು ಕೇಜಿ ಪ್ರೀತಿ’ ನನ್ನ ಮೆಚ್ಚಿನ ಚಿತ್ರ.

ನಿಮಗೆ ನಿರ್ದೇಶನದ ಆಸೆ ಇಲ್ಲವೇ?

ಸಿನಿಮಾ ನಿರ್ದೇಶನ ಮಾಡುವ ಆಸೆಯಂತೂ ಇದೆ. ಆದರೆ, ಅದಕ್ಕೊಂದಿಷ್ಟು ಸಮಯ ಬೇಕಲ್ಲವೇ? ಸದ್ಯಕ್ಕೆ ನನ್ನ ಬಳಿ ಯಾವುದೇ ಕಥೆಯೂ ಇಲ್ಲ. ಮುಂದೊಂದು ದಿನ ಸಿನಿಮಾ ನಿರ್ದೇಶನ ಮಾಡುವುದು ದಿಟ.

‘ಲೆಟ್ಸ್‌ ಬ್ರೇಕಪ್‌’ ಸಿನಿಮಾ ಶೂಟಿಂಗ್‌ ಯಾವಾಗ?

ಜಯಣ್ಣ ಕಂಬೈನ್ಸ್‌ನಿಂದ ಈ ಚಿತ್ರ ನಿರ್ಮಿಸಲಾಗುತ್ತಿದೆ. ಜೂನ್‌ನಿಂದ ಶೂಟಿಂಗ್‌ ಶುರುವಾಗಬೇಕಿತ್ತು. ಕೊರೊನಾ ಸೋಂಕಿನ ಭೀತಿಯಿಂದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇದರಲ್ಲಿ ಲವ್‌ಸ್ಟೋರಿ ಇದೆ; ಯುವಜನರಿಗೆ ಬಹುಬೇಗ ಕನೆಕ್ಟ್‌ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.