ADVERTISEMENT

ಲೈಗರ್ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿದ ಬಾಕ್ಸಿಂಗ್ ದಂತಕತೆ ಮೈಕ್ ಟೈಸನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2021, 11:18 IST
Last Updated 17 ನವೆಂಬರ್ 2021, 11:18 IST
ಲೈಗರ್ ಚಿತ್ರತಂಡದೊಂದಿದೆ ಮೈಕ್ ಟೈಸನ್
ಲೈಗರ್ ಚಿತ್ರತಂಡದೊಂದಿದೆ ಮೈಕ್ ಟೈಸನ್   

ಬೆಂಗಳೂರು: ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ‘ಲೈಗರ್’ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಸಿನಿ ಪ್ರಿಯರ ಗಮನ ಸೆಳೆದಿದೆ.

ಈ ಚಿತ್ರದಲ್ಲಿ ಅಮೆರಿಕದ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಅಭಿನಯಿಸುತ್ತಿದ್ದಾರೆ ಎನ್ನುವುದು ಕೂಡ ಅದರಲ್ಲಿ ಒಂದು. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಲೈಗರ್, ಕೊನೆ ಹಂತದ ಶೂಟಿಂಗ್‌ಗಾಗಿ ಅಮೆರಿಕಕ್ಕೆ ತೆರಳಿದೆ.

ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವ ಮೈಕ್ ಟೈಸನ್ ಅವರ ಜೊತೆ ಕಾಲ ಕಳೆದಿರುವುದನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಟೈಸನ್ ಪಾಲಿನ ಚಿತ್ರೀಕರಣಕ್ಕಾಗಿ ಲಾಸ್ ವೇಗಾಸ್‌ನಲ್ಲಿ ಬೀಡು ಬಿಟ್ಟಿರುವ ಲೈಗರ್ ಚಿತ್ರತಂಡ ಮೈಕ್ ಟೈಸನ್ ಕಂಡು ಪುಳಕಿತರಾಗಿದ್ದಾರೆ.

ADVERTISEMENT

ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ, ನಟಿ ಹಾಗೂ ನಿರ್ಮಾಪಕಿ ಚಾರ್ಮಿ ಕೌರ್, ನಿರ್ದೇಶಕ ಪುರಿ ಜಗನ್ನಾಥ್ ಅವರು ಟೈಸನ್ ಅವರನ್ನು ಭೇಟಿಯಾಗಿದ್ದರು.ಟೈಸನ್ ಜೊತೆಗಿನ ಫೋಟೊ ಹಂಚಿಕೊಂಡಿರುವ ವಿಜಯ್ ದೇವರಕೊಂಡ ನನಗೆ ಪ್ರತಿಕ್ಷಣ ಸ್ಮರಣೀಯ. ಆದರೆ, ಈ ಕ್ಷಣ ಟೈಸನ್ ಭೇಟಿಯಾಗಿದ್ದು ಅವಿಷ್ಮರಣೀಯ ಎಂದು ಟ್ವೀಟ್ ಮಾಡಿದ್ದಾರೆ.

ಚಾರ್ಮಿ ಕೌರ್ ಸಹ, ಟೈಸನ್ ಅವರ ಒಡನಾಟವನ್ನು ಕೊಂಡಾಡಿದ್ದಾರೆ. ಟೈಸನ್ ಅವರನ್ನು ಭೇಟಿಯಾಗಿದ್ದು ನನಗೆ ಅತ್ಯದ್ಭುತ ಹೆಮ್ಮೆಯ ವಿಷಯ ಎಂದಿದ್ಧಾರೆ.

ಟೈಸನ್‌ಗೆ ಬಾಲಕೃಷ್ಣ ಧ್ವನಿ

ಲೈಗರ್‌ನಲ್ಲಿ ಟೈಸನ್‌ ಅವರಿಗೆ ಬಾಲಕೃಷ್ಣಧ್ವನಿ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಲೈಗರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ಪುರಿ ಜಗನ್ನಾಥ್ ಅವರು ಟೈಸನ್‌ ಅವರಿಗೆ ಧ್ವನಿ ನೀಡುವಂತೆ ಬಾಲಯ್ಯ ಅವರನ್ನು ಕೋರಿದ್ದರು. ಅದಕ್ಕೆ ಬಾಲಯ್ಯ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ಲೈಗರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಯನ್‌ ಮತ್ತು ಟೈಗರ್‌ ಶಬ್ದಗಳನ್ನು ಜೋಡಿಸಿ ಲೈಗರ್‌ ಶೀರ್ಷಿಕೆ ಇಡಲಾಗಿದೆ. ಹುಲಿ– ಸಿಂಹದ ಸಂಕರ ತಳಿ ಎಂಬ ಅರ್ಥ ಕೊಡುತ್ತದೆ. ಟ್ಯಾಗ್‌ಲೈನ್‌ನಲ್ಲೂ ‘ಸಾಲಾ ಕ್ರಾಸ್‌ ಬ್ರೀಡ್‌’ ಎಂದು ಹೇಳಲಾಗಿದೆ.

ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೊಂದು ಆ್ಯಕ್ಷನ್‌ ಸಿನಿಮಾ ಆಗಿದ್ದು, ನಟ ವಿಜಯ್‌ ದೇವರಕೊಂಡ ಮಾರ್ಷಲ್ ಆರ್ಟ್ ಪಟುವಾಗಿ ಕಾಣಿಸಿಕೊಂಡಿದ್ದಾರೆ.ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅನನ್ಯಾ ಪಾಂಡೆ,ರಮ್ಯಾ ಕೃಷ್ಣನ್, ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಮಕರಂದ್ ದೇಶಪಾಂಡೆ, ಗೆಟಪ್ ಶ್ರೀನು ನಟಿಸಿದ್ದಾರೆ.

ಬಹುನಿರೀಕ್ಷಿತ ಈ ಸಿನಿಮಾಗೆ ವಿಷ್ಣು ಶರ್ಮಾ ಛಾಯಾಗ್ರಹಣ, ಜಾನಿ ಶೇಖ್ ಬಾಷಾ ಕಲಾ ನಿರ್ದೇಶನ, ಜುನೈದ್ ಸಿದ್ಧಿಕಿ ಸಂಕಲನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.