ADVERTISEMENT

ಅ. 11ರಿಂದ 'ದಿ ವಿಲನ್' ಚಿತ್ರದ ಟಿಕೆಟ್ ಮಾರಾಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 17:56 IST
Last Updated 1 ಅಕ್ಟೋಬರ್ 2018, 17:56 IST
   

ಬೆಂಗಳೂರು: ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಮತ್ತು ನಟ ಕಿಚ್ಚ ಸುದೀಪ್ ನಟಿಸಿರುವ 'ದಿ ವಿಲನ್' ಸಿನಿಮಾ ಇದೇ 18ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಪ್ರೇಕ್ಷಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ 11ರಿಂದಲೇ ಮುಂಗಡವಾಗಿ ಟಿಕೆಟ್ ಮಾರಾಟಕ್ಕೆ ಚಿತ್ರತಂಡ ನಿರ್ಧರಿಸಿದೆ.

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಚಿತ್ರದ ನಿರ್ದೇಶಕ ಪ್ರೇಮ್, 'ಶಿವಣ್ಣ ಮತ್ತು ಸುದೀಪ್ ಒಟ್ಟಾಗಿ ನಟಿಸಿರುವುದರಿಂದ ಈ ಇಬ್ಬರು ನಟರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಸಿನಿ ಪ್ರೇಮಿಗಳಲ್ಲೂ ಕುತೂಹಲ ಹೆಚ್ಚಿರುವುದು ಸತ್ಯ. ಅಭಿಮಾನಿಗಳಿಗೆ ಅನುಕೂಲ ಕಲ್ಪಿಸಲು ಎಲ್ಲಾ ಚಿತ್ರಮಂದಿರಗಳಲ್ಲೂ ಮುಂಗಡವಾಗಿ ಟಿಕೆಟ್ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ' ಎಂದು ಸ್ಪಷ್ಟಪಡಿಸಿದರು.

ಗಲಾಟೆ ಮಾಡಿದ್ರೆ ಎಂದಿಗೂ ಥಿಯೇಟರ್‌ಗೆ ಬರಲ್ಲ
'ಅಭಿಮಾನಿಗಳ ಜೊತೆಗೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವುದೆಂದರೆ ನನಗಿಷ್ಟ. ಆದರೆ, ಅಭಿಮಾನಿಗಳು ದಿ ವಿಲನ್ ಚಿತ್ರ ವೀಕ್ಷಣೆ ವೇಳೆ ಘರ್ಷಣೆ ಸೃಷ್ಟಿಸಿದರೆ ನಾನು ಇನ್ನೆಂದಿಗೂ ಚಿತ್ರಮಂದಿರದಲ್ಲಿ ಅಭಿಮಾನಿಗಳೊಟ್ಟಿಗೆ ಕುಳಿತು ಸಿನಿಮಾ ನೋಡುವುದಿಲ್ಲ' ಎಂದು 'ಹ್ಯಾಟ್ರಿಕ್ ಹೀರೊ' ಶಿವರಾಜ್ ಕುಮಾರ್ ಹೇಳಿದರು.

ದಿ ವಿಲನ್ ಒಂದು ಸಿನಿಮಾ ಅಷ್ಟೇ. ಅದನ್ನು ಸಿನಿಮಾವಾಗಿಯೇ ಅಭಿಮಾನಿಗಳು ನೋಡಬೇಕು. ಹಾಗೆ ನೋಡಿದರೆ ಯಾರಿಗೂ ತೊಂದರೆಯಾಗುವುದಿಲ್ಲ. ಗಲಾಟೆ ಮಾಡಿದರೆ‌ ನನ್ನ ತಾಯಿ ಆಣೆಗೂ ಇನ್ನು ಮುಂದೆ ಥಿಯೇಟರ್ ಗೆ ಬರುವುದಿಲ್ಲ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಈ ಮಾತು ನನ್ನ ಮತ್ತು ಸುದೀಪ್ ಚಿತ್ರಕ್ಕೆ ಮಾತ್ರ ಸೀಮಿತವಲ್ಲ. ದರ್ಶನ್, ಪುನೀತ್, ಯಶ್ ಚಿತ್ರಗಳಿಗೂ ಅನ್ವಯಿಸುತ್ತದೆ. ಸಿನಿಮಾ ಇಂಡಸ್ಟಿಯಲ್ಲಿ ಎಲ್ಲಾ ನಟರೂ ಒಂದೇ. ಇಬ್ಭಾಗ ಮಾಡುವುದು ಸರಿಯಲ್ಲ ಎಂದರು.

ಪರಭಾಷಾ ಚಿತ್ರಗಳ ಹಾವಳಿಗೆ ಭಯಪಡಬೇಕಿಲ್ಲ. ಚಂದನವನದಲ್ಲಿಯೂ ಉತ್ತಮ ಚಿತ್ರಗಳು ನಿರ್ಮಾಣವಾಗುತ್ತಿವೆ.
ಪರಭಾಷೆಯಲ್ಲಿ ಬಜೆಟ್ ದೊಡ್ಡದು. ಕನ್ನಡದ ಚಿತ್ರಗಳು ಶ್ರೀಮಂತ ಸಂಸ್ಕೃತಿಯನ್ನು ಹೊಂದಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT