ADVERTISEMENT

‘ದಿ ವಿಲನ್‌‘ ಟೀಸರ್‌ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ: ಕಿಚ್ಚ ಸುದೀಪ್‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 7:31 IST
Last Updated 21 ಸೆಪ್ಟೆಂಬರ್ 2019, 7:31 IST
   

ಬೆಂಗಳೂರು:‘ದಿ ವಿಲನ್‌‘ ಸಿನಿಮಾದ ಟೀಸರ್‌ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ನಟ ಸುದೀಪ್‌ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಪ್ರೇಮ್ ನಿರ್ದೇಶನದ ದಿ ವಿಲನ್‌ ಸಿನಿಮಾದ ಟೀಸರ್‌ ಶಿವರಾಜ್‌ ಕುಮಾರ್ ಮತ್ತು ಸುದೀಪ್‌ ಅಭಿಮಾನಿಗಳ ನಡುವಿನ ಅಸಮಾದಾನಕ್ಕೆ ಕಾರಣವಾಗಿತ್ತು.

ದಿ ವಿಲನ್‌ ಸಿನಿಮಾದ ಟೀಸರ್‌ನಲ್ಲಿ ಶಿವರಾಜ್ ಕುಮಾರ್‌ ಅವರಿಗೆ ಮಹತ್ವ ನೀಡಿಲ್ಲ ಎಂದು ಶಿವರಾಜ್‌ ಕುಮಾರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿ ನೂರಾರು ಪೋಸ್ಟ್‌ಗಳನ್ನು ಹಾಕಿದ್ದರು. ಶಿವರಾಜ್‌ ಕುಮಾರ್‌ ಅಭಿಮಾನಿಗಳ ಟೀಕೆಗಳನ್ನು ಖಂಡಿಸಿ ಸುದೀಪ್ ಅಭಿಮಾನಿಗಳು ಹಲವು ಪೋಸ್ಟ್‌ಗಳನ್ನು ಹಾಕಿದ್ದಾರೆ.

ADVERTISEMENT

ಏನಿದು ವಿವಾದ...?

ಪ್ರೇಮ್‌ ನಿರ್ದೇಶನದ ದಿ ವಿಲನ್‌ ಸಿನಿಮಾದ ಟೀಸರ್‌ ಜೂನ್‌ 28 ರಂದು ಬಿಡುಗಡೆಯಾಗಿತ್ತು. ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸ್ಟಾರ್‌ ನಟರಾದ ಶಿವರಾಜ್‌ ಕುಮಾರ್‌ ಮತ್ತು ಸುದೀಪ್‌ ನಟಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರೇಮ್‌ ಇಬ್ಬರಿಗೂಪ್ರತ್ಯೇಕವಾಗಿ ಒಂದೊಂದು ಟೀಸರ್ ಬಿಡುಗಡೆ ಮಾಡಿದ್ದರು. ಸುದೀಪ್‌ ಅವರ ಟೀಸರ್‌ ಅನ್ನು ಯುಟ್ಯೂಬ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು,ಶಿವರಾಜ್‌ ಕುಮಾರ್‌ ಅವರ ಟೀಸರ್‌ ಅನ್ನು ಹತ್ತು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ಉಭಯ ನಟರ ಟೀಸರ್‌ ವೀಕ್ಷಣೆ ವಿವಾದದ ಸ್ವರೂಪ ಪಡೆದುಕೊಂಡಿತ್ತು.

ಶಿವಣ್ಣ ಟೀಸರ್‌ ಅನ್ನು ಕಡಿಮೆ ಜನ ವೀಕ್ಷಣೆ ಮಾಡಿರುವುದು ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದರಲ್ಲಿ ಶಿವರಾಜ್‌ ಕುಮಾರ್‌ಗೆ ಹೆಚ್ಚಿನ ಮಹತ್ವ ನೀಡಿಲ್ಲ ಎಂದು ಅವರ ಅಭಿಮಾನಿಗಳು ದೂರಿದ್ದಾರೆ. ಕೆಲವು ನಿರ್ದೇಶಕರು ಮತ್ತು ನಟರು ಸುದೀಪ್ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶಿವಣ್ಣ ಟೀಸರ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಶಿವಣ್ಣ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿವಾದದ ಬಗ್ಗೆ ಶಿವರಾಜ್‌ ಕುಮಾರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಸುದೀಪ್‌ ಟ್ವಿಟ್‌ ಮಾಡುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

‘ದಿ ವಿಲನ್‌ ಸಿನಿಮಾದಲ್ಲಿ ನಾವಿಬ್ಬರೂ ನಟಿಸಿದ್ದಕ್ಕೆ ನನಗೆ ಹೆಮ್ಮೆಯಿದೆ. ಕೆಲವರು ಸುಮ್ಮನೇ ವಿವಾದ ಮಾಡುತ್ತಿದ್ದಾರೆ. ಇದು ನನಗೆ ಬೇಸರ ತಂದಿದೆ, 'ಶಿವರಾಜ್‌ ಕುಮಾರ್‌ ಅವರು ನನಗಿಂತ ಹಿರಿಯ ನಟರು. ಅವರ ಬಗ್ಗೆ ಎಲ್ಲರಿಗೂ ಗೌರವ, ಅಭಿಮಾನವಿದೆ. ಯಾರೂ ಯಾರನ್ನೂ ಕಡೆಗಣಿಸುವ ಮಾತೇ ಇಲ್ಲ. ಈ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ' ಎಂದು ಸುದೀಪ್ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.