ADVERTISEMENT

ಅರ್ಧ ಎಕರೆಯಲ್ಲಿ ವಿಷ್ಣುವರ್ಧನ್‌ ದರ್ಶನ ಕೇಂದ್ರ: ವೀರಕಪುತ್ರ ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:51 IST
Last Updated 19 ಆಗಸ್ಟ್ 2025, 4:51 IST
<div class="paragraphs"><p>ವಿಷ್ಣುವರ್ಧನ್‌</p></div>

ವಿಷ್ಣುವರ್ಧನ್‌

   

ಬೆಂಗಳೂರು: ‘ನಟ ಸುದೀಪ್‌ ಅವರ ನೇತೃತ್ವದಲ್ಲಿ ಕೆಂಗೇರಿ ಸಮೀಪ ಅಭಿಮಾನ್‌ ಸ್ಟುಡಿಯೊದಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ವಿಷ್ಣುವರ್ಧನ್‌ ಅವರ ದರ್ಶನ ಕೇಂದ್ರ ಮಾಡಲಿದ್ದೇವೆ’ ಎಂದು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್‌ ಹೇಳಿದರು. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆ.2ರಂದು ಸುದೀಪ್‌ ಅವರ ಜನ್ಮದಿನದಂದು ಈ ದರ್ಶನ ಕೇಂದ್ರ ಹೇಗಿರಲಿದೆ ಎನ್ನುವ ಮಾದರಿಯನ್ನು ಬಿಡುಗಡೆ ಮಾಡುತ್ತೇವೆ. ಸೆ.18ಕ್ಕೆ ಅಡಿಗಲ್ಲು ಹಾಕುತ್ತೇವೆ. ಜಾಗ ಎಲ್ಲಿದೆ ಎನ್ನುವುದನ್ನು ಕೆಲವೇ ದಿನಗಳಲ್ಲಿ ಹೇಳುತ್ತೇವೆ. ಇಲ್ಲಿರುವ ಅರ್ಧ ಎಕರೆ ಜಾಗವನ್ನು ಸುದೀಪ್‌ ಅವರೇ ಖರೀದಿಸಲಿದ್ದಾರೆ. ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಅವರ ಜನ್ಮದಿನಾಚರಣೆಯನ್ನು ಆಚರಿಸಲು ಒಂದು ಜಾಗ ಈಗಿಲ್ಲ. ಹೀಗಾಗಿ ಒಂದು ಪರ್ಯಾಯ ದರ್ಶನ ಕೇಂದ್ರ ಬೇಕಾಗಿದೆ. ಒಂದು ವರ್ಷದೊಳಗೆ ಈ ಕೇಂದ್ರದ ನಿರ್ಮಾಣ ಆಗಲಿದೆ. ಇಲ್ಲಿ ವಿಷ್ಣುವರ್ಧನ್‌ ಅವರ 25 ಅಡಿ ಎತ್ತರದ ಪುತ್ಥಳಿ, ಗ್ರಂಥಾಲಯ ಮಾಡುವ ಯೋಜನೆ ಇದೆ. ಅಭಿಮಾನಿಗಳಿಂದಲೇ ಈ ದರ್ಶನ ಕೇಂದ್ರ ನಿರ್ಮಾಣವಾಗಲಿದೆ’ ಎಂದರು. 

ADVERTISEMENT

‘ಮೈಸೂರಿನ ಸ್ಮಾರಕಕ್ಕೆ ಅದರದ್ದೇ ಆದ ಘನತೆ ಇದೆ. ದರ್ಶನ ಕೇಂದ್ರ ಇದಕ್ಕೆ ಸಮ ಎಂದು ಹೇಳುವುದಿಲ್ಲ. ಇದನ್ನು ಹೇಗೆ ಪ್ರವಾಸಿ ಕೇಂದ್ರವಾಗಿ ಮತ್ತು ಅರ್ಥಪೂರ್ಣ ಕೆಲಸಗಳಿಗೆ ವೇದಿಕೆಯಾಗಿ ಬಳಸಿಕೊಳ್ಳಲಿದ್ದೇವೆ ಎನ್ನುವುದನ್ನು ಸೆ.2ರಂದು ಹೇಳುತ್ತೇವೆ. ವಿಷ್ಣುವರ್ಧನ್‌ ಅವರ ಪುಣ್ಯಭೂಮಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಅಭಿಮಾನ್‌ ಸ್ಟುಡಿಯೊ ಜಾಗವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಿದ್ದೇವೆ. ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿ ಹೋರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು. 

‘ವಿಷ್ಣುವರ್ಧನ್‌ ಅವರ ಸ್ಮಾರಕ ವಿಚಾರ ಬಂದಾಗಲಷ್ಟೇ ಕೆಲವರು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಾರೆ. ಬಹುತೇಕರು ಈ ವಿಷಯದಿಂದ ಅಂತರ ಕಾಪಾಡಿಕೊಂಡಿದ್ದು, ಇದು ಖಂಡನೀಯ’ ಎಂದು ಹೇಳಿದರು. 

‘ವಿಷ್ಣುವರ್ಧನ್‌ ಅವರ ಅಮೃತ ಮಹೋತ್ಸವಕ್ಕೆ ಕುಟುಂಬದವರು ಬರುತ್ತಾರೆ ಎಂದು ಕಾದೆವು. ಅವರು ಬರಲು ಸಾಧ್ಯವಿಲ್ಲ ಎಂದು ತಿಳಿಸಿದರು. ಹೀಗಾಗಿ ಮುಂದೂಡಿದ್ದೇವೆ. ಸೆ.18ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಸರಳವಾಗಿ ನಡೆಯಲಿದೆ’ ಎಂದು ತಿಳಿಸಿದರು. 

‘ಅಭಿಮಾನಿಗಳ ಹೃದಯವೇ ನಿಮಗೆ ಗುಡಿ’

ನಟ ವಿಷ್ಣುವರ್ಧನ್‌ ಅವರ ಸ್ಮಾರಕ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ನಟಿ ರಮ್ಯಾ ‘ಸಾಧಕನಿಗೆ ಸಾವಿಲ್ಲ ಅಭಿಮಾನಿಗಳ ಹೃದಯವೇ ನಿಮಗೆ ಗುಡಿ’ ಎಂದು ಉಲ್ಲೇಖಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.