ADVERTISEMENT

ವಿಷ್ಣುವರ್ಧನ್‌ ಅಂತ್ಯಕ್ರಿಯೆ ನಡೆದ ಜಾಗದಲ್ಲೇ ಸ್ಮಾರಕ: ನಿರ್ಮಾಪಕ ಕೆ.ಮಂಜು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 20:38 IST
Last Updated 19 ಆಗಸ್ಟ್ 2025, 20:38 IST
ಕೆ.ಮಂಜು 
ಕೆ.ಮಂಜು    

ಬೆಂಗಳೂರು: ‘ನಟ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ಆದ ಜಾಗದಲ್ಲೇ ಸ್ಮಾರಕವನ್ನು ಖಂಡಿತವಾಗಿಯೂ ಕಟ್ಟುತ್ತೇವೆ’ ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ. 

ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಅಂತ್ಯಕ್ರಿಯೆ ನಡೆದ ಅಭಿಮಾನ್‌ ಸ್ಟುಡಿಯೊದ ಸ್ಥಳದಲ್ಲೇ 10–12 ಗುಂಟೆ ಜಾಗ ಕೊಡಲು ನಟ ಟಿ.ಎನ್‌. ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್‌ ಅವರಿಗೆ ಮನವಿ ಮಾಡಿದ್ದೇವೆ. ಅವರು ಒಂದು ವಾರ ಸಮಯ ತೆಗೆದುಕೊಂಡಿದ್ದಾರೆ. ಅವರು ಜಾಗ ಕೊಡದೇ ಇದ್ದರೆ ಕಾನೂನು ಹೋರಾಟ ಮಾಡುತ್ತೇವೆ. ಅಂತ್ಯಕ್ರಿಯೆ ಆದ ಜಾಗವೇ ಮೂಲ ದೇವಸ್ಥಾನ. ಸರ್ಕಾರ ಈ 20 ಎಕರೆ ಜಾಗ ಕೊಟ್ಟಿರುವುದು ಸ್ಟುಡಿಯೊ ನಿರ್ಮಾಣಕ್ಕೆ. 2004ರಲ್ಲಿ ಯಾವ ಪ್ರಭಾವಿ ಇಲ್ಲಿನ ಭೂಮಿ ಖರೀದಿಸಿದರು ಎಂದು ಗೊತ್ತಿದೆ. ಈ ಜಾಗದ ಮೇಲೆ ಕೇಸ್‌ ಹಾಕಬಹುದು. ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಮರುಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ತಿಳಿಸಿ ಮುಂದಿನ ಸೆ.18ರಂದು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು’ ಎಂದರು. 

‘ಸುದೀಪ್‌ ಅವರು ಸ್ಮಾರಕ ನಿರ್ಮಿಸಲು ಜಾಗ ತೆಗೆದುಕೊಂಡಿರುವುದು ಸ್ವಾಗತಾರ್ಹ. ಅವರು ಮನನೊಂದು ಈ ನಿರ್ಧಾರ ಮಾಡಿದ್ದಾರೆ. ನಾವು ಅವರ ಜೊತೆಯಲ್ಲಿ ಇರುತ್ತೇವೆ. ನಮ್ಮ ನಿರ್ಧಾರವನ್ನೂ ಸುದೀಪ್‌ ಅವರಿಗೆ ತಿಳಿಸುತ್ತೇವೆ. ವಿಷ್ಣುವರ್ಧನ್‌ ಅವರ ಮನೆಯಲ್ಲಿ ಅನ್ನ ತಿಂದಿದ್ದೇವೆ. ಎಲ್ಲಾ ಹೋರಾಟ ಅವರಿಗೋಸ್ಕರ. ಅವರು ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು. ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯೋಣ’ ಎಂದು ಮನವಿ ಮಾಡಿದರು.    

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.