ಇಂದು (ಸೆ.18) ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನ. ಕಳೆದ ವರ್ಷದವರೆಗೂ ಅಭಿಮಾನ್ ಸ್ಟುಡಿಯೊದ ಆವರಣದಲ್ಲಿದ್ದ ವಿಷ್ಣುವರ್ಧನ್ ಅವರ ಸ್ಮಾರಕದ ಜಾಗದಲ್ಲೇ ಅವರ ಜನ್ಮದಿನ ಆಚರಿಸಲಾಗುತ್ತಿತ್ತು. ಸಾವಿರಾರು ಅಭಿಮಾನಿಗಳು ಅಲ್ಲಿಗೆ ಭೇಟಿ ನೀಡಿ ನೆಚ್ಚಿನ ನಟನಿಗೆ ಪುಷ್ಪನಮನ ಸಲ್ಲಿಸಿ, ಪೂಜೆ ಮಾಡುತ್ತಿದ್ದರು.
ಇದೀಗ ಅಲ್ಲಿದ್ದ ಸ್ಮಾರಕವನ್ನು ತೆರವು ಮಾಡಿರುವ ಕಾರಣ ಈ ಬಾರಿ ಜನ್ಮದಿನವನ್ನು ಎಲ್ಲಿ ಆಚರಿಸಬೇಕು ಎನ್ನುವ ಗೊಂದಲದಲ್ಲಿ ಅಭಿಮಾನಿಗಳಲ್ಲಿದೆ.
ಅಭಿಮಾನ್ ಸ್ಟುಡಿಯೊ ಆವರಣದಲ್ಲಿ ಜನ್ಮದಿನ ಆಚರಣೆಗೆ ಸಲ್ಲಿಸಲಾಗಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಸ್ಟುಡಿಯೊಗೆ ಸಮೀಪವಾಗಿಯೇ ಒಂದು ಜಾಗದಲ್ಲಿ ಜನ್ಮದಿನ ಆಚರಣೆ, ಅನ್ನದಾನ, ರಕ್ತದಾನ, ನೇತ್ರದಾನ ಪ್ರತಿಜ್ಞೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ನಿರ್ಧರಿಸಿದ್ದರು. ‘ಅಕ್ಕಪಕ್ಕದಲ್ಲೂ ಕಾರ್ಯಕ್ರಮ ಮಾಡಬಾರದು ಎಂದು ಪೊಲೀಸರು ಸೂಚಿಸಿದ್ದಾರೆ. ಕೆಂಗೇರಿ ವ್ಯಾಪ್ತಿಯ ಇನ್ನೂ ಒಂದೆರಡು ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಶಾಸಕರಾದ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಿ ವಿನಂತಿಸಿದೆವು. ಅವರು ಸರಿಯಾಗಿ ಸ್ಪಂದಿಸಲಿಲ್ಲ. ನಾವು ಯಾರೂ ಅಭಿಮಾನ್ ಸ್ಟುಡಿಯೊ ಬಳಿ ಹೋಗುವುದು ಬೇಡ’ ಎಂದು ಶ್ರೀನಿವಾಸ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಷ್ಣುವರ್ಧನ್ ಅವರ 25 ಅಡಿ ಎತ್ತರದ ಪುತ್ಥಳಿಯನ್ನೊಳಗೊಂಡ ದರ್ಶನ ಕೇಂದ್ರವನ್ನು ಕೆಂಗೇರಿ ಸಮೀಪ ಅರ್ಧ ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಸುದೀಪ್, ವೀರಕಪುತ್ರ ಶ್ರೀನಿವಾಸ್, ಅಶೋಕ್ ಖೇಣಿ ಮತ್ತು ಅಭಿಮಾನಿಗಳ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಈ ದರ್ಶನ ಕೇಂದ್ರದ ನೀಲನಕ್ಷೆ ಸೆ.18ರಂದು ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.