ಬಹುತೇಕ ಹೊಸಬರಿಂದ ಕೂಡಿರುವ ‘ವೃಷಭ’ ಚಿತ್ರ ಚಿತ್ರೀಕರಣ ಮುಗಿಸಿ ಬಿಡುಗಡೆ ಹಂತದಲ್ಲಿದೆ. ಆದರೆ ಮೋಹನ್ ಲಾಲ್ ಅಭಿನಯದ ತೆಲುಗು ಚಿತ್ರ ‘ವೃಷಭ’ ಕೂಡ ಬಿಡುಗಡೆ ಘೋಷಿಸಿದ್ದು ಕನ್ನಡದ ಚಿತ್ರಕ್ಕೆ ಶೀರ್ಷಿಕೆ ಸಂಕಷ್ಟ ಎದುರಾಗಿದೆ.
ಉಮೇಶ್ ಹೆಬ್ಬಾಳ ನಟಿಸಿ, ನಿರ್ದೇಶಿಸಿರುವ ಚಿತ್ರವಿದು. ‘ಕನ್ನಡದಲ್ಲಿ ‘ವೃಷಭ’ ಶೀರ್ಷಿಕೆ ಮೂರು ವರ್ಷಗಳಿಂದ ನಮ್ಮ ಬಳಿಯೇ ಇದೆ. ಆದರೆ ಈಗ ತೆಲುಗು, ಮಲಯಾಳದ ‘ವೃಷಭ’ ಚಿತ್ರದ ಪೋಸ್ಟರ್ ಕನ್ನಡದಲ್ಲಿಯೂ ಬಿಡುಗಡೆಗೊಂಡಿದೆ. ಆ ಚಿತ್ರ ಘೋಷಣೆಯಾದಾಗಲೇ ಶೀರ್ಷಿಕೆ ನಮ್ಮ ಬಳಿ ಇದೆ ಎಂದು ನಿರ್ಮಾಣ ಸಂಸ್ಥೆಗೆ, ನಿರ್ದೇಶಕರಾದ ನಂದಕಿಶೋರ್ ಅವರಿಗೆ ತಿಳಿಸಿದ್ದೆವು. ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾವುದಿಲ್ಲ ಎಂಬ ಭರವಸೆ ನಿರ್ದೇಶಕರಿಂದ ಸಿಕ್ಕಿತ್ತು. ಆದರೆ ಈಗ ಕನ್ನಡದಲ್ಲಿಯೂ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಮ್ಮ ಇಡೀ ಚಿತ್ರ ಈ ಶೀರ್ಷಿಕೆ ಮೇಲೆಯೇ ಇದೆ’ ಎಂದು ಉಮೇಶ್ ಹೆಬ್ಬಾಳ ಆತಂಕ ವ್ಯಕ್ತಪಡಿಸಿದರು.
‘ಈ ಶೀರ್ಷಿಕೆಯ ಮೇಲೆಯೇ ಶೀರ್ಷಿಕೆ ಗೀತೆ ಮಾಡಿದ್ದೇವೆ. ಇಡೀ ಕಥೆ ನಿಂತಿದೆ. ಈಗ ಅದೇ ಹೆಸರಿನ ಚಿತ್ರ ಕನ್ನಡದಲ್ಲಿಯೂ ತೆರೆ ಕಂಡರೆ ನಮಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ದೂರು ನೀಡಿದ್ದೇವೆ. ನ್ಯಾಯಾಲಯಕ್ಕೂ ಹೋಗುತ್ತೇವೆ. ನಮ್ಮ ಚಿತ್ರ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಗೂಳಿ ಥರದ ವ್ಯಕ್ತಿತ್ವವಿರುವ ರೈತನೊಬ್ಬನ ಕಥೆ ನಮ್ಮ ಚಿತ್ರದಲ್ಲಿದೆ’ ಎಂದು ಅವರು ಹೇಳಿದರು.
ರಾಯ ಬಡಿಗೇರ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಪ್ರಶಾಂತ್ ಸಾಗರ್ ಚಿತ್ರ ಛಾಯಾಚಿತ್ರಗ್ರಹಣ, ಪ್ರಣವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.