ಲಾಸ್ ಏಂಜಲೀಸ್: 'ಫಾಸ್ಟ್ ಆ್ಯಂಡ್ ಫ್ಯೂರಿಯಸ್' ಸರಣಿಯ ಚಿತ್ರಗಳ ಮೂಲಕ ಹೆಸರುವಾಸಿಯಾದ ಹಾಲಿವುಡ್ ನಟ ವಿನ್ ಡೀಸೆಲ್, ಮುಂಬರುವ ಈ ಸರಣಿಯ ಚಿತ್ರಕ್ಕೆ ಪೋರ್ಚುಗೀಸ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಪಾತ್ರವೊಂದನ್ನು ಸೃಷ್ಟಿಸಿದ್ದರಾ ಎಂಬ ಸುದ್ದಿ ಹರಿದಾಡುತ್ತಿದೆ.
ಇದಕ್ಕೆ ಕಾರಣ ವಿನ್ ಡೀಸೆಲ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್. ಡೀಸೆಲ್ ಶನಿವಾರ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರೊನಾಲ್ಡೊ ಜೊತೆಗಿನ ಚಿತ್ರ ಹಂಚಿಕೊಂಡಿದ್ದು,
‘ಫಾಸ್ಟ್ ಮಿಥಾಲಜಿಯಲ್ಲಿ (ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾ ಸರಣಿ) ಅವರು ಇರುತ್ತಾರಾ ಎಂದು ಪ್ರತಿಯೊಬ್ಬರೂ ಕೇಳುತ್ತಿದ್ದರು. ಅವರು ನೈಜವಾದವರು. ಅವರಿಗಾಗೇ ಒಂದು ಪಾತ್ರ ಸೃಷ್ಟಿಸಿದೆವು' ಎಂದು ಬರೆದುಕೊಂಡಿದ್ದಾರೆ.
2001ರಲ್ಲಿ ಬಿಡುಗಡೆಯಾದ ‘ಫಾಸ್ಟ್ ಆ್ಯಂಡ್ ಫ್ಯೂರಿಯಸ್’ನ ಮೊದಲ ಭಾಗದ ಚಿತ್ರದಲ್ಲಿ ಡೀಸೆಲ್, ಡೊಮಿನಿಕ್ ಟೊರೆಟ್ಟೊ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಯವರೆಗೆ, ಈ ಸರಣಿಯಲ್ಲಿ ಒಟ್ಟು 10 ಚಿತ್ರಗಳು ಬಂದಿವೆ. 11ನೇ ಭಾಗದಲ್ಲಿ ರೊನಾಲ್ಡೊ ಇರುತ್ತಾರಾ ಎಂಬ ಕುತೂಹಲ ಮನೆ ಮಾಡಿದೆ.
ಈ ಸರಣಿಯ ‘ಫಾಸ್ಟ್ ಎಕ್ಸ್: ಪಾರ್ಟ್ 2’2027ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.
ಲೂಯಿಸ್ ಲೆಟೆರಿಯರ್ ನಿರ್ದೇಶಿಸಿರುವ ‘ಫಾಸ್ಟ್ ಎಕ್ಸ್: ಭಾಗ 2’ರಲ್ಲಿ ಡ್ವೇನ್ ಜಾನ್ಸನ್ (ಲ್ಯೂಕ್ ಹಾಬ್ಸ್), ಜೇಸನ್ ಸ್ಟ್ಯಾಥಮ್ (ಡೆಕ್ಕರ್ಡ್ ಶಾ), ಜೇಸನ್ ಮೊಮೊವಾ (ಡಾಂಟೆ ರೇಯೆಸ್), ಜೋರ್ಡಾನಾ ಬ್ರೂಸ್ಟರ್ (ಮಿಯಾ ಟೊರೆಟ್ಟೊ) ಮತ್ತು ಮಿಚೆಲ್ ರೊಡ್ರಿಗಸ್ (ಲೆಟ್ಟಿ ಒರ್ಟಿಜ್) ಸೇರಿದಂತೆ ಹಲವರ ತಾರಾಗಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.