ADVERTISEMENT

ವಿದ್ಯಾರ್ಥಿಗಳಿಗಾಗಿ ’ವೀಕ್‌ ಡೇ ವಿತ್‌ ರಮೇಶ್‌’

ಕೆ.ಎಂ.ಸಂತೋಷ್‌ ಕುಮಾರ್‌
Published 16 ಜೂನ್ 2020, 7:24 IST
Last Updated 16 ಜೂನ್ 2020, 7:24 IST
ರಮೇಶ್‌ ಅರವಿಂದ್‌
ರಮೇಶ್‌ ಅರವಿಂದ್‌   

ಸಿನಿಮಾ ನಟನೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಷ್ಟೇ ರಮೇಶ್‌ ಅರವಿಂದ್‌ ಜನಪ್ರಿಯರಾಗಿಲ್ಲ. ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ ನಿರ್ಮಾಣದಲ್ಲೂ ಅವರು ಕೊಡುವ ಟಿಪ್ಸ್‌ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ. ಸಿನಿಮಾ ಸಂಬಂಧಿ ಚಟುವಟಿಕೆಗಳ ಜತೆಗೆ ಬಿಡುವು ಸಿಕ್ಕಾಗಲೆಲ್ಲ ಅವರು ವಿದ್ಯಾರ್ಥಿಗಳು, ಯುವಜನರು, ಆಸಕ್ತರಿಗೆ ಹಾಗೂ ಕಾರ್ಪೋರೇಟ್‌ ವಲಯದವರಿಗೆ ವ್ಯಕ್ತಿತ್ವ ವಿಕಸನ ಕುರಿತ ಉಪನ್ಯಾಸವನ್ನು ವೇದಿಕೆಯ ಸಮಾರಂಭಗಳಲ್ಲಿ, ಆನ್‌ಲೈನ್‌ನಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ನೀಡಿದ್ದಾರೆ.

ಈಗಲೂ ನೀಡುತ್ತಲೇ ಇದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಸಾಧಕರೊಂದಿಗೆ ಅವರು ನಡೆಸಿಕೊಡುತ್ತಿದ್ದ ‘ವೀಕ್‌ ಎಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮ ವೀಕ್ಷಿಸಲು ಮನೆಮಂದಿಯೆಲ್ಲ ಕಾದು ಕುಳಿತುಕೊಳ್ಳುತ್ತಿದ್ದರು. ಮತ್ತೆ ‘ವೀಕ್‌ ಎಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮವನ್ನು ಯಾವಾಗ ಶುರು ಮಾಡುತ್ತೀರಿ ಎನ್ನುವ ಪ್ರಶ್ನೆಯನ್ನು ಅವರ ಮುಂದೆ ಹಲವು ಮಂದಿ ಆಗಾಗ ವ್ಯಕ್ತಪಡಿಸುತ್ತಲೇ ಇದ್ದಾರಂತೆ.

‘ವೀಕ್‌ ಎಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದ ಮೂಲಕ ಟಿ.ವಿ ವೀಕ್ಷಕರು ಮತ್ತು ಅಭಿಮಾನಿಗಳ ಮುಂದೆ ಮುಖಾಮುಖಿಯಾಗುತ್ತಿದ್ದ ರಮೇಶ್‌ ಅವರು ಈ ಬಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಮುಂದೆ ಆನ್‌ಲೈನ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಆರಂಭಿಸಿರುವ ‘ವಿಜಯೀ ಭವ’ ಯೂಟ್ಯೂಬ್‌ ಚಾನೆಲ್‌ನಲ್ಲಿ ರಮೇಶ್ ಅರವಿಂದ್‌ಅವರು‌ ರಾಜ್ಯದ ಲಕ್ಷಾಂತರ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ‘ವೀಕ್‌ ಡೇ ವಿತ್‌ ರಮೇಶ್‌’ ಶೀರ್ಷಿಕೆ ನೀಡಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿನ ಸೂತ್ರಗಳನ್ನು ರಮೇಶ್‌ ಹೇಳಿಕೊಡಲಿದ್ದಾರೆ. ಇವರ ಜತೆಗೆ ಅಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ಅವರೂ ಉಪಸ್ಥಿತರಿರಲಿದ್ದಾರೆ.

ADVERTISEMENT

ಇದೇ ಗುರುವಾರ (ಜೂನ್ 18ರಂದು) ಬೆಳಿಗ್ಗೆ 10:30ಕ್ಕೆ ವಿಜಯೀ ಭವ ಯುಟ್ಯೂಬ್ ಚಾನೆಲ್‌ನಲ್ಲಿ ‘ವೀಕ್ ಡೇ ವಿತ್ ರಮೇಶ್’ ಕಾರ್ಯಕ್ರಮ ಪ್ರಸಾರವಾಗಲಿದೆ. ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಕೊರೊನಾ ತಾತ್ಕಾಲಿಕ ಸಮಸ್ಯೆ ಇರಬಹುದು. ಆದರೆ, ಭವಿಷ್ಯದಲ್ಲಿ ಇದಕ್ಕಿಂತಲೂ ಕಠಿಣ ಮತ್ತು ಭಿನ್ನವಾದ ಎಂತೆಂಥವೋ ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭವನ್ನು ಹೇಗೆ ನಿಭಾಯಿಸಬೇಕು ಮತ್ತು ನಾವು ಯಾವ ರೀತಿ ಸ್ಮಾರ್ಟ್‌ ಇರಬೇಕು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಈಗ ನಡೆಸುವ ಸಂವಾದ ನಾಳೆಗೆ ಸೀಮಿತ ಆಗಬಾರದು. 20, 30, 50 ವರ್ಷ ಕಳೆದರೂ ಅದು ನಮ್ಮ ಯುವ ಪೀಳಿಗೆಗೆ ಉಪಯೋಗಕ್ಕೆ ಬರುವಂತಿರಬೇಕು’ ಎನ್ನುವುದು ರಮೇಶ್‌ ಅವರ ಮಾತು.

‘ಇದರಲ್ಲಿ ನನ್ನ ಬದುಕಿನ ಅನುಭವ ಮತ್ತು ಬೇರೆಯವರ ಯಶಸ್ಸಿನ ಬದುಕನ್ನು ನೋಡಿ ಕಲಿತ ಪಾಠಗಳನ್ನು ಹಂಚಿಕೊಳ್ಳಲಿದ್ದೇನೆ.‘ವೀಕ್‌ ಡೇ ವಿತ್‌ ರಮೇಶ್‌’ ಕಾರ್ಯಕ್ರಮಕ್ಕೆ‘ವೀಕ್‌ ಎಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದ ಅನುಭವಗಳು ಉಪಯೋಗಕ್ಕೆ ಬರಲಿದೆ. ಯಶಸ್ಸಿಗೆ ಎಲ್ಲರ ಬದುಕಿನಲ್ಲಿ ಮೂಲಭೂತವಾಗಿ ಮತ್ತು ಅತ್ಯಗತ್ಯವಾಗಿ ಇರಬೇಕಾದದ್ದು ಶಿಸ್ತು ಮತ್ತು ಶ್ರದ್ಧೆ. ನಾನು ಈ ಬಗ್ಗೆಯೇ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದೇನೆ’ ಎಂದರು.

ಸಿನಿಮಾ ಬಗ್ಗೆ ಮಾತು ಹೊರಳಿದಾಗ, ‘100’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹಾಗೆಯೇ ‘ಶಿವಾಜಿ ಸುರತ್ಕಲ್ ಚಾಪ್ಟರ್‌-2’ ಚಿತ್ರದ ಸ್ಕ್ರಿಪ್ಟ್ ಡಾಕ್ಟರ್ ಕೆಲಸಕ್ಕೆ ಮತ್ತು ಈ ಸ್ಕ್ರಿಪ್ಟ್‌ಗೆ ಕನ್ಸಲ್ಟಟೆಂಟ್‌ ರೀತಿಯಲ್ಲೂ ನೆರವಾಗುತ್ತಿದ್ದೇನೆ ಅಷ್ಟೆ. ಶಿವಾಜಿ ಸುರತ್ಕಲ್ ಚಾಪ್ಟರ್‌–1ರಲ್ಲಿ ಸ್ಕ್ರಿಪ್ಟ್ ಡಾಕ್ಟರ್ ಕೆಲಸ ನಿರ್ವಹಿಸಿದ್ದೆ. ಈ ಚಿತ್ರದ ಸ್ಕ್ರಿಪ್ಟ್ ಅನ್ನುನಿರ್ದೇಶಕ ಆಕಾಶ್ ಶ್ರೀವತ್ಸ ಬರೆಯುತ್ತಿದ್ದಾರೆ. ಸದ್ಯದಲ್ಲೇ ಈ ಸ್ಕ್ರಿಪ್ಟ್‌ಗೆ ಅಂತಿಮರೂಪ ಸಿಗಲಿದೆ. ಸ್ಕ್ರಿಪ್ಟ್ ಡಾಕ್ಟರ್ ಕೆಲಸ ಕನ್ನಡದ ಮಟ್ಟಿಗೆ ಅಪರೂಪ. ಇದು ಹಾಲಿವುಡ್‌ಮತ್ತು ಬಾಲಿವುಡ್‌ನಲ್ಲಿ‌ ಹೆಚ್ಚು ಚಾಲ್ತಿಯಲ್ಲಿದೆ. ಕನ್ನಡದಲ್ಲಿ ಸ್ಕ್ರಿಪ್ಟ್ ಡಾಕ್ಟರ್ ಕೆಲಸ ಹೆಚ್ಚು ಮುಂಚೂಣಿಗೆ ಬಂದರೆ ಇನ್ನಷ್ಟು ಗುಣಮಟ್ಟದ ಮತ್ತು ಮತ್ತು ಕಂಟೆಂಟ್ ಪ್ರಧಾನ ಚಿತ್ರಗಳನ್ನು ಮಾಡಲು ಸಾಧ್ಯ ಎನ್ನುವ ಮಾತು ಹೇಳಲು ರಮೇಶ್ ಅರವಿಂದ್ ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.