ADVERTISEMENT

ತೆರೆಗೆ ಬರಲು ಸಜ್ಜಾಗಿದೆ ‘ವೀಕೆಂಡ್‌’

​ಪ್ರಜಾವಾಣಿ ವಾರ್ತೆ
Published 20 ಮೇ 2019, 7:48 IST
Last Updated 20 ಮೇ 2019, 7:48 IST
ಮಿಲಿಂದ್‌ ಹಾಗೂ ಶ್ರೀಂಗೇರಿ ಸುರೇಶ್‌
ಮಿಲಿಂದ್‌ ಹಾಗೂ ಶ್ರೀಂಗೇರಿ ಸುರೇಶ್‌   

‘ನನಗೆ ಹೀರೊ ಆಗುವ ಕಲ್ಪನೆಯೇ ಇರಲಿಲ್ಲ. ಎಂಜಿನಿಯರಿಂಗ್‌ ಪದವಿ ಮುಗಿಸಿದ್ದು, ಉದ್ಯಮಿಯಾಗುವ ಕನಸು ಕಾಣುತ್ತಿದ್ದೆ. ನಟನಾ ಕ್ಷೇತ್ರವನ್ನು ಪ್ರವೇಶಿಸಿದ್ದು ಆಕಸ್ಮಿಕ’ ಎಂದು ತಾವು ಬಣ್ಣದಲೋಕಕ್ಕೆ ಕಾಲಿಟ್ಟ ಹಿನ್ನೆಲೆ ಕುರಿತು ಹೇಳಿದರು ನಟ ಮಿಲಿಂದ್‌.

ಅವರು ನಾಯಕ ನಟನಾಗಿರುವ ‘ವೀಕೆಂಡ್‌’ ಸಿನಿಮಾ ಇದೇ ಶುಕ್ರವಾರ ತೆರೆಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಕರೆದಿತ್ತು.

ಚಿತ್ರದಲ್ಲಿ ಅವರದು ಟೆಕಿ ಪಾತ್ರವಂತೆ. ಅನಂತನಾಗ್‌ ಅವರ ಮೊಮ್ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ತಾತ ಮತ್ತು ಮೊಮ್ಮಗನ ಬದುಕು ಹೇಗಿರುತ್ತದೆ ಎನ್ನುವುದೇ ಚಿತ್ರದ ಕಥಾಹಂದರ.

ADVERTISEMENT

ಕ್ಯಾಮೆರಾ ಎದುರಿಸಲು ಅವರಿಗೆ ಮೊದಲಿಗೆ ಭಯವಾಗುತ್ತಿತ್ತಂತೆ. ಅನಂತನಾಗ್‌ ಅವರಿಗೆ ಈ ಕಥೆ ಹೇಳಿದಾಗ ನಟಿಸಲು ಅವರು ಮೂರು ತಿಂಗಳು ಸಮಯಾವಕಾಶ ಕೇಳಿದರಂತೆ. ಈ ಅವಧಿಯಲ್ಲಿ ನಿರ್ದೇಶಕರು ಮಿಲಿಂದ್‌ಗೆ ಅಭಿನಯದ ಪಟ್ಟುಗಳನ್ನು ಹೇಳಿಕೊಟ್ಟರಂತೆ.

‘ಟೆಕಿಗಳ ಬದುಕಿನ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತದೆ. ಅದರ ಸುತ್ತವೇ ಚಿತ್ರಕಥೆ ಸಾಗಲಿದೆ’ ಎಂದರು ಮಿಲಿಂದ್‌.

ಶ್ರೀಂಗೇರಿ ಸುರೇಶ್‌ ಕಥೆ, ಚಿತ್ರಕಥೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ‘ಕಥೆಗಾಗಿ ಹೊಸ ನಾಯಕನ ಹುಡುಕಾಟ ನಡೆದಿತ್ತು. ಆಗ ನಿಮ್ಮ ಮಗನನ್ನೇ ನಾಯಕನನ್ನಾಗಿ ಮಾಡುವ ಬಗ್ಗೆ ನಿರ್ಮಾಪಕರಿಗೆ ಹೇಳಿದೆ. ಕಥೆಯ ಪಾತ್ರಕ್ಕೆ ಆತ ಹೊಂದಿಕೊಳ್ಳುತ್ತಿತ್ತು. ಹಾಗಾಗಿ, ಮಿಲಿಂದ್‌ನನ್ನು ಹೀರೊ ಆಗಿ ಆಯ್ಕೆ ಮಾಡಲಾಯಿತು’ ಎಂದು ಸ್ಪಷ್ಟನೆ ನೀಡಿದರು.

‘ಹೀರೊ ಆಗುವಂತೆ ನನ್ನ ಮಗನಿಗೆ ಒತ್ತಡ ಹೇರಿಲ್ಲ. ಅನಂತನಾಗ್‌ ಸರ್‌ ನಟಿಸಿದರೆ ಮಾತ್ರವೇ ಈ ಚಿತ್ರ ಮಾಡಲು ನಿರ್ಧರಿಸಿದ್ದೆ. ಅವರು ನಟಿಸಲು ಒಪ್ಪಿದ್ದರಿಂದ ಈ ಸಿನಿಮಾವಾಗಿದೆ’ ಎಂದರು ನಿರ್ಮಾಪಕ ಮಂಜುನಾಥ ಡಿ.

ಇದೇ ವೇಳೆ ಚಿತ್ರದ ಟ್ರೇಲರ್‌ ಅನ್ನು ಬಿಡುಗಡೆಗೊಳಿಸಲಾಯಿತು. ಸಂಜನಾ ಬುರ್ಲಿ ಈ ಚಿತ್ರದ ನಾಯಕಿ. ರಘು, ಸಂಜಯ್‌, ಸಚಿನ್, ಕಾರ್ತಿಕ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.