ADVERTISEMENT

ಭಗವಾನ್, ಅಲ್ಲಾಹು ನಿರ್ಧಾರದ ಮೇಲೆ ಬದುಕು; ಕೃಪೆ ಇರುವಷ್ಟು ದಿನ ಜೀವನ: ಸಲ್ಮಾನ್

ಪಿಟಿಐ
Published 27 ಮಾರ್ಚ್ 2025, 10:22 IST
Last Updated 27 ಮಾರ್ಚ್ 2025, 10:22 IST
<div class="paragraphs"><p>ಸಲ್ಮಾನ್ ಖಾನ್</p></div>

ಸಲ್ಮಾನ್ ಖಾನ್

   

ಪಿಟಿಐ ಚಿತ್ರ

ಮುಂಬೈ: 'ಎಲ್ಲವೂ ಭಗವಾನ್, ಅಲ್ಲಾಹುವಿಗೆ ಬಿಟ್ಟಿದ್ದು. ಎಲ್ಲಿಯವರೆಗೆ ಜೀವ ಇರುತ್ತದೋ, ಅಲ್ಲಿಯವರೆಗೆ ಮಾತ್ರ ಈ ಬದುಕು, ಅಷ್ಟೇ’ ಎಂದು ಬಾಲಿವುಡ್‌ ನಟ ಸಲ್ಮಾನ್ ಖಾನ್‌ ತಮ್ಮ ಮೇಲಿನ ಜೀವ ಬೆದರಿಕೆ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಲ್ಮಾನ್‌ ಖಾನ್‌, ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಚಿತ್ರ ಇದೇ ಭಾನುವಾರದಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ಸಲ್ಮಾನ್‌ ಮಾತನಾಡಿದ್ದಾರೆ.

ಹಲವು ಬಾರಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನಿಂದ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ, ಮನೆಯ ಮೇಲೆ ದಾಳಿ ನಡೆದಿತ್ತು. ಹೀಗಾಗಿ ಸಲ್ಮಾನ್‌ ಸದಾ ಬಿಗಿ ಭದ್ರತೆಯಲ್ಲಿ ಓಡಾಡುತ್ತಿದ್ದಾರೆ. ಈ ಬಗ್ಗೆ  ಮಾತನಾಡಿ, ‘ಭದ್ರತೆಯನ್ನು ಹೆಚ್ಚಿಸಿಕೊಳ್ಳುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮನೆಯಿಂದ ಶೂಟಿಂಗ್‌, ಶೂಟಿಂಗ್‌ ಸ್ಥಳದಿಂದ ಮನೆಗೆ ಮಾತ್ರ ಓಡಾಡುತ್ತಿದ್ದೇನೆ’ ಎಂದಿದ್ದಾರೆ. 

ಈ ಹಿಂದೆ ಸಲ್ಮಾನ್‌ ಅವರು ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ ಮುಂಬೈ ನಗರದಾದ್ಯಂತ ಸೈಕಲ್‌ನಲ್ಲಿ ಸುತ್ತುತ್ತಿದ್ದರು. ಆದರೆ 2018ರಲ್ಲಿ ಮೊದಲ ಬಾರಿಗೆ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ, 1998 ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಜೋದ್‌ಪುರ ನ್ಯಾಯಾಲಯದ ಎದುರು ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದ. ಅಂದಿನಿಂದ ಸಲ್ಮಾನ್‌ ಭದ್ರತಾ ಸಿಬ್ಬಂದಿಯೊಂದಿಗೆ ಓಡಾಡುತ್ತಿದ್ದರು.

ಅಲ್ಲಿಂದ ಆರಂಭವಾದ ಬೆದರಿಕೆ ಕರೆಗಳು 2024ರವರೆಗೂ ಮುಂದುವರಿದಿವೆ. 2024ರ ಏಪ್ರಿಲ್‌ನಲ್ಲಿ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರು ಎನ್ನಲಾದ ಇಬ್ಬರು ದುಷ್ಕರ್ಮಿಗಳು ಸಲ್ಮಾನ್‌ ಮನೆಯ ಹೊರಗೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯ ಬಳಿಕ ಸಲ್ಮಾನ್‌ ಮನೆಯ ಬಾಲ್ಕನಿಗಳಲ್ಲಿ ಗುಂಡು ನಿರೋಧಕ ಗ್ಲಾಸ್‌ ಜತೆಗೆ ಮನೆಯ ಸುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

2024ರಲ್ಲಿ ಸಲ್ಮಾನ್‌ ಆಪ್ತ ಸ್ನೇಹಿತ ಎನ್ನಲಾಗಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಅವರನ್ನು ಬಿಷ್ಣೋಯಿ ಸಹಚರರು ಎನ್ನಲಾದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಆ ಬಳಿಕ ಸಲ್ಮಾನ್ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಭದ್ರತೆ ಬಗ್ಗೆ ಮಾತನಾಡಿರುವ ಸಲ್ಮಾನ್, ‘ನೀವು ತುಂಬಾ ಒಳ್ಳೆಯವರು, ಅದಕ್ಕಾಗಿ ಭದ್ರತಾ ಸಿಬ್ಬಂದಿ ಒಳ್ಳೆಯವರಾಗಿಯೇ ಇರುತ್ತಾರೆ. ಆದರೆ ಒಳ್ಳೆಯವರಲ್ಲದವರೊಂದಿಗೆ ಚೆನ್ನಾಗಿ ನಡೆದುಕೊಳ್ಳಿ ಎಂದು ಹೇಳಲು ನಾನು ಬಯಸುವುದಿಲ್ಲ. ನಾನು ಮಾಧ್ಯಮದವರೊಂದಿಗೆ ಇದ್ದಾಗ ಮಾತ್ರವಲ್ಲ, ಇತರ ಸಂದರ್ಭಗಳಲ್ಲೂ ಭದ್ರತಾ ಸಿಬ್ಬಂದಿ ಇರಿಸಿಕೊಳ್ಳುವುದು ನನ್ನ ಸ್ಟೈಲ್‌’ ಎಂದು ಮಾಧ್ಯಮದವರನ್ನು ಉದ್ದೇಶಿಸಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.