ಟಾಲಿವುಡ್ ಪವರ್ಸ್ಟಾರ್ ಪವನ್ ಕಲ್ಯಾಣ್ ನಟನೆಯ 26ನೇ ಚಿತ್ರ ‘ವಕೀಲ್ ಸಾಬ್’. ಈ ಚಿತ್ರಕ್ಕೆ ಶೃತಿ ಹಾಸನ್ ನಾಯಕಿ ಎಂಬ ಸುದ್ದಿ ಈ ಹಿಂದೆ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಶೃತಿ ಪವನ್ ಜೊತೆ ತೆರೆ ಹಂಚಿಕೊಳ್ಳುವುದು ಅನುಮಾನವಾಗಿದೆ.
ವಕೀಲ್ ಸಾಬ್ ಚಿತ್ರತಂಡದಿಂದ ಹೊರ ಬರುವ ಪ್ರತಿಯೊಂದು ಸಣ್ಣ ಸುದ್ದಿಯೂ ಪವನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಭಿಮಾನಿಗಳು ಈ ಚಿತ್ರದ ಕುರಿತು ಹೊಸ ಸುದ್ದಿಯನ್ನು ಕೇಳಲು ಕಾಯುತ್ತಿರುತ್ತಾರೆ. ನಟಿ ಶೃತಿ ಹಾಸನ್ ಪವನ್ಗೆ ಜೋಡಿಯಾಗುವುದು ಪಕ್ಕಾ ಆಗಿತ್ತು. ಈ ಜೋಡಿ ಹಿಂದೆ ‘ಗಬ್ಬರ್ ಸಿಂಗ್’, ‘ಕಾಟಮರಾಯುಡು’ ಸಿನಿಮಾಗಳ ಮೂಲಕ ತೆರೆ ಮೇಲೆ ಕಮಾಲ್ ಮಾಡಿತ್ತು.ಅಭಿಮಾನಿಗಳಂತೂ ಈ ಜೋಡಿ ಮತ್ತೆ ತೆರೆ ಮೇಲೆ ಒಂದಾಗುವುದಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈಗ ಶೃತಿ ವಕೀಲ್ ಸಾಬ್ನಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಅನುಮಾನ ಆರಂಭವಾಗಿದೆ. ಅದಕ್ಕೆ ಕಾರಣ ಆಂಗ್ಲ ಪತ್ರಿಕೆಯೊಂದಕ್ಕೆ ಆಕೆ ನೀಡಿದ ಸಂದರ್ಶನ.
ಆ ಸಂದರ್ಶನದಲ್ಲಿ ಶೃತಿ ಬಾಲಿವುಡ್ ಹಾಗೂ ಇತರ ಭಾಷೆಯ ಸಿನಿಮಾ ಅವಕಾಶಗಳ ಬಗ್ಗೆ ಮಾತನಾಡಿದ್ದರು. ಸಂದರ್ಶನದ ವೇಳೆ ಶೃತಿ ಪವರ್(ಬಾಲಿವುಡ್), ಕ್ರ್ಯಾಕ್ (ತೆಲುಗು), ಲಾಭಂ(ತಮಿಳು) ಚಿತ್ರಗಳಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದರು. ಈ ಸಿನಿಮಾಗಳ ಶೂಟಿಂಗ್ ಮುಗಿದ ಬಳಿಕವಷ್ಟೇ ಬೇರೆ ಸಿನಿಮಾಗಳಲ್ಲಿ ನಟಿಸುವುದಾಗಿ ಹೇಳಿದ್ದಾರೆ.
ಆ ಸಂದರ್ಶನದಲ್ಲಿ ‘ವಕೀಲ್ ಸಾಬ್’ ಚಿತ್ರದ ಕುರಿತು ಶೃತಿ ತುಟಿ ತೆರೆದಿಲ್ಲ. ಆ ಕಾರಣಕ್ಕೆ ಈ ಚಿತ್ರದಲ್ಲಿ ಶೃತಿ ನಟಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಗೊಂದಲ ಹುಟ್ಟುವಂತೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.