ADVERTISEMENT

‘ದಿ ವಿಲನ್’ನಲ್ಲಿ ‘ವಿಲನ್’ ಯಾರು? ಶಿವರಾಜ್ ಕುಮಾರ್ ಅಥವಾ ಸುದೀಪ್?

ಪ್ರಕಾಶ ಕುಗ್ವೆ
Published 23 ಆಗಸ್ಟ್ 2018, 19:30 IST
Last Updated 23 ಆಗಸ್ಟ್ 2018, 19:30 IST
ಶಿವರಾಜ್‌ ಕುಮಾರ್‌ ಮತ್ತು ಸುದೀಪ್
ಶಿವರಾಜ್‌ ಕುಮಾರ್‌ ಮತ್ತು ಸುದೀಪ್   

ಕನ್ನಡದ ಸ್ಟಾರ್ ದಿಗ್ಗಜರಿಬ್ಬರು ಬೆನ್ನಿಗೆ ಬೆನ್ನು ಕೊಟ್ಟ ವಿಲನ್ ಭಂಗಿಯ ಪೋಸ್ಟರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇವರ ನಟನೆಯ ಸಿನಿಮಾದ ಟೀಸರ್ ಸಾಮಾಜಿಕ ಜಾಲ ತಾಣದ ಟ್ರೆಂಡ್ ಆಗಿದೆ. ಬಿಡುಗಡೆಯಾದ ಕೆಲ ಹಾಡುಗಳು ಈಗಾಗಲೇ ಜನರ ನಾಲಿಗೆಯಲ್ಲಿವೆ. ಇಷ್ಟಾದರೂ 'ದಿ ವಿಲನ್' ಚಿತ್ರದಲ್ಲಿ ವಿಲನ್ ಯಾರು ಎಂಬುದು ಯಾರಿಗೂ ತಿಳಿದಿಲ್ಲ.

ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ 'ದಿ ವಿಲನ್' ಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಈಚೆಗೆ ನಡೆದ ಚಿತ್ರದ ಆಡಿಯೊ ಬಿಡುಗಡೆಯಲ್ಲೂ ವಿಲನ್ ಯಾರು ಎಂಬ ಗುಟ್ಟು ರಟ್ಟಾಗಲಿಲ್ಲ. ನಿರೂಪಕಿ ಅನುಶ್ರೀ ನಡೆಸಿದ ಸಕಲ ಪ್ರಯತ್ನವೂ ವ್ಯರ್ಥ. ಕಟ್ಟಪ್ಪ, ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆ ಬಹುಕಾಲ ಕಾಡಿದ್ದಂತೆ ಇದೂ ಕಾಡಲಿದೆ.

ವೇದಿಕೆಯಲ್ಲಿ ವಿಲನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಕೆಳಗಡೆ ಈ ನಟರಿಬ್ಬರ ಕುಟುಂಬಗಳು ಒಟ್ಟಿಗೆ ಕುಳಿತು ಮಾತುಕತೆಯಲ್ಲಿ ಪಾಲ್ಗೊಂಡಿದ್ದವು. ಶಿವರಾಜ್ ಕುಮಾರ್ ಪತ್ನಿ, ಮಗಳು ಹಾಗೂ ಸುದೀಪ್ ಪತ್ನಿ, ಮಗಳು ಪರಸ್ಪರ ಕುಶಲೋಪರಿಯಲ್ಲಿ ತೊಡಗಿದ್ದರು.

ADVERTISEMENT

ವಿಲನ್ ಆಡಿಯೊ ಬಿಡುಗಡೆ ನೆಪದಲ್ಲಿ ಸ್ಟಾರ್ ನಟರ ಮಾತಿನ ಜುಗಲ್ ಬಂದಿ ನಡೆಯಿತು. ಇಬ್ಬರ ಅಭಿಮಾನಿಗಳ ಅತಿರೇಕಗಳ ನಡುವೆಯೂ ನಟರಿಬ್ಬರು ಪರಸ್ಪರ ಗೌರವ, ಪ್ರೀತಿ, ವಿಶ್ವಾಸದ ಮಾತುಗಳನ್ನು ಆಡಿಕೊಂಡರು.

ತಾವಿಬ್ಬರೂ ಹೀಗೆ ಜತೆಯಾಗಿ ನಟಿಸಿದ್ದರ ಬಗ್ಗೆ ಹೇಳುತ್ತಲೇ ಸಿನಿಮಾ ತಡವಾಗಿ ಬಿಡುಗಡೆಯಾಗುತ್ತಿರುವುದಕ್ಕೆ ಸುದೀಪ್ ಕಿಚಾಯಿಸಿದರು. ‘ಸಿನಿಮಾ ಶುರುವಾದಾಗ ಶಿವಣ್ಣ ಅವರ ಮಗಳ ಮದುವೆ ಆಯ್ತು. ಈಗ ಶಿವಣ್ಣನಿಗೆ ಮೊಮ್ಮಗು.ಆದರೂ ಇನ್ನೂ ಸಿನಿಮಾ ಬಿಡುಗಡೆಯಾಗಿಲ್ಲ. ಇನ್ನೇನು ನನ್ನ ಮಗಳ ಮದುವೆಯಾಗಲಿ...’ ಎಂದು ಪ್ರೇಮ್ ಅವರನ್ನು ಪ್ರೀತಿಯಿಂದ ತರಾಟೆ ತೆಗೆದುಕೊಂಡರು.

'ಅವಕಾಶ ಸಿಕ್ಕಾಗ ನಟಿಸಬೇಕು. ಯುದ್ಧ ದಿನಾ ಇದ್ದಿದ್ದೆ' ಎಂದೇ ಮಾರ್ಮಿಕವಾಗಿ ಮಾತು ಆರಂಭಿಸಿದ ಸುದೀಪ್, 'ನಾನು ಶಿವಣ್ಣನ ಅಭಿಮಾನಿ. ಓಂ ಚಿತ್ರವನ್ನು 15 ಸಲ ನೋಡಿದ್ದೇನೆ. ಹೆಂಡತಿಗೆ ಕನ್ನಡ ಸರಿಯಾಗಿ ಬಾರದ ಸಮಯದಲ್ಲಿ 5 ಸಲ ನೋಡಿದ್ದೇನೆ. ಅಂತಹ ನಟ ನನ್ನ ಜತೆ ನಿಂತು ಈಗ ಆ್ಯಕ್ಟ್ ಮಾಡುವ ಕಾಲ ಬಂದಿದೆ ಎಂದರೆ?’ - ಅವರ ಮಾತು ಮುಂದುವರಿದಿತ್ತು.

ಶಿವರಾಜ್ ಕುಮಾರ್ ಕೂಡ ಇದಕ್ಕೆ ಮಾತು ಜೋಡಿಸಿದರು. ಈಗ ನಟರಿಬ್ಬರು ಒಟ್ಟಿಗೆ ನಟಿಸುವ ವೇದಿಕೆ ಸೃಷ್ಟಿಯಾಗಿದೆ. ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ತಾವು ಮತ್ತು ಸುದೀಪ್ ಜತೆಯಾಗಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದರು. ಪ್ರೇಮ್ ನಿರ್ದೇಶನದ ಚಿತ್ರಗಳಲ್ಲಿ ಶಿವಣ್ಣ ಅವರಿಗೆ ಹರಡಿದ ಕೂದಲು, ಹರಿದ ಬಟ್ಟೆ ತೊಡಿಸುವ ಪ್ರಶ್ನೆಗೆ, ಅದೆಲ್ಲ ಮಾದೇಶನ ಕೃಪೆ ಎಂದು ಶಿವರಾಜ್ ಕುಮಾರ್ ಅವರೇ ಉತ್ತರಿಸಿದರು.

ಸಿನಿಮಾದಲ್ಲಿ ತಾವು ತೊಟ್ಟ ಬಟ್ಟೆ, ಬಿಟ್ಟ ಕೂದಲುಗಳು ಕೂಡ ಕನ್ನಡದಲ್ಲಿ ಟ್ರೆಂಡ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ಯಾವುದನ್ನೂ ಪ್ರಜ್ಞಾಪೂರ್ವಕವಾಗಿ ಮಾಡುತ್ತಿಲ್ಲ. ಆದರೆ, ಅದೇ ಸ್ಟೈಲ್ ಆಗುತ್ತದೆಂದರೆ ಅದು ಜನರ ಪ್ರೀತಿ ಅಷ್ಟೇ. ಪ್ರೀತಿ ಕೊಡಿ. ಆದರೆ, ಅದರಿಂದ ನೋವು ಅನುಭವಿಸಬೇಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.

'ನಾನೇನು ಅದ್ಭುತ ಡಾನ್ಸರ್ ಅಲ್ಲ, ಕರ್ನಾಟಕ ನೆನಪಿಡುವ ಫೈಟಿಂಗನ್ನೂ ಮಾಡಿಲ್ಲ. ಆದರೆ, ನನ್ನ ಚಿತ್ರದಲ್ಲಿ ಏನೋ ಇರುತ್ತದೆ ಎಂದು ಜನ ಬರುತ್ತಾರೆ. ಆ ಕಾರಣ ತಿಳಿದಿಲ್ಲ. ಅದನ್ನು ತಿಳಿದುಕೊಳ್ಳುವುದ ಕ್ಕೂ ನಾನು ಹೋಗುವುದಿಲ್ಲ. ನನಗೆ ಜನರ ಪ್ರೀತಿ ಬೇಕು. ನಾನು ಅವರ ನಿರೀಕ್ಷೆ ಹುಸಿಗೊಳಿಸಬಾರದು ಇದಿಷ್ಟೇ ನನ್ನ ಕರ್ಮ ಮತ್ತು ಧರ್ಮ’ ಎಂದು ಸುದೀಪ್ ವಿಶ್ಲೇಷಿಸಿದರು.

ನಟನೊಬ್ಬ ಸಿನಿಮಾಗಳ ಮೇಲೆ ಸಿನಿಮಾ ಮಾಡಬಹುದು. ಆದರೆ, ಅವನ ಕುರಿತು ಯಾರೂ ಕಥೆ ಬರೆಯುತ್ತಿಲ್ಲ ಎಂದರೆ ಆ ನಟ ಸತ್ತ ಅಂತಲೇ ಅರ್ಥ. ನಿರ್ಮಾಪಕರ ಮುಖದಲ್ಲಿ ತೃಪ್ತಿ ಕಾಣಿಸಬೇಕು, ಪ್ರೇಕ್ಷಕರ ಹೃದಯದಲ್ಲಿ ಪ್ರೀತಿ ಅರಳಿಸಬೇಕು. ಅವನು ನಿಜವಾದ ನಟ ಎಂದು ನಟ, ನಟನೆ ಬಗ್ಗೆ ಸುದೀಪ್ ವ್ಯಾಖ್ಯಾನಿಸಿದರು. ಶಿವರಾಜ್ ಕುಮಾರ್ ಮಾತನಾಡುವಾಗ, ಕಿಚ್ಚ ಸುದೀಪ್ ಗೆ ಜೈಕಾರ, ಸುದೀಪ್ ಮಾತನಾಡುವಾಗ, ಶಿವಣ್ಣನ ಹೆಸರು ಹೇಳುವುದು ಅಭಿಮಾನಿಗಳಿಂದ ನಡೆಯಿತು.

ಆಡಿಯೊವನ್ನು ಹಿರಿಯ ನಟ ಅಂಬರೀಷ್ ಬಿಡುಗಡೆ ಮಾಡಿದರು. 2 ವರ್ಷಗಳಿಗೆ ಒಂದು ಸಿನಿಮಾ ಅಲ್ಲ, 1 ವರ್ಷಕ್ಕೆ 3-4 ಸಿನಿಮಾ ತೆಗೆದು ಕನ್ನಡ ಉದ್ಯಮ ಬೆಳೆಸಿ ಎಂದು ಹಾರೈಸಿದರು. ಚಿತ್ರದಲ್ಲಿ ಆರು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಷ್ಟೂ ಹಾಡುಗಳಿಗೆ ಸಿನಿಮಾ ನಟಿಯರು, ಜೀ ಟಿವಿಯ ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಕಾರ್ಯಕ್ರಮದ ಮಕ್ಕಳು ನೃತ್ಯ ಪ್ರಸ್ತುತಪಡಿಸಿದರು. ಚಿತ್ರದಲ್ಲಿ ನಟಿಸಿದ ತೆಲುಗು ನಟ ಶ್ರೀಕಾಂತ್, ನಿರ್ಮಾಪಕ ಸಿ.ಆರ್. ಮನೋಹರ್, ನಟಿ ರಕ್ಷಿತಾ ಉಪಸ್ಥಿತರಿದ್ದರು.
**
325 ದಿನ ಬ್ಯುಸಿ ನಟ ಶಿವರಾಜ್ ಕುಮಾರ್
ವರ್ಷದ 365 ದಿನಗಳ್ಲಿ 325 ದಿವಸ ಬ್ಯುಸಿಯಾಗಿರುವ ಕನ್ನಡದ ಏಕೈಕ ನಟ ಶಿವಣ್ಣ. ಅವರು ಸಿಂಪಲ್ ಮ್ಯಾನ್. ಲಂಡನ್‌ಗೆ ಗೀತಕ್ಕನ್ನೂ ಕರೆದುಕೊಂಡು ಬಂದಿದ್ದರು. ಶೂಟಿಂಗ್ ಮುಗಿಯುತ್ತಿದ್ದಂತೆ ಎಳೆ ಪ್ರೇಮಿಗಳ ತರ ಊರು ಸುತ್ತಲು ಹೊರಡುತ್ತಿದ್ದರು ಎಂದು ಸುದೀಪ್ ಹೇಳುತ್ತಿದ್ದಂತೆ ಮೈಕ್ ಕೈ ತೆಗೆದುಕೊಂಡ ಶಿವರಾಜ್ ಕುಮಾರ್, ನಾವು ನೂರು ವರ್ಷವಾದರೂ ಎಳೆ ಪ್ರೇಮಿಗಳ ತರವೇ ಇರುತ್ತೇವೆ' ಎಂದು ಸಮಜಾಯಿಷಿ ಕೊಟ್ಟರು.
**
ಸುದೀಪ್ ಲವ್ಲಿ ಬಾಯ್
ಸುದೀಪ್ ಜತೆ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಅವರೊಬ್ಬ ಲವ್ಲಿ ಬಾಯ್. ಅವರ ಜತೆ ತುಂಬಾ ಎಂಜಾಯ್ ಮಾಡಿದೆ. ಇಂತಹ ಸಂದರ್ಭಗಳು ಇನ್ನಷ್ಟು ಸೃಷ್ಟಿಯಾಗಲಿ ಎಂದು ಶಿವರಾಜ್ ಕುಮಾರ್, ಶೂಟಿಂಗ್ ಸಮಯದ ಒಡನಾಟಗಳನ್ನು ಹಂಚಿಕೊಂಡರು.

‘ಶಾಂತಿನಿವಾಸ ಚಿತ್ರದ ಹಾಡೊಂದಕ್ಕೆ ಅವರು ನನ್ನನ್ನು ಅದ್ಭುತವಾಗಿ ಚಿತ್ರಿಸಿದ್ದರು. ಕೆಸಿಸಿ ಕ್ರಿಕೆಟ್ ಕ್ಲಬ್ ಮಾಡಿ ಉದ್ಯಮದ ಎಲ್ಲರೂ ಒಟ್ಟುಗೂಡುವುದಕ್ಕೆ ಉತ್ತಮ ವೇದಿಕೆ ಹಾಕಿಕೊಟ್ಟರು. ಅವರಿಗೆ ಒಳ್ಳೆಯದಾಗಲಿ’ ಎಂದು ಶಿವರಾಜ್ ಕುಮಾರ್ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.