
‘ಕೆ.ಜಿ.ಎಫ್’ ಸಿನಿಮಾ ಖ್ಯಾತಿಯ ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ ‘ವೈಲ್ಡ್ ಟೈಗರ್ ಸಫಾರಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರದ ಟೀಸರ್ ಇತ್ತೀಚೆಗೆ ದುಬೈನಲ್ಲಿ ಬಿಡುಗಡೆಯಾಯಿತು.
ಬಾಲಿವುಡ್ ಖ್ಯಾತ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಟೀಸರ್ ರಿಲೀಸ್ ಮಾಡಿದರು. ಸಿನಿಮಾದಲ್ಲಿ ಶಿಥಿಲ್ ಪೂಜಾರಿ ನಾಯಕನಾಗಿ ನಟಿಸಿದ್ದು, ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ನಾಯಕಿಯಾಗಿ ನಿಮಿಕಾ ರತ್ನಾಕರ್ ಬಣ್ಣಹಚ್ಚಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿಯಲ್ಲೂ ಬಿಡುಗಡೆಯಾಗುತ್ತಿದೆ. ವಿಕೆ ಫಿಲ್ಮ್ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬಂದಿದ್ದು ದುಬೈನಲ್ಲಿ ನೆಲೆಸಿರುವ ವಿನೋದ್ ಕುಮಾರ್, ಕಿಶೋರ್ ಕುಮಾರ್, ಪ್ರಸನ್ನ ಕುಮಾರ್ ಹಾಗೂ ಗುರುದತ್ ಗಾಣಿಗ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.
ಸದ್ಯ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ ಚಿತ್ರತಂಡ. ಟೀಸರ್‌ನಲ್ಲಿ ಮಾಸ್ ಅವತಾರದಲ್ಲಿ ಶಿಥಿಲ್ ಕಾಣಿಸಿಕೊಂಡಿದ್ದು, ಇದೊಂದು ಆ್ಯಕ್ಷನ್ ಜಾನರ್‌ನ ಸಿನಿಮಾ ಎನ್ನುವ ಸುಳಿವು ನೀಡಿದೆ. ಆ್ಯಕ್ಷನ್ ಜೊತೆಗೆ ಪ್ರತೀಕಾರದ ಕಥೆ ಸಿನಿಮಾದಲ್ಲಿದೆ ಎಂದಿದೆ ಚಿತ್ರತಂಡ. ಕೆ.ಜಿ.ಎಫ್ ಸಿನಿಮಾದಲ್ಲಿ ಮಿಂಚಿದ್ದ ನಟ ಅವಿನಾಶ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್‌ನಲ್ಲಿ ನಟರಾಗಿ ಹಾಗೂ ನ್ಯತ್ಯ ಸಂಯೋಜಕರಾಗಿ ಖ್ಯಾತಿ ಹೊಂದಿರುವ ಧರ್ಮೇಶ್ ಮತ್ತು ಸುಶಾಂತ್ ಪೂಜಾರಿಯೂ ತಾರಾಬಳಗದಲ್ಲಿದ್ದಾರೆ. ಹಿಂದಿಯ ‘ಎಬಿಸಿಡಿ’ ಸಿನಿಮಾದಲ್ಲಿ ನಟಿಸಿದ್ದ ಕೆಲ ಕಲಾವಿದರೂ ಚಿತ್ರದಲ್ಲಿರಲಿದ್ದಾರೆ. ಸಿನಿಮಾಗೆ ಸಚಿನ್ ಬಸ್ರೂರು ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.