ADVERTISEMENT

ಕಬ್ಜ ಚಿತ್ರದಲ್ಲಿ ಕಿಚ್ಚ ನಟನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 15:36 IST
Last Updated 14 ಜನವರಿ 2021, 15:36 IST
ಕಬ್ಜ ಚಿತ್ರದಲ್ಲಿ ಉಪೇಂದ್ರ
ಕಬ್ಜ ಚಿತ್ರದಲ್ಲಿ ಉಪೇಂದ್ರ   

‘ರಿಯಲ್‌ ಸ್ಟಾರ್’ ಉಪೇಂದ್ರ ಮತ್ತು ಆರ್‌. ಚಂದ್ರು ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ‘ಕಬ್ಜ’ ಸಿನಿತಂಡ ಸಂಕ್ರಾಂತಿಯಂದು ಅಭಿಮಾನಿಗಳಿಗೆ ಅಚ್ಚರಿ ನೀಡಿದೆ. ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಸುದೀಪ್‌ ಎಂಟ್ರಿಕೊಟ್ಟಿದ್ದಾರೆ. ಭೂಗತ ಲೋಕದ ಚರಿತೆಯನ್ನು ಅನಾವರಣಗೊಳಿಸುವ ಈ ಚಿತ್ರದ ಕಥೆಯಲ್ಲಿ ಬರುವ ಮತ್ತೊಂದು ಪ್ರಮುಖ ಪಾತ್ರ ಭಾರ್ಗವ್ ಭಕ್ಷಿಯಾಗಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ. ‘ಕಬ್ಜ’ದ ಮೋಷನ್ ಪೋಸ್ಟರ್‌ ಮತ್ತು ಸುದೀಪ್‌ ಮೊದಲ ಲುಕ್‌ನ ಪೋಸ್ಟರ್‌ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರ ಕುತೂಹಲವನ್ನು ಚಿತ್ರತಂಡ ಹೆಚ್ಚಿಸಿದೆ.

‘ಕಬ್ಜ’ ಚಿತ್ರದ ಭಾಗವಾಗುತ್ತಿರುವುದಕ್ಕೆ ಸುದೀಪ್‌ ಕೂಡ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ‘ನಾವು ನಟರಾಗಿ ಯಾವಾಗಲೂ ಹೊಸ ಹೊಸ ಆಲೋಚನೆಗಳನ್ನಿಟ್ಟುಕೊಂಡು ಎದ್ದೇಳುವ ಮಹತ್ವಾಕಾಂಕ್ಷಿಗಳು. ಒಂದು ಉತ್ತಮ ಕಥೆಯನ್ನು ನಿರೂಪಿಸುವ ದಾಹದಲ್ಲಿರುತ್ತೇವೆ. ಆದರೆ, ಕೆಲವೊಮ್ಮೆ ಒಂದು ಕುಟುಂಬವಾಗಿ ಬೇರೊಬ್ಬರ ಕನಸಿನ ಭಾಗವೂ ಆಗಬೇಕಾಗುತ್ತದೆ. ಉಪೇಂದ್ರ ಸರ್‌ ಜತೆಗೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲು ಮತ್ತು ಕಬ್ಜದ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ’ ಎಂದು ಸುದೀಪ್‌ ಟ್ವೀಟ್‌ ಮಾಡಿದ್ದಾರೆ.

ಈ ಚಿತ್ರಕ್ಕೆ ಆರ್‌. ಚಂದ್ರು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಈ ಚಿತ್ರವನ್ನು ಕನ್ನಡ, ತೆಲುಗು, ತಮಿಳಿನಲ್ಲಿ ಚಿತ್ರೀಕರಿಸಲಾಗುತ್ತಿದ್ದು, ಹಿಂದಿ ಸೇರಿದಂತೆ ಉಳಿದ 4 ನಾಲ್ಕು ಭಾಷೆಗಳಿಗೆ ಡಬ್‌ ಮಾಡಲಾಗುತ್ತಿದೆ.

ADVERTISEMENT

ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ಅದ್ಧೂರಿ ಸೆಟ್‌ಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದಿದೆ. ಈ ತಿಂಗಳ ಅಂತ್ಯದಿಂದ ಮುಂದಿನ ಹಂತದ ಚಿತ್ರೀಕರಣ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.