ADVERTISEMENT

ಬೆಳ್ಳಿ ತೆರೆಗೆ ಕುಂವೀ ಕಥೆ ‘ಕುಬುಸ’

ಮಲ್ಲಿಗೆ ನಾಡಿನ ಪ್ರತಿಭೆ ಅಡ್ಡಾ ರಮೇಶ್ ನಿರ್ದೇಶನದಲ್ಲಿ ಚೊಚ್ಚಲ ಸಿನಿಮಾ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:48 IST
Last Updated 4 ಸೆಪ್ಟೆಂಬರ್ 2021, 3:48 IST
ಹೊಸಪೇಟೆ ತಾಲ್ಲೂಕು 82-ಢಣಾಪುರದಲ್ಲಿ ‘ಕುಬುಸ’ ಚಿತ್ರದ ಚಿತ್ರೀಕರಣದ ದೃಶ್ಯ
ಹೊಸಪೇಟೆ ತಾಲ್ಲೂಕು 82-ಢಣಾಪುರದಲ್ಲಿ ‘ಕುಬುಸ’ ಚಿತ್ರದ ಚಿತ್ರೀಕರಣದ ದೃಶ್ಯ   

ಹೂವಿನಹಡಗಲಿ: ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪ ಅವರ ‘ಕುಬುಸ’ ಕಥೆ ಅದೇ ಹೆಸರಿನ ಸಿನಿಮಾ ಆಗಿ ಸದ್ಯದಲ್ಲೇ ಬೆಳ್ಳಿ ತೆರೆಯ ಮೇಲೆ ಮೂಡಿ ಬರಲಿದೆ.

ಮಲ್ಲಿಗೆ ನಾಡಿನ ಯುವ ಪ್ರತಿಭೆ, ಉದಯೋನ್ಮುಖ ನಟ ಅಡ್ಡಾ ರಮೇಶ್ ನಿರ್ದೇಶನದಲ್ಲಿ ‘ಕುಬುಸ’ ಸಿನಿಮಾ ಸಿದ್ಧವಾಗಿದೆ. ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟ, ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ರಮೇಶ್ ಇದೀಗ ಚೊಚ್ಚಲ ಸಿನಿಮಾ ನಿರ್ದೇಶಿಸಿದ್ದಾರೆ.

ಹೊಸಪೇಟೆ, 82-ಢಣಾಪುರ, ಕಮಲಾಪುರ, ಹಂಪಿ ಸುತ್ತಮುತ್ತ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ADVERTISEMENT

ತಾಯಿ ಮಗನ ಅಂತಃಕರಣ, ಪ್ರೀತಿ, ವಾತ್ಸಲ್ಯವನ್ನು ಕುಂವೀಯವರು ‘ಕುಬುಸ’ ಕಥೆಯಲ್ಲಿ ಭಾವಾನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ. ಈ ಕಥೆಯು ಪ್ರಥಮ
ಪಿಯುಸಿ ಐಚ್ಛಿಕ ಕನ್ನಡ ಪಠ್ಯದಲ್ಲಿ ಸೇರ್ಪಡೆಯಾಗಿದೆ.

ಕಲ್ಲು ಒಡೆದು ಜೀವನ ಸಾಗಿರುವ ಅನಕ್ಷರಸ್ಥ ಮಹಿಳೆ ತಾನು ಕಷ್ಟ ಅನುಭವಿಸಿ ಮಗನಿಗೆ ಶಿಕ್ಷಣ ಕೊಡಿಸುತ್ತಾಳೆ. ಮಗ ಕೆಲಸಕ್ಕೆ ಸೇರಿದ ಮೇಲೆ ತಾಯಿಯನ್ನು ಕಲ್ಲು ಹೊಡೆಯುವ ಕೆಲಸ ಬಿಡಿಸಿ ನಗರಕ್ಕೆ ಕರೆದೊಯ್ಯುತ್ತಾನೆ. ಮೊದಲಿಂದಲೂ ಕುಪ್ಪಸ ತೊಡುವ
ಅಭ್ಯಾಸವಿರದ ತಾಯಿ ನಗರದಲ್ಲಿ ಮುಜಗರಕ್ಕೀಡಾಗುವ ಪ್ರಸಂಗ ಎದುರಾಗುತ್ತದೆ. ಗ್ರಾಮೀಣ ಕುಟುಂಬದ ಜೀವನಶೈಲಿಯ ವಿಭಿನ್ನ
ಕಥೆಯನ್ನು ಅಡ್ಡಾ ರಮೇಶ ಬಾಲ್ಯದಲ್ಲಿ ತನ್ನ ಪರಿಸರದಲ್ಲೇ ಕಂಡ ಇಂಥದ್ದೇ ಚಿತ್ರಣಗಳನ್ನು ಸೇರಿಸಿ ಸಿನಿಮಾಕ್ಕೆ ಮೆರಗು ತುಂಬಿದ್ದಾರೆ.

‘ರಾಮಾ ರಾಮಾ ರೇ’ ಚಿತ್ರದ ನಟರಾಜ್ ಚಿತ್ರದ ನಾಯಕರಾಗಿದ್ದಾರೆ. ಮಂಜುಗೌಡ ಎರಡನೇ ನಾಯಕರಾಗಿದ್ದಾರೆ.

ಮಹಾಲಕ್ಷ್ಮಿ, ಅನಿಕಾ ರಮ್ಯಾ ನಾಯಕಿಯರು. ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಹನುಮಕ್ಕ, ಹುಲುಗಪ್ಪ ಕಟ್ಟಿಮನಿ ವಿಶೇಷ ಪಾತ್ರದಲ್ಲಿ ಅಭಿನಯಿದ್ದಾರೆ. ಕಲಾವಿದ ಗುಂಡಿ ರಮೇಶ,
ಹೊಸಪೇಟೆ ಕನ್ನಡ ಕಲಾ ಸಂಘದ ಚಂದ್ರಶೇಖರ್, ರಾಜು ಕುಲಕರ್ಣಿ, ಕೃಷ್ಣ ಕುಲಕರ್ಣಿ, ಭದ್ರಿನಾಥ ತಾರಾಗಣದಲ್ಲಿದ್ದಾರೆ.

ಚಿತ್ರವನ್ನು ಬೆಂಗಳೂರಿನ ವಿ. ಶೋಭಾ ನಿರ್ಮಾಣ ಮಾಡಿದ್ದಾರೆ. ಪ್ರದೀಪ ಚಂದ್ರ ಸಂಗೀತ ನಿರ್ದೇಶಿಸಿದ್ದಾರೆ. ಚೇತನ್ ಶರ್ಮಾ ಛಾಯಾಗ್ರಹಣ ಮಾಡಿದ್ದಾರೆ.

‘ನಾಡಿನ ಖ್ಯಾತ ಕಥೆಗಾರ ಕುಂವೀಯವರು ತಮ್ಮ ಕಥೆಯನ್ನು ಸಿನಿಮಾ ನಿರ್ದೇಶನ ಮಾಡಲು ನನಗೆ ಒಪ್ಪಿಸಿದ್ದು ಸಂತಸವಾಗಿದೆ. ಅವರ ಕಥೆ ಪಾತ್ರವನ್ನು ಹೋಲುವ ತಿಪ್ಪಾಪುರ ಗ್ರಾಮದ ವೃದ್ಧ ಮಹಿಳೆಯ ಬದುಕನ್ನು ನಾನು ಬಾಲ್ಯದಲ್ಲಿ ಹತ್ತಿರದಿಂದ ನೋಡಿದ್ದೇನೆ. ಇವೆಲ್ಲವನ್ನೂ ಚಿತ್ರಕತೆಗೆ ಪೂರಕವಾಗಿ ಸೇರಿಸಿ ಕಲಾತ್ಮಕ ಚಿತ್ರ ಹೆಣೆದಿದ್ದೇವೆ. ಸಿನಿಮಾ ಸಂಕಲನ ನಡೆಯುತ್ತಿದ್ದು, ಸದ್ಯದಲ್ಲೇ ತೆರೆಕಾಣಲಿದೆ’ ಎಂದು ನಿರ್ದೇಶಕ ಅಡ್ಡಾ ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.