ADVERTISEMENT

ಯಕ್ಷಲೋಕದ ‘ವೀರ ಚಂದ್ರಹಾಸ’: ಹೊಸ ಚಿತ್ರದ ಬಗ್ಗೆ ನಿರ್ದೇಶಕ ರವಿ ಬಸ್ರೂರು ಮಾತು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 0:30 IST
Last Updated 11 ಏಪ್ರಿಲ್ 2025, 0:30 IST
   

ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಯಕ್ಷಗಾನ ಪ್ರಸಂಗವನ್ನೇ ಆಧಾರಿತ ಈ ಚಿತ್ರ ಏ.18ರಂದು ತೆರೆಗೆ ಬರಲಿದೆ. ಈ ಚಿತ್ರದ ಕುರಿತು ನಿರ್ದೇಶಕ ರವಿ ಬಸ್ರೂರು ಮಾತನಾಡಿದ್ದಾರೆ. 

‘ನಾನು ಈತನಕ ನಿರ್ದೇಶನ ಮಾಡಿದ ಸಿನಿಮಾಗಳನ್ನು ದುಡ್ಡಿಗಾಗಿ ಮಾಡಿಲ್ಲ. ಹಾಕಿದ ಬಂಡವಾಳ ವಾಪಾಸ್‌ ಬರುತ್ತದೆ ಎಂಬ ಆಸೆಯೊಂದಿಗೂ ಮಾಡಿಲ್ಲ. ಕುಂದಾಪುರದ ಸಂಸ್ಕೃತಿ, ಭಾಷೆ, ಹಳ್ಳಿಗಾಡಿನ ಸೊಗಡನ್ನು ನಾಡಿಗೆ ಪರಿಚಯಿಸುವ ವಿಷಯಗಳನ್ನೇ ಕೈಗೆತ್ತಿಕೊಂಡಿದ್ದು. ಯಕ್ಷಗಾನವನ್ನು ವಿಶ್ವಮಾನ್ಯ ಮಾಡಬೇಕೆಂಬುದು ನನ್ನ ಸುಮಾರು ವರ್ಷಗಳ ಕನಸು. ಹೀಗಾಗಿ ಇದನ್ನು ಮಾಡಿರುವೆ. ಇದು ಯಕ್ಷ ಸಿನಿಮಾ. ‘ವೀರ ಚಂದ್ರಹಾಸ’ ಪ್ರಸಂಗವನ್ನೇ ಸಿನಿಮಾವಾಗಿಸಿದ್ದೇವೆ. ಪ್ರಸಂಗದಿಂದ ಹೊರತಾದ ಮಾತುಗಳು, ಹಾಡುಗಳು ಚಿತ್ರದಲ್ಲಿದೆ’ ಎಂದರು ರವಿ ಬಸ್ರೂರು.

‘ಚಿತ್ರದ ಎಲ್ಲಾ ಪ್ರಮುಖ ಪಾತ್ರಗಳನ್ನು ಯಕ್ಷಗಾನ ಕಲಾವಿದರೇ ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರಮುಖವಾದ ಪಾತ್ರವೇ. ಆದರೆ ಇವರಿಗೆ ಕುಣಿತ ಹೆಚ್ಚಿಲ್ಲ. ಮಾತಿನ ಭಾಗವಷ್ಟೇ ಹೆಚ್ಚಿದೆ. ಚಂದನ್ ಶೆಟ್ಟಿ, ಪುನೀತ್, ಗರುಡರಾಮ್ ಮುಂತಾದ ಚಿತ್ರ ಕಲಾವಿದರು ಯಕ್ಷಗಾನದ ಪಾತ್ರಧಾರಿಗಳಾಗಿಯೇ ಕಾಣಿಸಿಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಹಿನ್ನೆಲೆ ಸಂಗೀತಕ್ಕಾಗಿ 600 ರಿಂದ 700 ಮ್ಯೂಸಿಕ್ ಟ್ರ್ಯಾಕ್ಸ್ ಬಳಸಿದ್ದೇವೆ‌. 400 ರಿಂದ 500 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಸೆಟ್ ಲೈಟ್ ಬಳಸಿಲ್ಲ. ಸಹಜ ಬೆಳಕಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಯಕ್ಷಗಾನ ಮತ್ತು ಸಿನಿಮಾದಲ್ಲಿ ಯಕ್ಷಗಾನ ಕಲಾವಿದರ ಬಳಕೆ ಹೆಚ್ಚಬೇಕು. ವೃತ್ತಿಪರ ಯಕ್ಷಗಾನ ಕಲಾವಿದರು ಮಳೆಗಾಲದಲ್ಲಿ ಕೆಲಸವಿಲ್ಲದೆ ಆರು ತಿಂಗಳು ಮನೆಯಲ್ಲಿ ಕುಳಿತಿರುತ್ತಾರೆ. ಆಗ ಅವರಿಗೆ ಕೆಲಸ ಸಿಗುವಂತಾಗಬೇಕು. ಈ ಸಿನಿಮಾದಿಂದ ಸಾಕಷ್ಟು ಜನರಿಗೆ ಉದ್ಯೋಗ ಸಿಕ್ಕಿದೆ. ದೊಡ್ಡ ನಾಯಕನನ್ನು ಹಾಕಿಕೊಂಡು ಕಮರ್ಷಿಯಲ್‌ ಸಿನಿಮಾ ಮಾಡಲು ಗೊತ್ತಿದೆ. ಆದರೆ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ನಾನು ಸಿನಿಮಾದಲ್ಲಿ ದುಡಿದಿರುವುದನ್ನು ಸಿನಿಮಾಗೆ ಹಾಕುತ್ತಿರುವೆ’ ಎನ್ನುತ್ತಾರೆ ಅವರು. 

ಬೆಂಗಳೂರಿನಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. 2 ಗಂಟೆ 36 ನಿಮಿಷ ಅವಧಿಯ ಚಿತ್ರದಲ್ಲಿ 60–70 ಯಕ್ಷಗೀತೆಗಳನ್ನು ಬಳಸಿಕೊಳ್ಳಲಾಗಿದೆ. ಎಸ್.ಎಸ್ ರಾಜಕುಮಾರ್ ನಿರ್ಮಿಸಿ, ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರವನ್ನು ಅರ್ಪಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.