ADVERTISEMENT

ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ: ಯಶ್ ಮಾತಲ್ಲಿ ಹೊಸ ಪ್ರಾಜೆಕ್ಟ್ ಸುಳಿವು

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 6:58 IST
Last Updated 6 ಜನವರಿ 2023, 6:58 IST
ಯಶ್‌
ಯಶ್‌   

‘ಕೆ.ಜಿ.ಎಫ್‌. ಚಾಪ್ಟರ್‌–2’ ಸಿನಿಮಾ ಬಳಿಕ ನಟ ರಾಕಿಂಗ್‌ ಸ್ಟಾರ್‌ ಯಶ್‌ ಮುಂದಿನ ಪ್ರಾಜೆಕ್ಟ್‌ ಯಾವುದು ಎನ್ನುವ ಪ್ರಶ್ನೆ ಇನ್ನೂ ಉಳಿದಿದೆ. ಇದಕ್ಕೆ ಭಾನುವಾರ(ಜ.8) ಅಂದರೆ ಯಶ್‌ ಜನ್ಮದಿನದಂದು ಉತ್ತರ ಸಿಗಲಿದೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಆದರೆ ಈ ಪ್ರಶ್ನೆ ಇನ್ನೂ ಕೆಲವು ದಿನ ಹಾಗೆಯೇ ಉಳಿಯುವ ಸಾಧ್ಯತೆ ಇದೆ.

ಗುರುವಾರ ತಡರಾತ್ರಿ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳಿಗೆ ಪತ್ರವೊಂದನ್ನು ಯಶ್‌ ಪೋಸ್ಟ್‌ ಮಾಡಿದ್ದಾರೆ. ‘ನಿಮ್ಮ ಕಲ್ಮಶವಿಲ್ಲದ ಪ್ರೀತಿ, ಸಾಟಿಯೇ ಇಲ್ಲದ ಅಭಿಮಾನ, ನನ್ನ ಹೃದಯ ತುಂಬುವಂತೆ ಮಾಡಿದೆ. ನನಗೆ ಗೊತ್ತು ನೀವೆಲ್ಲಾ ಕಾಯುತ್ತಿದ್ದೀರಾ...ಹುಟ್ಟಿದ ದಿನ ತುಂಬಾ ವಿಶೇಷ ಅಂತ ನನಗೆ ಅನ್ನಿಸೋಕೆ ಶುರುವಾಗಿದ್ದೇ ಇತ್ತೀಚಿನ ವರ್ಷಗಳಲ್ಲಿ. ಯಾವಾಗ ನೀವು ನನ್ನ ದಿನವನ್ನ ನಿಮ್ಮ ದಿನವನ್ನಾಗಿಸಿಕೊಂಡು ಆಚರಿಸಿ ವಿಜೃಂಭಿಸೋಕೆ ಶುರು ಮಾಡಿದ್ದರಿಂದ. ಹಾಗಾಗಿ ನಾನು ಕೂಡ ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು, ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೊದೇನನ್ನೋ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ಉಡುಗೊರೆ. ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ. ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ’ ಎಂದು ಪತ್ರದಲ್ಲಿ ಯಶ್‌ ಉಲ್ಲೇಖಿಸಿದ್ದಾರೆ.

ಕಳೆದ ಏ.14ರಂದು ‘ಕೆ.ಜಿ.ಎಫ್‌–ಚಾಪ್ಟರ್‌–2’ ರಿಲೀಸ್‌ ಆಗಿತ್ತು. ವಲ್ಡ್‌ವೈಡ್ ಬಾಕ್ಸ್‌ ಆಫೀಸ್‌ನಲ್ಲಿ ₹1,400 ಕೋಟಿ ಬಾಚಿದ ಈ ಚಿತ್ರ ಯಶ್‌ ಸಿನಿಗ್ರಾಫ್‌ನಲ್ಲಿ ದೊಡ್ಡ ತಿರುವು ನೀಡಿದ ಸಿನಿಮಾ. ಇದಾದ ಬಳಿಕ ಕೆಲ ಕಾಲ ಕುಟುಂಬದೊಂದಿಗೆ ವಿದೇಶಿ ಪ್ರವಾಸ, ಚಿತ್ರರಂಗದ ಹೊಸ ತಂತ್ರಜ್ಞಾನಗಳ ಅನ್ವೇಷಣೆ, ಜಾಹೀರಾತುಗಳ ಚಿತ್ರೀಕರಣದಲ್ಲೇ ಯಶ್‌ ತೊಡಗಿಸಿಕೊಂಡಿದ್ದರು. ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಸುಳಿವನ್ನೂ ಅವರು ಇಲ್ಲಿಯವರೆಗೂ ಬಿಟ್ಟುಕೊಟ್ಟಿಲ್ಲ. ಈ ನಡುವೆ ಯಶ್‌ ಹೊಸ ಸಿನಿಮಾಗೆ ನರ್ತನ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಈ ಸುದ್ದಿಯ ಸದ್ದು ದಿನ ಉರುಳಿದಂತೆ ಕಡಿಮೆಯಾಗಿದೆ. ಜೊತೆಗೆ ತಮ್ಮದೇ ಬ್ಯಾನರ್‌ನಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್‌ ಅನ್ನು ಯಶ್‌ ನಿರ್ಮಾಣ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಹರಿದಾಡಿತು.

ADVERTISEMENT

ಯಶ್‌ ಅವರ ಜನ್ಮದಿನ ಹತ್ತಿರವಾದಂತೆ, ತಮಿಳು ನಿರ್ದೇಶಕರೊಬ್ಬರು ಯಶ್‌ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ ಎನ್ನುವ ಸುದ್ದಿ ಸದ್ಯ ಗಾಂಧಿನಗರದೊಳಗೆ ಸುಳಿದಿದೆ. ಜ.8ಕ್ಕೆ ಇದು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.