ADVERTISEMENT

ಕೆ.ಜಿ.ಎಫ್‌–2: ಡಬ್ಬಿಂಗ್‌ ಪೂರ್ಣಗೊಳಿಸಿದ ನಟಿ ರವೀನಾ ಟಂಡನ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 8:31 IST
Last Updated 8 ಫೆಬ್ರುವರಿ 2022, 8:31 IST
ರಮಿಕಾ ಸೇನ್‌ ಪಾತ್ರದಲ್ಲಿ ರವೀನಾ ಟಂಡನ್‌
ರಮಿಕಾ ಸೇನ್‌ ಪಾತ್ರದಲ್ಲಿ ರವೀನಾ ಟಂಡನ್‌   

ಚಂದನವನದ ಬಹುನಿರೀಕ್ಷಿತ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ, ಯಶ್‌ ನಟನೆಯ ಕೆ.ಜಿ.ಎಫ್‌ ಎರಡನೇ ಭಾಗ ಏಪ್ರಿಲ್‌ 14ರಂದು ತೆರೆ ಕಾಣಲಿದೆ.‌ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಅಂತಿಮ ಹಂತದಲ್ಲಿದ್ದು, ಬಾಲಿವುಡ್‌ ನಟಿ ರವೀನಾ ಟಂಡನ್‌ ತಮ್ಮ ಪಾತ್ರದ ಡಬ್ಬಿಂಗ್‌ ಪೂರ್ಣಗೊಳಿಸಿದ್ದಾರೆ.

ಈ ಕುರಿತು ನಿರ್ದೇಶಕ ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ. ‘ಕೂಲೆಸ್ಟ್‌ ಪ್ರೈಮ್‌ ಮಿನಿಸ್ಟರ್‌’ ಎಂದು ರವೀನಾ ಟಂಡನ್‌ ಅವರನ್ನು ಪ್ರಶಾಂತ್‌ ಹೊಗಳಿದ್ದಾರೆ. ‘ಕೆ.ಜಿ.ಎಫ್‌–2’ನಲ್ಲಿ ‘ರಮಿಕಾ ಸೇನ್‌’ ಎಂಬ ಹೆಸರಿನ ಪ್ರಧಾನಿ ಪಾತ್ರದಲ್ಲಿ ರವೀನಾ ನಟಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಹೊಸ ಲುಕ್‌ನೊಂದಿಗೆ ಅವರು ಕಾಣಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಯಶ್‌ ಸಮ್ಮುಖದಲ್ಲಿ ಇಡೀ ಚಿತ್ರತಂಡವು ಕೊಲ್ಲೂರಿನ ಮೂಕಾಂಬಿಕೆ ಹಾಗೂ ಆನೆಗುಡ್ಡೆಯ ವಿನಾಯಕ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಕರಾವಳಿಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ.

ADVERTISEMENT

ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ವಿಜಯ್‌ ಕಿರಗಂದೂರು ನಿರ್ಮಾಣ ಮಾಡುತ್ತಿರುವ ‘ಕೆ.ಜಿ.ಎಫ್‌–2’ ಚಿತ್ರದಲ್ಲಿ ‘ಅಧೀರ’ ಎಂಬ ಪಾತ್ರಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಬಣ್ಣಹಚ್ಚಿದ್ದಾರೆ. ಕಳೆದ ವರ್ಷದ ಜುಲೈನಲ್ಲೇ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್‌–2’ ಚಿತ್ರವು ಕೋವಿಡ್‌ ಎರಡನೇ ಅಲೆಯ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಇದಾದ ನಂತರ ಸರ್ಕಾರವು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧಿಸಿದ್ದ ಕಾರಣ ಸಿನಿಮಾ ಬಿಡುಗಡೆಯನ್ನು 2022ರ ಏ.14ಕ್ಕೆ ಚಿತ್ರತಂಡವು ಮುಂದೂಡಿತ್ತು.

ಚಿತ್ರದ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣಹಚ್ಚಿದ್ದು, ಪ್ರಕಾಶ್‌ ರೈ, ಮಾಳವಿಕಾ ಅವಿನಾಶ್‌, ಬಿ.ಸುರೇಶ್‌, ಯಶ್‌ ಶೆಟ್ಟಿ, ಅರ್ಚನಾ ಜೋಯಿಷ್‌, ಅಯ್ಯಪ್ಪ ಪಿ.ಶರ್ಮ ಇನ್ನಿತರರು ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.