ADVERTISEMENT

ಸಂದರ್ಶನ | ಅಪ್ಪು ದಾರಿಯಲ್ಲಿ ಸಾಗುತ್ತೇನೆ: ಯುವ ರಾಜ್‌ಕುಮಾರ್‌

ವಿನಾಯಕ ಕೆ.ಎಸ್.
Published 17 ಜುಲೈ 2025, 23:33 IST
Last Updated 17 ಜುಲೈ 2025, 23:33 IST
<div class="paragraphs"><p>ಯುವ</p></div>

ಯುವ

   
ಯುವ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ‘ಎಕ್ಕ’ ಸಿನಿಮಾ ಇಂದು (ಜು.18) ತೆರೆ ಕಾಣುತ್ತಿದೆ. ‘ಬ್ಯಾಂಗಲ್‌ ಬಂಗಾರಿ’ ಹಾಡು ಈಗಾಗಲೇ ಜನಪ್ರಿಯವಾಗಿದ್ದು, ಚಿತ್ರ ಹಾಗೂ ತಮ್ಮ ಪಾತ್ರ ಕುರಿತು ಅವರು ಮಾತನಾಡಿದ್ದಾರೆ.

ಚಿತ್ರದಲ್ಲಿ ನಿಮ್ಮ ಪಾತ್ರ?

ಮುತ್ತು ಪಾತ್ರದ ಹೆಸರು. ತಿಂದುಂಡು, ಆರಾಮವಾಗಿ ನಿದ್ದೆ ಮಾಡಿಕೊಂಡಿರುವ ಹಳ್ಳಿ ಹುಡುಗ. ತಾಯಿ ಜತೆ ನೆಮ್ಮದಿಯಿಂದ ಜೀವನ ನಡೆಸುತ್ತ ಇರುತ್ತಾನೆ. ಬದುಕಿನಲ್ಲಾದ ಒಂದು ಸಮಸ್ಯೆಯಿಂದ ಪೇಟೆಗೆ ಬರುತ್ತಾನೆ. ‘ನಿನ್ನೊಳಗೆ ಮಗುನೂ ಇದೆ ಮೃಗವೂ ಇದೆ’ ಅಂತ ತಾಯಿ ಯಾವಾಗಲೂ ಹೇಳುತ್ತಿರುತ್ತಾರೆ. ಹೀಗಿರುವ ಹುಡುಗನಿಗೆ ರೌಡಿಸಂ ಪ್ರಪಂಚದ ಪರಿಚಯವಾಗುತ್ತದೆ. ಒಂದಷ್ಟು ಸನ್ನಿವೇಶಗಳು ಅವನನ್ನು ರೌಡಿಸಂಗೆ ಎಳೆಯುತ್ತ ಇರುತ್ತವೆ. ಆತ ಮಗುವಾಗಿಯೇ ಉಳಿಯುತ್ತಾನಾ ಅಥವಾ ಮೃಗವಾಗುತ್ತಾನಾ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. 

ADVERTISEMENT

ಸಂಪೂರ್ಣ ಮಾಸ್‌ ಆ್ಯಕ್ಷನ್‌ ಚಿತ್ರವೇ?

ಚಿತ್ರದಲ್ಲಿ ತುಂಬ ವಿಷಯಗಳಿವೆ. ತಾಯಿ ಸೆಂಟಿಮೆಂಟ್‌ ಇದೆ. ಲವ್‌ಸ್ಟೋರಿ ಇದೆ. ಆ್ಯಕ್ಷನ್‌, ಮಾಸ್‌ ಕೂಡ ಇದೆ. ಹೀಗಾಗಿ ಸಿನಿಮಾವನ್ನು ಒಂದೇ ಜಾನರ್‌ನಲ್ಲಿ ಇಡಲು ಸಾಧ್ಯವಿಲ್ಲ. ಒಟ್ಟಾರೆಯಾಗಿ ಮನರಂಜನೆ ನೀಡುವ ಕಥೆ.

ಉತ್ತರ ಕರ್ನಾಟಕ ಭಾಗದ ಕಥೆಯಾ?

ಹಳ್ಳಿ ಮತ್ತು ಪಟ್ಟಣದಲ್ಲಿ ನಡೆಯುವ ಕಥೆ. ಯಾವ ಕಡೆಯ ಹಳ್ಳಿ ಅಂತ ಎಲ್ಲಿಯೂ ತೋರಿಸಿಲ್ಲ. ಒಂದು ಪ್ರದೇಶಕ್ಕೆ ಸೀಮಿತವಾದ ಭಾಷೆಯನ್ನು ಎಲ್ಲಿಯೂ ಬಳಸಿಲ್ಲ. ಹಳ್ಳಿ ಭಾಗವನ್ನು ಶ್ರೀರಂಗಪ‍ಟ್ಟಣ, ರಾಮನಗರ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಪೇಟೆ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಿದ್ದೇವೆ.

ಟ್ರೇಲರ್‌ನಲ್ಲಿ ಕಥೆಯನ್ನು ಬಿಟ್ಟುಕೊಟ್ಟಿದ್ದೀರಲ್ಲ?

ಹೌದು, ಉದ್ದೇಶಪೂರ್ವಕವಾಗಿಯೇ ಟ್ರೇಲರ್‌ನಲ್ಲಿ ಕಥೆ ಹೀಗಿದೆ ಅಂತ ನೇರವಾಗಿ ಹೇಳಿದ್ದೇವೆ. ನಿರ್ದೇಶಕ ರೋಹಿತ್‌ ಪದಕಿ ತಮ್ಮ ಹಿಂದಿನ ‘ರತ್ನನ್‌ ಪ್ರಪಂಚ’ ಚಿತ್ರದಲ್ಲಿಯೂ ಇದೇ ರೀತಿ ಟ್ರೇಲರ್‌ ಬಿಟ್ಟಿದ್ದರು. ಈ ಸಿನಿಮಾದಲ್ಲಿ ನಾಯಕನಿಗೆ ಈ ರೀತಿ ಸಮಸ್ಯೆ ಇದೆ ಎಂಬುದನ್ನು ಹೇಳಿದ್ದೇವೆ. ಆದರೆ ಏನು ಸಮಸ್ಯೆ ಅಂತ ಹೇಳಿಲ್ಲ. ಸಿನಿಮಾ ನೋಡಿದಾಗ ಮಾತ್ರ ಅದೇನು ಎಂದು ಗೊತ್ತಾಗುತ್ತದೆ. ರೋಹಿತ್‌ ಪದಕಿ ತುಂಬ ಪ್ರತಿಭಾವಂತ ನಿರ್ದೇಶಕ. ‘ರತ್ನನ್‌ ಪ್ರಪಂಚ’ದಲ್ಲಿ ಒಂದು ಹುಡುಕಾಟ ಇತ್ತು. ಇಲ್ಲಿಯೂ ಒಂದು ಹುಡುಕಾಟ ಇದೆ. ಅವರು ಸಿನಿಮಾವನ್ನು ಬಹಳ ನೈಜವಾಗಿ ಚಿತ್ರೀಕರಿಸುತ್ತಾರೆ. ಚಿತ್ರೀಕರಣದ ಸ್ಥಳದಲ್ಲಿರುವ ಸ್ಥಳೀಯರನ್ನೆಲ್ಲ ಬಳಸಿಕೊಳ್ಳುತ್ತಾರೆ. ಅವರ ಜತೆ ಕೆಲಸ ಮಾಡುವುದು ಒಂದು ಭಿನ್ನ ಅನುಭವ.

ರಾಜ್‌ ಕುಟುಂಬದಿಂದ ನೀವು ಪುನೀತ್‌ ರಾಜ್‌ಕುಮಾರ್‌ ಸ್ಥಾನ ತುಂಬುತ್ತೀರಿ ಎಂಬಂತೆ ನಿಮ್ಮನ್ನು ಬಿಂಬಿಸಲಾಗುತ್ತಿದೆಯಾ?

ಅಪ್ಪು ಜಾಗದಲ್ಲಿ ನಾನು ಬರಲು ಸಾಧ್ಯವೇ ಇಲ್ಲ. ಅವರ ಜಾಗವನ್ನು ಯಾರೂ ತುಂಬೋಕೆ ಸಾಧ್ಯವಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅವರು ನಮ್ಮ ಕುಟುಂಬದ ಬ್ಯಾನರ್‌ನಿಂದ ವರ್ಷಕ್ಕೆ ಎರಡು ಸಿನಿಮಾ ಮಾಡುತ್ತಿದ್ದರು. ಒಂದಷ್ಟು ಜನಕ್ಕೆ ಕೆಲಸ ನೀಡುತ್ತಿದ್ದರು. ಅದನ್ನು ನಾನು ಮುಂದುವರಿಸಿಕೊಂಡು ಹೋಗುತ್ತೇನೆ ಎನ್ನಬಹುದು. ಅವರು ಹಾಕಿಕೊಟ್ಟು ಹೋದ ಮಾರ್ಗದಲ್ಲಿ ಸಾಗಬಹುದಷ್ಟೆ. ಅವರ ‘ಜಾಕಿ’ ಸಿನಿಮಾ ನನಗೆ ತುಂಬ ಇಷ್ಟ. ಅದರ ಸೊಗಡು ಈ ಚಿತ್ರದಲ್ಲಿಯೂ ಕಾಣುತ್ತದೆ. 

ಹಿಂದಿನ ಸಿನಿಮಾದಿಂದ ಏನೆಲ್ಲ ಕಲಿಯಲು ಸಾಧ್ಯವಾಯ್ತು?

ನನ್ನ ಮೊದಲನೆ ಚಿತ್ರ ‘ಯುವ’ದಿಂದ ಸಾಕಷ್ಟು ಕಲಿತೆ. ಈ ಚಿತ್ರದ ಪ್ರಕ್ರಿಯೆಯಲ್ಲಿಯೂ ಕಲಿತಿದ್ದೇನೆ. ಆ ಚಿತ್ರಕ್ಕಿಂತ ಭಿನ್ನವಾದ ಕಥೆಯಿದು. ಪಾತ್ರ ಪೋಷಣೆ ಬೇರೆ ರೀತಿಯಿದೆ. ಕೇವಲ ಆ್ಯಕ್ಷನ್‌ ಮಾತ್ರವಲ್ಲ, ಪಾತ್ರ ಬಹಳ ಗಟ್ಟಿಯಾಗಿದೆ. ನನಗೆ ಉತ್ತಮ ಕಂಟೆಂಟ್‌ ಜತೆಗಿನ ಮಾಸ್‌ ಸಿನಿಮಾಗಳು ಹೆಚ್ಚು ಇಷ್ಟ. ಒಟ್ಟಾರೆಯಾಗಿ ಸಿನಿಮಾ ಮನರಂಜನೀಯವಾಗಿರಬೇಕು. ಆ ನಿಟ್ಟಿನಲ್ಲಿ ಯತ್ನ ಮಾಡಿದ್ದೇವೆ. ಒಂದೊಳ್ಳೆ ತಂಡ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಚರಣ್‌ ರಾಜ್‌ ಸಂಗೀತವಿದೆ. ತಂಡದಲ್ಲಿ ಎಲ್ಲರೂ ಅನುಭವ ಹೊಂದಿದವರು. ಇಂಥ ಒಂದು ತಂಡದ ಜತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. 

ನಿಮ್ಮ ಮುಂದಿನ ಸಿನಿ ಪಯಣ...

ಇದಾದ ಬಳಿಕ ಸೂರಿ ಅವರ ಜತೆ ಸಿನಿಮಾ ಪ್ರಾರಂಭವಾಗುತ್ತದೆ. ಅದರ ಸ್ಕ್ರಿಪ್ಟ್‌ ಕೆಲಸ ಮುಗಿದಿದೆ. ಸದ್ಯಕ್ಕೆ ಅದೊಂದೇ ಸಿನಿಮಾ ಒಪ್ಪಿಕೊಂಡಿರುವುದು. 

***

ಯುವ

ಈ ಸಿನಿಮಾ ಬಳಿಕ ಮತ್ತೆ ಚಿತ್ರಮಂದಿರದತ್ತ ಜನ ಬರಲು ಪ್ರಾರಂಭಿಸಬಹುದಾ?

ಪ್ರತಿ ಚಿತ್ರತಂಡ ನಮ್ಮ ಸಿನಿಮಾ ಗೆಲ್ಲುತ್ತದೆ ಎಂಬ ಭರವಸೆ ಮತ್ತು ಹುಮ್ಮಸ್ಸಿನಲ್ಲಿಯೇ ಚಿತ್ರಮಂದಿರಕ್ಕೆ ಬರುತ್ತದೆ. ಆದರೆ ಇವತ್ತು ಪ್ರೇಕ್ಷಕರನ್ನು ಜಡ್ಜ್‌ ಮಾಡುವುದು ತುಂಬ ಕಷ್ಟ. ಎಂಟರ್‌ಟೈನ್‌ಮೆಂಟ್‌ ಅವರ ಕೈಯ್ಯಲೇ ಇದೆ. ಪ್ರತಿ ನಿಮಿಷಕ್ಕೊಂದು ಹೊಸ ಕಂಟೆಂಟ್‌ ಸಿಗುತ್ತದೆ. ಅವರ ಮನಸ್ಥಿತಿ ಅರಿತುಕೊಳ್ಳುವುದು ಸವಾಲು. ಚಿತ್ರದ ‘ಬ್ಯಾಂಗಲ್‌ ಬಂಗಾರಿ’ ಹಾಡು ದೊಡ್ಡ ಹಿಟ್‌ ಆಗಿದೆ. ಹೀಗಾಗಿ ನಾವು ಕೊಟ್ಟಿರುವ ಕಂಟೆಂಟ್‌ ಇಷ್ಟವಾಗುತ್ತದೆ ಎಂಬ ಭರವಸೆಯಿದೆ. ಮೂರು ದೊಡ್ಡ ನಿರ್ಮಾಣ ಸಂಸ್ಥೆಗಳು ಈ ಸಿನಿಮಾಗೆ ಒಟ್ಟಾಗಿವೆ. ಹಾಡಿನಿಂದಾಗಿ ಒಂದಷ್ಟು ಜನ ಬರುತ್ತಾರೆ. ಮತ್ತೊಂದಷ್ಟು ಜನ ನನಗಾಗಿ ಬರ್ತಾರೆ. ಕೆಲವರು  ರೋಹಿತ್‌ ಅವರ ಹಿಂದಿನ ಸಿನಿಮಾಗಳಿಂದ ಬರುತ್ತಾರೆ ಎಂಬ ನಂಬಿಕೆ ಇದೆ. ಎಲ್ಲರೂ ಈ ಸಿನಿಮಾ ಗೆಲ್ಲಬೇಕು ಇಲ್ಲಿಂದ ನಂತರ ಚಿತ್ರಮಂದಿರಗಳತ್ತ ಮತ್ತೆ ಜನ ಬರಲು ಪ್ರಾರಂಭಿಸಬಹುದೆಂದು ಎಂದು ಕಾಯುತ್ತಿದ್ದಾರೆ. ಏನಾಗುತ್ತದೆ ಎಂದು ನೋಡೋಣ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.