ADVERTISEMENT

ವರಮಹಾಲಕ್ಷ್ಮಿ ಹಬ್ಬಕ್ಕೆ ‘ಯುವರತ್ನ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 10:13 IST
Last Updated 28 ಜುಲೈ 2020, 10:13 IST
‘ಯುವರತ್ನ’ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್
‘ಯುವರತ್ನ’ ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್   

‘ಯುವರತ್ನ’ –ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಮತ್ತು ನಟ ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ಚಿತ್ರ. ‘ರಾಜಕುಮಾರ’ ಚಿತ್ರದ ಬಳಿಕ ಈ ಜೋಡಿ ಈ ಮತ್ತೆ ಇದರಲ್ಲಿ ಒಂದಾಗಿದೆ.

ಈಗಾಗಲೇ, ಇದರ ಮಾತಿನ ಭಾಗದ ಶೂಟಿಂಗ್‌ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ. ಯುರೋಪ್‌ನಲ್ಲಿ ನಾಯಕ ಮತ್ತು ನಾಯಕಿಯ ಒಂದು ಹಾಡಿನ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು. ಉಳಿದ ನಾಯಕನ ಇಂಟ್ರಡಕ್ಷನ್‌ ಸಾಂಗ್‌ ಅನ್ನು ಬೆಂಗಳೂರಿನಲ್ಲಿಯೇ ಚಿತ್ರೀಕರಿಸಲು ತೀರ್ಮಾನಿಸಿತ್ತು. ಈ ಎರಡೂ ಹಾಡುಗಳ ಚಿತ್ರೀಕರಣ ಪೂರ್ಣಗೊಳಿಸಿ ಬೇಸಿಗೆ ರಜೆಗೆ ಥಿಯೇಟರ್‌ಗೆ ಬರಲು ನಿರ್ಧರಿಸಿದ್ದ ‘ಯುವರತ್ನ’ನಿಗೆ ಕೋವಿಡ್‌– 19 ಬಿಸಿ ತಟ್ಟಿತು.

ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅಭಿಮಾನಿಗಳು ಪ್ರತಿದಿನ ಅಪ್‌ಡೇಟ್‌ ಕೇಳುತ್ತಿದ್ದಾರೆ. ಆದರೆ, ನಿರ್ದೇಶಕ ಆನಂದ್‌ರಾಮ್‌ ಮತ್ತು ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್‌ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಕಡಿಮೆ. ಈಗ ವರಮಹಾಲಕ್ಷ್ಮಿ ಹಬ್ಬ ಸಮೀಪಿಸುತ್ತಿದೆ. ಅಂದು ‘ಯುವರತ್ನ’ ಚಿತ್ರದ ಹೊಸ ಪೋಸ್ಟರ್‌ ಬಿಡುಗಡೆಯಾಗಲಿದೆ. ಅಪ್ಪು ಅಭಿಮಾನಿಗಳಿಂದ ಒತ್ತಡ ಹೆಚ್ಚಿದ್ದರಿಂದ ಹೊಂಬಾಳೆ ಫಿಲ್ಮ್ಸ್‌ ಈ ನಿರ್ಧಾರಕ್ಕೆ ಬಂದಿದೆಯಂತೆ.

ADVERTISEMENT

ಶೈಕ್ಷಣಿಕ ರಂಗ ವ್ಯಾಪಾರೀಕರಣಗೊಂಡಿದೆ. ಇದು ಮಕ್ಕಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರಿದೆ. ಹಣ ಇದ್ದರಷ್ಟೇ ಶಿಕ್ಷಣ ಎನ್ನುವಂತಾಗಿದೆ. ‌ಈ ದಂಧೆಯ ಸುತ್ತವೇ ಈ ಸಿನಿಮಾದ ಕಥೆ ಹೆಣೆಯಲಾಗಿದೆ. ಧನಂಜಯ್‌ ಇದರಲ್ಲಿ ಆ್ಯಂಟನಿ ಜೋಸೆಫ್‌ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ಶಯೇಷಾ ಅವರು ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿದ್ದಾರೆ. ವಿಜಯ್‌ ಕಿರಗಂದೂರು ಬಂಡವಾಳ ಹೂಡಿದ್ದಾರೆ.

ಎಸ್. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ. ಪ್ರಕಾಶ್ ರಾಜ್‌, ವಸಿಷ್ಠ ಸಿಂಹ, ದಿಗಂತ್‌, ಸೋನು ಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.