ADVERTISEMENT

ನಮ್ದೇ ದಾರಿ, ನಮ್ದೇ ಸವಾರಿ: ಕೋವಿಡ್‌ ಟೈಮಲ್ಲಿ ಪುನೀತ್ ರಾಜ್‌ಕುಮಾರ್ ಹೊಸ ವರಸೆ!

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 6:34 IST
Last Updated 31 ಜುಲೈ 2020, 6:34 IST
‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್‌
‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್‌   

‘ನಾವು ಯಾವತ್ತೂ ಬೇರೆಯವರ ರೂಟ್‌ ಅಲ್ಲಿ ಟ್ರಾವೆಲ್‌ ಆಗಲ್ಲ. ನಮ್ದೇ ದಾರಿ, ನಮ್ದೇ ಸವಾರಿ... ಪಕ್ಕದಲ್ಲಿ ಫೆರಾರಿ ಹೋದ್ರು ತಲೆಕೆಡಿಸಿಕೊಳ್ಳಲ್ಲ...’

–ಇದು ‘ಪವರ್‌ ಸ್ಟಾರ್‌’ ಪುನೀತ್‌ ರಾಜ್‌ಕುಮಾರ್‌ ಅವರ ಹೊಸ ಡೈಲಾಗ್. ಅರೇ... ಕೆಲವು ದಿನಗಳ ಹಿಂದೆಯಷ್ಟೇ ಕನ್ನಡ ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರ ನೇತೃತ್ವದಡಿ ಚಿತ್ರರಂಗದ ಸಭೆ ನಡೆದಿತ್ತು. ಆ ಸಭೆಯಲ್ಲಿ ಪುನೀತ್‌ ಕೂಡ ಪಾಲ್ಗೊಂಡಿದ್ದು ಉಂಟು.

ಕೋವಿಡ್‌–19 ಪರಿಣಾಮ ಕನ್ನಡ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿಈಗ ನಮ್ದೇ ದಾರಿ, ನಮ್ದೇ ಸವಾರಿ... ಎನ್ನುವ ಮಾತು ಅಪ್ಪು ಅವರ ಬಾಯಿಂದ ಏಕೆ ಕೇಳಿಬರುತ್ತಿದೆ ಎಂದು ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ಇದು ‘ಯುವರತ್ನ’ ಚಿತ್ರದ ಪೋಸ್ಟರ್‌ ಡೈಲಾಗ್.

ADVERTISEMENT

ಬೇಸಿಗೆ ವೇಳೆಯಲ್ಲಿಯೇ ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಕೋವಿಡ್‌–19 ಪರಿಣಾಮ ವಿಳಂಬವಾಯಿತು. ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪು ಅಭಿಮಾನಿಗಳು ಪ್ರತಿದಿನ ಅಪ್‌ಡೇಟ್‌ ಕೇಳುತ್ತಿದ್ದರು. ಹೀಗಾಗಿ, ನಿರ್ದೇಶಕ ಆನಂದ್‌ರಾಮ್‌ ಮತ್ತು ಹೊಂಬಾಳೆ ಫಿಲ್ಮ್ಸ್‌ನ ವಿಜಯ್‌ ಕಿರಗಂದೂರು ವರಮಹಾಲಕ್ಷ್ಮಿ ಹಬ್ಬದಂದು ಹೊಸ ಪೋಸ್ಟರ್‌ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅಂತೆಯೇ, ಪುನೀತ್‌ ಪ್ಯಾಂಟ್‌ ಜೇಬಿನಲ್ಲಿ ತನ್ನೆರಡು ಕೈಗಳನ್ನು ಇಟ್ಟುಕೊಂಡು ನೃತ್ಯದ ಶೈಲಿಯಲ್ಲಿರುವ ವಿಭಿನ್ನ ಬಗೆಯ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ. ಅಪ್ಪು ಲುಕ್‌ ಸಖತ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶಿಕ್ಷಣ ರಂಗದ ವ್ಯಾಪಾಕರೀಕರಣ ಸುತ್ತವೇ ‘ಯುವರತ್ನ’ ಚಿತ್ರದ ಕಥೆ ಹೆಣೆಯಲಾಗಿದೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಇದರಲ್ಲಿ ಆ್ಯಂಟನಿ ಜೋಸೆಫ್‌ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳು ನಟಿ ಶಯೇಷಾ ಅವರು ಪುನೀತ್‌ ರಾಜ್‌ಕುಮಾರ್‌ಗೆ ನಾಯಕಿ. ಎಸ್. ತಮನ್‌ ಸಂಗೀತ ಸಂಯೋಜಿಸಿದ್ದಾರೆ. ವೆಂಕಟೇಶ್‌ ಅಂಗುರಾಜ್‌ ಅವರ ಛಾಯಾಗ್ರಹಣವಿದೆ. ಪ್ರಕಾಶ್ ರಾಜ್‌, ವಸಿಷ್ಠ ಸಿಂಹ, ದಿಗಂತ್‌, ಸೋನು ಗೌಡ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.