ADVERTISEMENT

ಕಿರುಚಿತ್ರ ಬೊಂಬೆಯಾಟ: ಕೆಲಸ– ಕುಟುಂಬದ ನಡುವಿನ ತಾಕಲಾಟ

ಜಕ್ಕಣಕ್ಕಿ ಎಂ ದಯಾನಂದ
Published 21 ಆಗಸ್ಟ್ 2018, 19:30 IST
Last Updated 21 ಆಗಸ್ಟ್ 2018, 19:30 IST
ಬೊಂಬೆಯಾಟ ಕಿರುಚಿತ್ರದ ದೃಶ್ಯ
ಬೊಂಬೆಯಾಟ ಕಿರುಚಿತ್ರದ ದೃಶ್ಯ   

ನಗರ ಬದುಕಿನ ಧಾವಂತದ ಬಗ್ಗೆ ಸಾಕಷ್ಟು ಚಿತ್ರ, ಕಿರುಚಿತ್ರಗಳು ಬಂದಿವೆ. ನಗರದ ಜೀವನ ಎಷ್ಟೊಂದು ನೋವುಗಳಿಂದ ತುಂಬಿದೆ. ಇಲ್ಲಿ ಒಂದೇ ಎರಡೇ ಕಥೆಗಳು. ‘ಓಹೋ ಇದು ನಮ್ಮದೇ ಕಥೆಯಲ್ಲವೇ’ ಎಂಬ ಕಾರಣಕ್ಕೆ ಎಲ್ಲರಿಗೂ ಇವು ಕೆಲವೊಮ್ಮೆ ಇಷ್ಟವಾಗುತ್ತವೆ.

ಮೈಸೂರಿನ ರಾಜು ವೈವಿಧ್ಯ ಅವರು ನಿರ್ದೇಶಿಸಿರುವ 16 ನಿಮಿಷಗಳ ‘ಬೊಂಬೆಯಾಟ’ ಕಿರುಚಿತ್ರ ಸಹ ನಗರ ಬದುಕಿನ ಸೂಕ್ಷ್ಮ ಸಂವೇದನೆಯನ್ನು ವಿವರಿಸುತ್ತದೆ. ಉದ್ಯೋಗ ಮತ್ತು ಕುಟುಂಬದ ನಡುವಿನ ತಾಕಲಾಟವನ್ನು ಕಟ್ಟಿಕೊಡುತ್ತದೆ. ಅನಿವಾರ್ಯವಾಗಿ ಯಾಂತ್ರಿಕ ಜೀವನದ ನಡುವೆ ಸಿಲುಕುವ ಜನರು ಲ್ಯಾಪ್‌ ಟಾಪ್‌, ಮೊಬೈಲ್ ಇತ್ಯಾದಿಗಳಲ್ಲಿ ಮುಳುಗಿ ಹೋದರೆ ಮನೆಯಲ್ಲಿರುವ ಮಕ್ಕಳ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಈ ಕಿರುಚಿತ್ರ ವಿವರಿಸುತ್ತದೆ.

‘ಬದುಕು ಹೀಗೆ ಅಂತ ನಿರ್ಧಾರ ಮಾಡೊ ಕ್ಷಣಗಳು ಕೈತಪ್ಪಿ ಹೋಗುತ್ತವೆ. ಯಾವುದನ್ನು ನಾವು ಲೆಕ್ಕಾಚಾರ ಮಾಡೊ ಹಾಗಿಲ್ಲ. ನಮ್ಮ ಲೆಕ್ಕಾಚಾರ, ನಮ್ಮ ಬದುಕು, ಬೇರೆಯವರು ಆಡೋ ಬೊಂಬೆಯಾಟ’ ಎಂಬ ಮಾತಿನೊಂದಿಗೆ ಆರಂಭವಾಗುವ ಕಿರುಚಿತ್ರ ಒಂದೊಂದೇ ತಿರುವುಗಳಲ್ಲಿ ಇದನ್ನು ಸ್ಪಷ್ಟಪಡಿಸುತ್ತದೆ.

ADVERTISEMENT

ಪೊಲೀಸ್ ಅಧಿಕಾರಿ ಯಶವಂತ್ ತನಿಖೆ ನಡೆಸಿರುವ ಎಲ್ಲಾ ಆತ್ಮಹತ್ಯೆ ಮತ್ತು ಕೊಲೆ ಪ್ರಕರಣಗಳಲ್ಲಿ ಹೆಂಡತಿಯರದೇ ತಪ್ಪು ಎಂಬುದರೊಂದಿಗೆ ತನಿಖೆ ಮುಗಿದಿರುತ್ತದೆ. ಇದು ಹೇಗೆ ಎಂಬುದು ಹಿರಿಯ ಪೊಲೀಸ್‌ ಅಧಿಕಾರಿಯ ಪ್ರಶ್ನೆ. ಇಲ್ಲಿ ಕಥೆಯೊಳಗೆ ಮತ್ತೊಂದು ತಿರುವು ಎಂಬಂತೆ ಸ್ವತಃ ಯಶ್ವಂತ್‌ ಪತ್ನಿಯೇ ಮೃತಪಟ್ಟಿರುತ್ತಾಳೆ. ಕಾಕತಾಳೀಯ ಎಂಬಂತೆ ಇಲ್ಲೂ ಆಕೆಯದೇ ತಪ್ಪು ಎಂಬಂತೆ ಬಿಂಬಿಸಿ ತನಿಖೆ ಪೂರ್ಣಗೊಳಿಸಲಾಗಿರುತ್ತದೆ.

ರಾಹುಲ್‌ ಮತ್ತು ನಂದಿನಿ ಇಬ್ಬರೂ ಐ.ಟಿ ಕಂಪನಿಯಲ್ಲಿ ಕೆಲಸ ಮಾಡುವವರು. ಯಾವಾಗಲೂ ಕೆಲಸದದ್ದೇ ಅವಸರ. ಇವರಿಗೊಂದು ಲಕ್ಷ್ಯ ಎಂಬ ಹೆಣ್ಣು ಮಗು ಇದೆ. ಆದರೆ ಕೆಲಸದ ಒತ್ತಡದಿಂದಾಗಿ ಮಗುವಿನ ಬಗ್ಗೆ, ಅದರ ಆಸೆ, ಆಕಾಂಕ್ಷೆಗಳ ಕುರಿತು ಎಂದೂ ಕೇಳಿದವರಲ್ಲ. ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳವಾಗುತ್ತದೆ. ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂದು ಸಾಮಾನ್ಯವಾಗಿ ಕೇಳಿದ್ದೇವೆ. ಇಲ್ಲೂ ಲಕ್ಷ್ಯಳ ಕಡೆಗೆ ತಂದೆ–ತಾಯಿಗೆ ಲಕ್ಷ್ಯವೇ ಇಲ್ಲ.

ಇಡೀ ಕಿರುಚಿತ್ರ ಅಪರಾಧ ಕಥೆಯ ಸುತ್ತಲೇ ಸುತ್ತಿದರೂ ಅದನ್ನೇ ಪ್ರಮುಖವಾಗಿ ತೋರಿಸದೆ ನಗರದ ಕೆಲಸದ ಜಂಜಾಟದ ಬದುಕು ತಮ್ಮ ಪ್ರೀತಿಪಾತ್ರರಾದವರ ಕಡೆಗೆ ನೋಡಲಾಗದ, ಅವರೊಂದಿಗೆ ಪ್ರೀತಿಯ ಮಾತನ್ನಾಡಲಾಗದ ಅನಿವಾರ್ಯ ಪರಿಸ್ಥಿತಿ ಹೇಗೆ ಸೃಷ್ಟಿಮಾಡುತ್ತದೆ ಎಂಬುದನ್ನು ಮನೋಜ್ಞವಾಗಿ ವಿವರಿಸುತ್ತದೆ. ಮಗಳಿಗಾಗಿ ಒಂದಷ್ಟು ಸಮಯ ಮೀಸಲಿಡದೆ ತಾವು ಎಂತಹ ತಪ್ಪು ಮಾಡಿದೆವು ಎಂದು ಮರುಗುವ ರಾಹುಲ್‌ ಪಾತ್ರದ ಮೂಲಕ ಸಂದೇಶವನ್ನೂ ಬಿತ್ತರಿಸುತ್ತಾರೆ. ಲಕ್ಷ್ಯ ಎಂಬ ಪಾತ್ರ ಮಾಡಿರುವ ಮಗು ಮುಗ್ಧತೆಯ ನಟನೆಯಿಂದ ಗಮನ ಸೆಳೆಯುತ್ತಾಳೆ.

ನಂದಿನಿ ಅನುಮಾನಾಸ್ಪದ ರೀತಿಯಲ್ಲಿ ಸಾಯುತ್ತಾಳೆ. ಈ ಬಗ್ಗೆ ರಾಹುಲ್‌ ನನ್ನು ಪೊಲೀಸ್‌ ಅಧಿಕಾರಿ ವಿಚಾರಣೆ ಮಾಡುತ್ತಿದ್ದ ವೇಳೆ ಆತ ಕುಟುಂಬದಲ್ಲಿನ ಜಗಳದ ಬಗ್ಗೆ ವಿವರಿಸುತ್ತಾನೆ. ಕೊನೆಗೆ ಪೊಲೀಸ್‌ ಅಧಿಕಾರಿಯ ಪಿಸ್ತೂಲ್‌ ನಿಂದಲೇ ಗುಂಡು ಹೊಡೆದುಕೊಂಡು ಸಾಯುತ್ತಾನೆ. ಲಕ್ಷ್ಯಳಿಗೆ ಗೊಂಬೆಗಳೆಂದರೆ ತುಂಬಾ ಇಷ್ಟ. ಅಪ್ಪ ಅಮ್ಮ ಇಲ್ಲ. ತಾನು ಅನಾಥಳಾಗಿದ್ದೇನೆ ಎಂಬ ಯಾವುದೇ ಕಲ್ಪನೆ ಅವಳಿಗಿಲ್ಲ.‘ನನಗ್ಯಾರೂ ಫ್ರೆಂಡ್ಸ್‌ ಇಲ್ಲ. ನಾನೂ ಮತ್ತು ನನ್ನ ಟೆಡ್ಡಿ ಮಾತ್ರ. ನನಗೆ ಡ್ಯಾಡಿ ಮತ್ತು ಮಮ್ಮಿ ಸಾಕಷ್ಟು ಟಾಯ್ಸ್‌ ಕೊಟ್ಟಿದ್ದಾರೆ. ಆದರೆ ಅವರು ತುಂಬಾ ಬ್ಯುಸಿ’ ಎಂದು ಈಕೆಯ ಬಾಯಲ್ಲಿ ಹೇಳಿಸಿ ಇನ್ನಷ್ಟು ಆಪ್ತವಾಗಿಸಿದ್ದಾರೆ. ನಂತರ ಇಡೀ ಕಿರುಚಿತ್ರದ ಸಾರವನ್ನು ಈಕೆಯ ಮಾತಿನಲ್ಲಿ ಕೇಳುವುದು ಮುದ ನೀಡುತ್ತದೆ.

‘ಯಾವಾಗಲೂ ಮಮ್ಮಿ ಡ್ಯಾಡಿ ಜಗಳವಾಡುತ್ತಿರುತ್ತಾರೆ. ಅವರಿಗ್ಯಾರು ಬುದ್ಧಿ ಹೇಳುತ್ತಾರೆ’ ಎಂದು ಮುದ್ದುಮುದ್ದಾಗಿ ಹೇಳುವ ಲಕ್ಷ್ಯಳ ಮಾತಿನಲ್ಲಿ ಸಾವಿರ ಕಥೆಗಳ ಸಾರವಿದೆ. ಅನಾಥ ಮಗುವನ್ನು ಪೊಲೀಸ್‌ ಅಧಿಕಾರಿ ಸಂತೈಸಿ ಕೊನೆಯಲ್ಲಿ ಕರೆದೊಯ್ಯುತ್ತಾರೆ.

ರಾಜು ವೈವಿಧ್ಯ ಈ ಹಿಂದೆ ‘ವಾರಿ‘ ಮತ್ತು ‘ಒಂದು ಸಾವಿನ ಸುತ್ತ’ ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಬೊಂಬೆಯಾಟ’ದಲ್ಲೂ ಉತ್ತಮ ನಟನೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.