ADVERTISEMENT

‘ಒಟಿಟಿ’ ಸೇವೆಗಳಿಗೆ ಪರವಾನಗಿ?

ಗಲಭೆ ಪ್ರದೇಶದಲ್ಲಿ ಒಟಿಟಿ ಮಾತ್ರ ನಿಷೇಧ ಸೂಕ್ತ: ಟ್ರಾಯ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2023, 14:16 IST
Last Updated 9 ಜುಲೈ 2023, 14:16 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಒಟಿಟಿ ಕಂಪನಿಗಳನ್ನು ಪರವಾನಗಿ ವ್ಯಾಪ್ತಿಯೊಳಗೆ ತರುವ ಸಾಧ್ಯತೆ ಕುರಿತು ಸಮಾಲೋಚನಾ ಪತ್ರವೊಂದರಲ್ಲಿ ಆಲೋಚನೆ ಹಂಚಿಕೊಂಡಿದೆ.

ಸ್ಮಾರ್ಟ್‌ಫೋನ್‌ಗಳಲ್ಲಿ ಕರೆ ಮಾಡಲು, ಸಂದೇಶ ಕಳುಹಿಸಲು ಬಳಸುವ ಒಟಿಟಿ ವೇದಿಕೆಗಳನ್ನು ನಿಯಂತ್ರಣ ವ್ಯವಸ್ಥೆಯ ಚೌಕಟ್ಟಿನೊಳಗೆ ತರುವುದರಿಂದ ಅವುಗಳಿಗೆ ಪ್ರವೇಶ ಶುಲ್ಕ ವಿಧಿಸಲು, ಅವುಗಳ ವರಮಾನವನ್ನು ದೂರಸಂಪರ್ಕ ಕಂಪನಿಗಳೊಂದಿಗೆ ಹಂಚಿಕೊಳ್ಳಲು, ಒಟಿಟಿ ಮೂಲಕ ಆಗುವ ಕರೆಗಳನ್ನು ಕಾನೂನು ಚೌಕಟ್ಟಿನೊಳಗೆ ತರಲು, ಕರೆಗಳ ಕುರಿತ ಮಾಹಿತಿ ಒದಗಿಸುವಂತೆ ಮಾಡಲು ಸಾಧ್ಯವಾಗುತ್ತದೆ.

ಟ್ರಾಯ್‌ ಈಚೆಗಷ್ಟೇ ಬಿಡುಗಡೆ ಮಾಡಿರುವ ‘ರೆಗ್ಯುಲೇಟರಿ ಮೆಕಾನಿಸಂ ಫಾರ್‌ ಓವರ್‌–ದಿ–ಟಾಪ್‌ (ಒಟಿಟಿ) ಕಮ್ಯುನಿಕೇಷನ್‌ ಸರ್ವಿಸಸ್‌ ಆ್ಯಂಡ್‌ ಸೆಲೆಕ್ಟಿವ್‌ ಬ್ಯಾನಿಂಗ್‌ ಆಫ್‌ ಒಟಿಟಿ ಸರ್ವಿಸಸ್‌’ ಎನ್ನುವ ಸಲಹಾ ಪತ್ರದಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.

ADVERTISEMENT

ವಾಟ್ಸ್ಆ್ಯಪ್‌, ಗೂಗಲ್ ಮೀಟ್‌, ಫೇಸ್‌ಟೈಮ್‌ ಇತ್ಯಾದಿಗಳಂತಹ ಇಂಟರ್‌ನೆಟ್‌ ಆಧಾರಿತ ಸಂದೇಶ ರವಾನೆ ಹಾಗೂ ಕರೆ ಸೇವೆ ಒದಗಿಸುವ ಆ್ಯಪ್‌ಗಳನ್ನು ನಿಯಂತ್ರಿಸುವ ಅಗತ್ಯದ ಕುರಿತು ಟ್ರಾಯ್‌ ಸಲಹಾ ಪತ್ರದಲ್ಲಿ ವಿವರಿಸಿದೆ.

ಸದ್ಯ ಒಟಿಟಿಗಳು ಯಾವುದೇ ಪರವಾನಗಿ ಇಲ್ಲದೇ ದೇಶದಲ್ಲಿ ಕಾರ್ಯಾಚರಣೆ ನಡೆಸಬಹುದು. ಆದರೆ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಗಲಭೆ/ಪ್ರಕ್ಷುಭ್ಧ ವಾತಾವರಣ ಸೃಷ್ಟಿಯಾದಾಗ ಇಂಟರ್‌ನೆಟ್‌ ಸಂಪರ್ಕವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದರಿಂದ ಆಗುವ ಪರಿಣಾಮವನ್ನು ತಗ್ಗಿಸಲು ಇಂಟರ್‌ನೆಟ್‌ ಬಳಸಿ ಕರೆ ಮತ್ತು ಮೆಸೇಜ್‌ ಮಾಡುವ ಅಪ್ಲಿಕೇಷನ್‌ (ಆ್ಯಪ್‌) ಸೇವೆಗಳ ಮೇಲೆ ಮಾತ್ರ ನಿಷೇಧ ಹೇರುವ ಸಾಧ್ಯತೆಯ ಕುರಿತು ಪರಿಶೀಲನೆ ನಡೆಸುವಂತೆ ಸಂಹವನ ಮತ್ತು ಐ.ಟಿ. ಕುರಿತ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.

ದೂರಸಂಪರ್ಕ ಅಥವಾ ಇಂಟರ್‌ನೆಟ್‌ ಸಂಪರ್ಕವನ್ನು ಸ್ಥಗಿತ ಮಾಡುವುದರಿಂದ ದೇಶದ ಆರ್ಥಿಕತೆಯ ಮೇಲೆ ಗಮನಾರ್ಹವಾದ ಪರಿಣಾಮ ಉಂಟಾಗಲಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳಂತಹ ಮಹತ್ವದ ಸೇವೆಗಳಿಗೂ ಅಡ್ಡಿಯಾಗುತ್ತದೆ ಎನ್ನುವ ಅಂಶವನ್ನು ಹಲವು ಶಿಫಾರಸುಗಳು, ಆದೇಶಗಳು ಮತ್ತು ಅಧ್ಯಯನಗಳಿಂದ ತಿಳಿದುಕೊಂಡಿರುವುದಾಗಿ ಟ್ರಾಯ್‌ ಹೇಳಿದೆ.

ನಿರ್ದಿಷ್ಟ ಪ್ರದೇಶದಲ್ಲಿ ಭಯೋತ್ಪಾದನೆ ಅಥವಾ ದೇಶ ವಿರೋಧಿ ಕೃತ್ಯಗಳಿಗೆ ಒಟಿಟಿ ಆ್ಯಪ್‌ಗಳು ಮತ್ತು ಜಾಲತಾಣಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಂತರ್ಜಾಲವನ್ನು ಸಂಪೂರ್ಣವಾಗಿ ಸ್ಥಗಿತ ಮಾಡುವುದಕ್ಕೆ ಬದಲಾಗಿ ಕೆಲವು ಒಟಿಟಿ ಆ್ಯಪ್‌ಗಳು ಮತ್ತು ಜಾಲತಾಣಗಳ ಮೇಲೆ ಒಂದಿಷ್ಟು ನಿಷೇಧ ಹೇರುವುದು ಹೆಚ್ಚು ಸೂಕ್ತವಾಗಲಿದೆ ಎಂದು ಟ್ರಾಯ್ ಅಭಿಪ್ರಾಯಪಟ್ಟಿದೆ.

ಅಂತರ್ಜಾಲ ಸ್ಥಗಿತದಿಂದ ಶಿಕ್ಷಣ, ಆರೋಗ್ಯ ಸೇವೆಗಳ ಮೇಲೆ ತೀವ್ರ ಪರಿಣಾಮ ಕೆಲವು ನಿರ್ದಿಷ್ಟ ಆ್ಯಪ್‌ಗಳ ನಿಷೇಧದ ಕುರಿತು ಪರಿಶೀಲನೆ

ಮೊಬೈಲ್‌ ಕಂಪನಿಗಳ ವರಮಾನ ಇಳಿಕೆ

ವಾಟ್ಸ್‌ಆ್ಯಪ್‌ ಗೂಗಲ್‌ ಮೀಟ್‌ ತರಹದ ಅಂತರ್ಜಾಲ ಆಧಾರಿತ ಕರೆ ಮತ್ತು ಸಂದೇಶ ರವಾನೆ ಆ್ಯಪ್‌ಗಳ ಬಳಕೆ ಹೆಚ್ಚಾಗುತ್ತಿರುವುದರಿಂದ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳಿಗೆ ವಾಯ್ಸ್‌ ಕಾಲ್‌ನಿಂದ ಮತ್ತು ಎಸ್‌ಎಂಎಸ್‌ನಿಂದ ಬರುವ ವರಮಾನದಲ್ಲಿ ಕ್ರಮವಾಗಿ ಶೇ 80 ಮತ್ತು ಶೇ 94ರಷ್ಟು ಕುಸಿತ ಆಗಿದೆ ಎಂದು ಟ್ರಾಯ್‌ ಮಾಹಿತಿ ನೀಡಿದೆ. 2013ರ ಜೂನ್‌ ತ್ರೈಮಾಸಿಕದಿಂದ 2022ರ ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಡೇಟಾ ಬಳಕೆಯಿಂದಾಗಿ ಪ್ರತಿ ಗ್ರಾಹಕನಿಂದ ಪಡೆಯುವ ಆದಾಯ (ಎಆರ್‌ಪಿಯು) 10 ಪಟ್ಟು ಬೆಳೆದಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.