ಚಿತ್ರ:ಮುಂಜಾನೆ
ಎಸ್.ನಾರಾಯಣ್ ನಿರ್ದೇಶನದ `ಮುಂಜಾನೆ~ ಸಿನಿಮಾ, ಬುದ್ಧಿವಂತ ಹುಡುಗನೊಬ್ಬನನ್ನು ಅರ್ಧ ರಾತ್ರಿಯಲ್ಲಿ ಎಬ್ಬಿಸಿ ಕೂರಿಸಿದರೆ ಮಂಪರಿನಲ್ಲೂ ತಪ್ಪಿಲ್ಲದೆ ಒಪ್ಪಿಸಿದ ಮಗ್ಗಿಯಂತಿದೆ.
ಎರಡನ್ನು ಎರಡರಿಂದ ಗುಣಿಸಿದಾಗ ನಾಲ್ಕಾಗುವುದು ಗಣಿತದಲ್ಲಿ ಒಪ್ಪಿಗೆ. ಆದರೆ, ಎರಡು ಎರಡರ ಗುಣಿತ ಆರಾದರೇನೇ ಸಿನಿಮಾ ರುಚಿಸುವುದು. ಹೀಗೆ, ಸಿದ್ಧ ವ್ಯಾಕರಣ ಮೀರುವುದಕ್ಕೆ ಅಥವಾ ಮೀರಿದಂತೆ ನಂಬಿಸುವುದಕ್ಕೆ ನಿರ್ದೇಶಕ ನಾರಾಯಣ್ ಪ್ರಯತ್ನವನ್ನೇ ಮಾಡಿಲ್ಲ. ನಾಯಕಿಯ ಮುಖದಲ್ಲಿನ ತಾಜಾತನ ನೋಡಿ ಅವರು ತಮ್ಮ ಚಿತ್ರವನ್ನು `ಮುಂಜಾನೆ~ ಎಂದು ಕರೆದಿರಬಹುದು. ಉಳಿದಂತೆ ಅವರು ಮಂಪರಿನಲ್ಲೇ ಮಗ್ಗಿ ಒಪ್ಪಿಸಿದ್ದಾರೆ.
`ಮುಂಜಾನೆ~ ಇಷ್ಟವೆನ್ನಿಸಲಿಕ್ಕೆ ಇರುವ ಒಳ್ಳೆಯ ಸಂಗತಿಗಳ ಬಗ್ಗೆ ಮೊದಲು ಮಾತನಾಡೋಣ. ನಾಯಕಿ ಮಂಜರಿ ಅಂಥದೊಂದು ಒಳ್ಳೆಯ ಕಾರಣ. ಹುಲ್ಲಿನೆಸಳಿನ ಮೇಲೆ ಕೂತ ಇಬ್ಬನಿಯಂತೆ ಕಾಣಿಸುವ ಆಕೆ, `ಮುಂಜಾನೆ~ಯಲ್ಲಿನ ರಸಮಂಜರಿ! ಗಣೇಶ್ ನಿರ್ದೇಶಕರ ಕೈಗೊಂಬೆ! ಉಳಿದಂತೆ, ಮೂರು ಹೆಣ್ಣುಹೆತ್ತ ಪೋಸ್ಟ್‌ಮಾಸ್ಟರ್ ಆಗಿ ರಾಜೇಂದ್ರ ಕಾರಂತರದ್ದು ಔಚಿತ್ಯಪೂರ್ಣ ಅಭಿನಯ. `ಬಾಲ ಅಮ್ಮ~ನಾಗಿ ಮಾಳವಿಕಾ ಕೂಡ ಒಂಥರಾ ಚೆನ್ನಾಗಿದ್ದಾರೆ. ನಿರ್ದೇಶಕರ ನಿರೂಪಣೆ, ಜಗದೀಶ ವಾಲಿ ಅವರ ಛಾಯಾಗ್ರಹಣ ಸರಳವಾಗಿದೆ.
ಮುಖ ನೋಡದೇನೇ ಪತ್ರಗಳ ಮೂಲಕ ಪ್ರೇಮಿಸುವ ಹಾಗೂ ಫೋನ್ ಮೂಲಕ ತಗುಲಿ ಹಾಕಿಕೊಳ್ಳುವ ತರುಣ ತರುಣಿಯರನ್ನು ಕನ್ನಡ ಚಿತ್ರ ಪ್ರೇಕ್ಷಕರು ಬಲ್ಲರು. ಹೊಸತು ಕೊಡಬೇಕೆನ್ನುವ ಉಮೇದಿನಿಂದ ನಾರಾಯಣ್ ಬಸ್ಸನ್ನು ಪ್ರೇಮದೂತನಾಗಿ ಬಳಸಿಕೊಂಡಿದ್ದಾರೆ. ಬಸ್ಸಿನ ಬೆನ್ನೇ ಪ್ರೇಮಿಗಳ ಹೃದಯ ನಿವೇದನೆಗೆ ವೇದಿಕೆ.
ಬೇರೆ ಬೇರೆ ಊರುಗಳಲ್ಲಿನ ಪ್ರೇಮಿಗಳ ಮನಸ್ಸನ್ನು ಬಸ್ಸು ಬೆಸೆಯುತ್ತದೆ. ಆದರೆ, ಇಬ್ಬರೂ ಒಂದಾಗಲು ಪ್ರಯತ್ನಿಸಿದಾಗ ಟೂ ಬಿಟ್ಟು, `ರೂಟು~ ಬದಲಿಸಿಕೊಳ್ಳುತ್ತದೆ. ಆಮೇಲೆ, ಥೇಟು ಧಾರಾವಾಹಿಗಳ ಶೈಲಿಯಂತೆ ಪ್ರೇಮಿಗಳಿಗೆ ಅಡಿಗಡಿಗೆ ವಿಧಿ ಮುನಿಯುತ್ತದೆ. ಹೀಗೆ ಹತ್ತಿರವಿದ್ದರೂ ದೂರ ನಿಲ್ಲುವ, ಕಣ್ಣೆದುರಿದ್ದರೂ ಹುಡುಕಾಡುವ ಪ್ರೇಮಿಗಳು ಕೊನೆಗೆ `ಫೇಸ್‌ಬುಕ್~ ಎನ್ನುವ ಸಾಮಾಜಿಕ ಜಾಲತಾಣದ ಮೂಲಕ ಒಂದಾಗುತ್ತಾರೆ. `ಮುಂಜಾನೆ~ಗೆ ಶುಭಂ.
`ಮುಂಜಾನೆ~ ಚಿತ್ರದಲ್ಲಿ ನಾರಾಯಣರದೇ ಆದ ಛಾಪು ಸ್ಪಷ್ಟವಾಗಿದೆ. ಬಸ್ಸುಗಳ ಬೆನ್ನು ಕಾಣಿಸಿದಾಗಲೆಲ್ಲ ಕಾಣಿಸುವ ಮೂತ್ರಬಾಧಿತರು, `ಮಕ್ಕಳಿಗೆ ಪುರುಸೊತ್ತಿಲ್ಲ. ನಾನು ಫ್ರೀಯಾಗಿದ್ದೀನಿ, ಅಡ್ಜಸ್ಟ್ ಮಾಡ್ಕೊತೀರಾ~ ಎನ್ನುವ ಚಂಚಲಕಣ್ಣಿನ ಅಜ್ಜಿ (ಎಂ.ಎನ್.ಲಕ್ಷ್ಮೀದೇವಿ), ಗೀತೆಗಳ ದೃಶ್ಯೀಕರಣದಲ್ಲಿ ಕಾಣಿಸುವ ಅತಿ ರಮ್ಯ ಲೋಕ- ಇವೆಲ್ಲ ನಾರಾಯಣರದೇ ಬೌದ್ಧಿಕ ಆಸ್ತಿ.
ಸಿನಿಮಾ ಮಾಡುವುದು ನಾರಾಯಣ್ ಅವರಿಗೆ ಸರಾಗವಾಗಿದೆ ಎನ್ನುವುದಕ್ಕೆ `ಮುಂಜಾನೆ~ ಒಂದು ಉದಾಹರಣೆ. ಇಲ್ಲಿ ಮಗ್ಗಿಯೇನೋ ಸರಿಯಾಗಿದೆ. `ಹೊಸತೇನಿದೆ~ ಎನ್ನುವುದು ಪ್ರೇಕ್ಷಕರ ಕೇಳಿಕೆಯಾಗುವ ಬದಲು, ನಿರ್ದೇಶಕರ ಆತ್ಮಸಾಕ್ಷಿಗೆ ಪ್ರಶ್ನೆಯಾದರೇ ಒಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.