ADVERTISEMENT

ದುಃಖತಪ್ತ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 16:10 IST
Last Updated 26 ಫೆಬ್ರುವರಿ 2011, 16:10 IST

ಚಿತ್ರ: ಆಪ್ತ
~ಆಪ್ತ’ ಚಿತ್ರದ ನಾಯಕ ಹುಟ್ಟಿನಿಂದ ಸಾಯುವವರೆಗೂ ದುಃಖವನ್ನೇ ಹೆಚ್ಚು ಅನುಭವಿಸುವುದರಿಂದ ಆತನನ್ನು ‘ದುಃಖತಪ್ತ’ ಎನ್ನಬಹುದು. ಆತನ ದುಃಖ ಸಿನಿಮಾ ನೋಡಿದ ಪ್ರೇಕ್ಷಕರಲ್ಲೂ ಉಳಿಯುವುದು ವಿಪರ್ಯಾಸ.

ವೈದ್ಯಳಾಗುವ ಆಸೆಯಿಂದ ನಗರಕ್ಕೆ ಬಂದ ಗ್ರಾಮೀಣಪ್ರದೇಶದ ಪ್ರತಿಭಾವಂತ ತರುಣಿ ಸಹಪಾಠಿಗಳ ಕ್ರೌರ್ಯಕ್ಕೆ ಸಿಲುಕಿ ಸಾವಿಗೀಡಾಗುತ್ತಾಳೆ. ಈ ಸಾವಿನ ಪ್ರತೀಕಾರವನ್ನು ನಾಯಕ ತೀರಿಸುವುದು, ತಾನೂ ಸಾಯುವುದು ‘ಆಪ್ತ’ ಚಿತ್ರದ ಕಥೆ. ಈ ಚಿತ್ರದ ಮೂಲಕ ನಿರ್ದೇಶಕ ಸಂಜೀವ್ ಕುಮಾರ್ ಪ್ರೇಕ್ಷಕರಿಗೆ ಏನನ್ನು ಹೇಳಹೊರಟಿದ್ದಾರೆ ಎನ್ನುವುದು ಸಿನಿಮಾ ಮುಗಿದರೂ ಗುಟ್ಟಾಗಿಯೇ ಉಳಿಯುತ್ತದೆ.

ವಿದ್ಯಾರ್ಥಿಗಳ ಅತಿರೇಕ ವರ್ತನೆ, ಲೈಂಗಿಕ ಸ್ವೇಚ್ಛಾಚಾರ, ಗ್ರಾಮೀಣ ಬದುಕಿನಲ್ಲಿನ ಮಾನವೀಯತೆ ಹಾಗೂ ಕ್ರೌರ್ಯ- ಹೀಗೆ, ಸಿನಿಮಾದಲ್ಲಿ ಸಾಕಷ್ಟು ಪ್ರಸಂಗಗಳಿದ್ದರೂ ಅವುಗಳನ್ನು ಒಟ್ಟಾಗಿ ನೇಯುವುದು ನಿರ್ದೇಶಕರಿಗೆ ಸಾಧ್ಯವಾಗಿಲ್ಲ.

ಮನರಂಜನೆ ಎನ್ನುವುದು ಸಿನಿಮಾದ ಯಾವ ಫ್ರೇಂನಲ್ಲೂ ಅನುಭವಕ್ಕೆ ದಕ್ಕುವುದಿಲ್ಲ. ತಾಂತ್ರಿಕವಾಗಿಯೂ ದುರ್ಬಲವಾಗಿರುವ (ಛಾಯಾಗ್ರಹಣ: ಪಿ.ಎಸ್.ಬಾಬು; ಸಂಗೀತ: ಎಸ್ಕರ್ ಮಾರಿಯೋ) ಸಿನಿಮಾ ವಿಚಾರಪ್ರಚೋದಕವಾಗಿಯೂ ರೂಪುಗೊಂಡಿಲ್ಲ. ಚಿತ್ರದ ಮೊದಲ ಭಾಗ ಗೋಜಲುಗೋಜಲು. ದ್ವಿತೀಯ ಭಾಗದಲ್ಲಿ ಪ್ರೇಕ್ಷಕನ ನಿರೀಕ್ಷೆಯನ್ನು ಮೀರಿ ಚಿತ್ರದಲ್ಲೇನೂ ನಡೆಯುವುದಿಲ್ಲ. ಹಾಗಾಗಿ ಪ್ರೇಕ್ಷಕ ದುಃಖತಪ್ತನಾಗದೆ ಅನ್ಯಮಾರ್ಗವಿಲ್ಲ.

ನತದೃಷ್ಟ ವಿದ್ಯಾರ್ಥಿನಿಯ ಪಾತ್ರದಲ್ಲಿ ಪೂಜಾಗಾಂಧಿ ಕಷ್ಟಪಟ್ಟು ನಟಿಸಿದ್ದಾರೆ. ಪಾತ್ರದ ವಿವಿಧ ಆಯಾಮಗಳನ್ನು ಎಟುಕಿಸಿಕೊಳ್ಳುವುದು ಅವರಿಗೆ ಸಾಧ್ಯವಾಗಿಲ್ಲ. ನಾಯಕಿಯನ್ನು ಪೋಷಿಸುವ ಹಾಗೂ ಆಕೆಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ನಾಯಕನ ಪಾತ್ರದಲ್ಲಿ ನೀರಜ್ ಶ್ಯಾಂ ಪೇಲವವಾಗಿ ಕಾಣಿಸುತ್ತಾರೆ. ನಾಯಕಿಯರನ್ನು ಗೋಳುಹೊಯ್ದುಕೊಳ್ಳುವ ಹುಡುಗಿಯರಾಗಿ ಪೂನಂ, ಪ್ರಜ್ಞಾ, ಮಾನಸಿ, ಭವ್ಯಕಲಾ ಅವರೇ ಗಮನಸೆಳೆಯುವಂತಿದ್ದಾರೆ. ಸಾಧುಕೋಕಿಲ ಹಾಗೂ ಬುಲೆಟ್ ಪ್ರಕಾಶ್ ಪಾತ್ರಗಳಿಗೆ ಅರ್ಥವೂ ಇಲ್ಲ, ಔಚಿತ್ಯವೂ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.