ADVERTISEMENT

ಸಫಲ ವಿಫಲಗಳ ಕೂಡುಹಾದಿ

ಪದ್ಮನಾಭ ಭಟ್ಟ‌
Published 28 ಏಪ್ರಿಲ್ 2018, 11:06 IST
Last Updated 28 ಏಪ್ರಿಲ್ 2018, 11:06 IST
ಸ್ಕಂದ ಅಶೋಕ್ ಮತ್ತು ಸೋನು ಗೌಡ
ಸ್ಕಂದ ಅಶೋಕ್ ಮತ್ತು ಸೋನು ಗೌಡ   

ಸಿನಿಮಾ: ಕಾನೂರಾಯಣ
ನಿರ್ಮಾಣ: ಶ್ರುತಾಲಯ ಫಿಲಂಸ್
ನಿರ್ದೇಶನ: ಟಿ.ಎಸ್. ನಾಗಾಭರಣ
ತಾರಾಗಣ: ಸ್ಕಂದ ಅಶೋಕ್, ಸೋನು ಗೌಡ, ಮನು ಹೆಗ್ಡೆ, ಕಿರಣ್ ನಾಯಕ್, ನೀನಾಸಂ ಅಶ್ವತ್ಥ್, ಸುಂದರ್‌ರಾಜ್, ದೊಡ್ಡಣ್ಣ

‘ಕಾನೂರಾಯಣ’ ಸಿನಿಮಾದ ಮೂಲ ಉದ್ದೇಶ ಧರ್ಮಸ್ಥಳ ಸ್ವಸಹಾಯ ಸಂಘಗಳ ಯಶೋಗಾಥೆಯನ್ನು ಹೇಳುವುದು’’ ಎಂದು ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಹೇಳಿಕೊಂಡಿದ್ದರು. ‘ಅದನ್ನು ಉಪದೇಶ ರೂಪದಲ್ಲಿ ಅಲ್ಲದೆ, ಸಿನಿಮೀಯವಾಗಿ, ಮನರಂಜನೆಗೆ ಕೊರತೆ ಇಲ್ಲದಂತೆ ಹೇಳಿದ್ದೇವೆ’ ಎಂದೂ ಹೇಳಿದ್ದರು. ‘ಕಾನೂರಾಯಣ’ ಸಫಲ ವಿಫಲಗಳ ಕೂಡುಹಾದಿ. ಈ ಮಾತನ್ನು ಕಥನದ ಕುರಿತಾಗಿಯಷ್ಟೇ ಅಲ್ಲ, ಒಟ್ಟಾರೆ ಸಿನಿಮಾಗೂ ಅನ್ವಯಿಸಬಹುದು.

ಅಣ್ಣಪ್ನೂರಿಂದ ಸ್ವಸಹಾಯಸಂಘದ ಕಾರ್ಯಕರ್ತನಾಗಿ ನಾಯಕ ಕಿರಣ್ ಕಾನೂರಿಗೆ ಬರುತ್ತಾನೆ. ಅವನು ಊರಿನಲ್ಲಿ ಸಂಘ ಕಟ್ಟಿ ಬೆಳೆಸಲು ನಡೆಸುವ ಪ್ರಯತ್ನಗಳು, ಅದಕ್ಕೆ ಎದುರಾಗುವ ಅಡಚಣೆಗಳು, ಕೊನೆಗೆ ತನ್ನ ಕೆಲಸದಲ್ಲಿ ಯಶಸ್ವಿಯಾಗುತ್ತಾನಾ ಇಲ್ಲವಾ ಎನ್ನುವುದೇ ಈ ಚಿತ್ರದ ಕಥಾವಸ್ತು.

ADVERTISEMENT

ವಾಸ್ತವದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯೊಂದರ ಯಶಸ್ಸಿನ ಕಥೆ ಸಾಕ್ಷ್ಯಚಿತ್ರವಾಗದೆ ಸಿನಿಮಾ ಆಗಿಸಲು ನಿರ್ದೇಶಕರು ಸಾಕಷ್ಟು ಶ್ರಮಿಸಿದ್ದಾರೆ. ಅವರ ಈ ಪ್ರಯತ್ನ ಮೊದಲರ್ಧದಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ ಕೂಡ. ಚಿತ್ರದಲ್ಲಿ ಸಾಕಷ್ಟು ಸಿನಿಮೀಯ ಅಂಶಗಳಿವೆ. ಮನಕಲಕುವ ಸನ್ನಿವೇಶಗಳಿವೆ. ಒಳಿತು– ಕೆಡುಕುಗಳ ನಡುವಿನ ಸಂಘರ್ಷವಿದೆ. ಮನಃಪರಿವರ್ತನೆಯ ತಿರುವಿದೆ. ತನ್ನಷ್ಟಕ್ಕೇ ಅರಳಿ ಸುಮ್ಮನಾಗುವ ತಿಳಿ ಪ್ರೇಮದ ತೆಳು ಲೇಪವೂ ಇದೆ. ಹಿನ್ನೆಲೆಗೆ ‘ಅಧಿಕೃತ’ ಎನಿಸುವ ಹಳ್ಳಿಯ ಪರಿಸರವಿದೆ.

ಬಹುಕಾಲ ನೆನಪಿನಲ್ಲಿ ಉಳಿಯುವಂಥದ್ದಲ್ಲದಿದ್ದರೂ ಆ ಕ್ಷಣಕ್ಕೆ ತಲೆದೂಗುವಂಥ ಹಾಡುಗಳಿವೆ. ಆದರೆ ಈ ಸಿನಿಮಾದ ಉದ್ದೇಶವೇ ಮಿತಿಯೂ ಆಗಿಬಿಟ್ಟಿದೆ. ಹಾಗಾಗಿಯೇ ಊರಕಥನವನ್ನು ದಟ್ಟವಾಗಿಯೇ ಕಟ್ಟಿಯೂ ಅದಕ್ಕೊಂದು ಉದಾತ್ತ ಕೊನೆ ಕಾಣಿಸುವಲ್ಲಿ ನಿರ್ದೇಶಕರು ಪೂರ್ತಿ ಸಫಲರಾಗಲು ಸಾಧ್ಯವಾಗಿಲ್ಲ. ಸ್ವಸಹಾಯ ಸಂಘದ ಗೆಲುವನ್ನೇ ಪ್ರತಿಪಾದಿಸಬೇಕಾದ ಅನಿವಾರ್ಯತೆಯಲ್ಲಿ ಹಲವು ಸಾಧ್ಯತೆಗಳು ಮುಚ್ಚಿಹೋಗಿವೆ.

ಮೊದಲಾರ್ಧದಲ್ಲಿ ಬಿಗುವಾಗಿದ್ದ ಚಿತ್ರಕಥೆ ದ್ವಿತೀಯಾರ್ಧದಲ್ಲಿ ಕೊಂಚ ತೆಳುವಾಗುತ್ತ ಹೋಗುತ್ತದೆ. ಖಾವಂದರ ಜತೆಗಿನ ಸಂವಾದದದ ದೃಶ್ಯವಂತೂ ಯಾವುದೋ ಸುದ್ದಿವಾಹಿನಿಯನ್ನು ನೋಡುತ್ತಿರುವಂತೆ ಭಾಸವಾಗುತ್ತದೆ. ‘ಜಾತಿ ಗೀತಿ ಎಲ್ಲ ನೀಗಿಕೊಳ್ಳುವ ಕಾಲ ಬಂದಿದೆ. ನಾವೀಗ ಸಮಾನರು’ ಎನ್ನುವ ಖಾವಂದರನ್ನು ಎಲ್ಲರೂ ‘ದೊಡ್ಡವರು’, ‘ಹಿರಿಯರು’ ಎಂದು ಹೆಸರೂ ಎತ್ತಿಕೊಳ್ಳದೇ ಮಾತನಾಡುವುದು ವಿಚಿತ್ರವೆನಿಸುತ್ತದೆ. ಮೊದಲಿನಿಂದಲೂ ದುಷ್ಟನಾಗಿದ್ದ ಸಿದ್‌ ಶೆಟ್ಟಿ, ಜವರನ ಸಾವಿನ ನಂತರ ಒಮ್ಮಿಂದೊಮ್ಮೆಲೇ ಬದಲಾಗಿಬಿಡುವುದೂ ಅಸಹಜವಾಗಿದೆ.

ಸ್ವಸಹಾಯ ಸಂಘಗಳ ಕುರಿತಾಗಿಯೇ ಕಟ್ಟಿರುವ ಕಥನದಲ್ಲಿ, ಅದರ ವಿರೋಧದ ಪ್ರಶ್ನೆಗಳಿಗೂ (ಅದಕ್ಕೆ ಸಮಂಜಸವಾದ ಉತ್ತರ ಕೊಡುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದೂ) ಜಾಗ ಕೊಟ್ಟಿರುವುದೂ ಗಮನಾರ್ಹ. ಹಾಗೆ ನೋಡಿದರೆ ಕೊನೆಯ ದೃಶ್ಯವನ್ನು ತೆಗೆದಿಟ್ಟು ಈ ಸಿನಿಮಾ ನೋಡಿದರೆ ಇದು ಸ್ವಸಹಾಯ ಸಂಘದ ವೈಫಲ್ಯದ ಕಥೆಯೂ ಆಗಿ ಕಾಣುವ ಸಾಧ್ಯತೆ ಇದೆ! ಇದರಿಂದಾಗಿಯೇ ಈ ಸಿನಿಮಾ ತನ್ನ ಮೂಲ ಉದ್ದೇಶವನ್ನು ಮೇಲ್ನೋಟಕ್ಕೆ ಪೂರೈಸಿದಂತೆ ಕಂಡರೂ, ಅದೇ ಉದ್ದೇಶವನ್ನು ಪ್ರಶ್ನಿಸುವ ಪ್ರಯತ್ನವಾಗಿ ನೋಡುವ ಸಾಧ್ಯತೆಯನ್ನೂ ತನ್ನೊಳಗೇ ಉಳಿಸಿಕೊಂಡಿದೆ. ಇದೇ ಈ ಸಿನಿಮಾದ ನಿಜವಾದ ಯಶಸ್ಸು ಎನ್ನಬಹುದು.

ಗ್ರಾಮೀಣ ಬಡ ಹುಡುಗಿಯಾಗಿ, ಹೊರಾಟದ ಮುಂದಾಳಾಗಿ ಸೋನುಗೌಡ ಪ್ರಬುದ್ಧವಾಗಿ ಅಭಿನಯಿಸಿದ್ದಾರೆ. ಸ್ಕಂದ ಅಶೋಕ್ ಮತ್ತು ಮನು ಹೆಗ್ಡೆ ಅವರೂ ಸಮರ್ಥವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ವ್ಯವಸ್ಥೆಯಿಂದ ಶೋಷಣೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ರೈತ ಜವರನ ಪಾತ್ರಕ್ಕೆ ಕಿರಣ್ ನಾಯಕ್ ಜೀವ ತುಂಬಿದ ರೀತಿ ಮನಸಲ್ಲುಳಿಯುವ ಹಾಗಿದೆ. ಹಿನ್ನೆಲೆ ಸಂಗೀತ ಚಿತ್ರದ ಸಿನಿಮೀಯತೆಯನ್ನು ಹೆಚ್ಚಿಸಿದೆ. ಛಾಯಾಗ್ರಹಣವೂ ಅಚ್ಚುಕಟ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.