ADVERTISEMENT

‘ಅಪ್ಪಯ್ಯ’ನ ಕಾಲದ ಕಥನ

ಚಿತ್ರ: ಅಪ್ಪಯ್ಯ

ಅಮಿತ್ ಎಂ.ಎಸ್.
Published 14 ಸೆಪ್ಟೆಂಬರ್ 2013, 19:59 IST
Last Updated 14 ಸೆಪ್ಟೆಂಬರ್ 2013, 19:59 IST
‘ಅಪ್ಪಯ್ಯ’ನ ಕಾಲದ ಕಥನ
‘ಅಪ್ಪಯ್ಯ’ನ ಕಾಲದ ಕಥನ   

ನಿರ್ಮಾಪಕಿ: ಭಾಗ್ಯವತಿ ನಾರಾಯಣ್‌
ನಿರ್ದೇಶಕ: ಎಸ್‌. ನಾರಾಯಣ್‌
ತಾರಾಗಣ: ಶ್ರೀನಗರ ಕಿಟ್ಟಿ, ಭಾಮಾ,
ಎಸ್‌. ನಾರಾಯಣ್‌, ಸುರೇಶ್ಚಂದ್ರ, ಇಂದ್ರಕುಮಾರ್‌, ನಂದ, ಆಶಾರಾಣಿ ಮತ್ತಿತರರು.


ಹೊರಜಗತ್ತಿನ ನೆರಳೇ ಇಲ್ಲದ ಹಳ್ಳಿ. ಅದು ಬರದ ಬೀಡು. ಎರಡು ಕುಟುಂಬಗಳ ನಡುವೆ ಮುಗಿಯದ ದ್ವೇಷ. ಅನ್ಯಾಯ ಅಕ್ರಮ, ಹತ್ಯೆಗಳ ಹೊರತಾಗಿ ಅಲ್ಲಿ ಮತ್ತೇನೂ ನಡೆಯುವುದಿಲ್ಲ. ಯಜಮಾನನ ನಂಬಿಕಸ್ಥ ಅಮಾಯಕ ಬಂಟನಿಗೆ ಕೊಲ್ಲುವುದು ಸಲೀಸು. ಆತನಿಗೆ ಶತ್ರುವಿನ ಕುಟುಂಬದ ಕುಡಿಯೊಂದಿಗೆ ಮೊಳಕೆಯೊಡೆಯುವ ಪ್ರೀತಿ. ಅದರ ನೆಪದಲ್ಲಿ ಮತ್ತೆ ಮಚ್ಚುಲಾಂಗುಗಳ ಸದ್ದು, ರಕ್ತಪಾತ.

ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಈ ಮಾದರಿಯ ಕಥನವನ್ನಿಟ್ಟುಕೊಂಡು ಬಂದ ಸಿನಿಮಾಗಳು ಅನೇಕ. ಸ್ವತಃ ನಿರ್ದೇಶಕ ಎಸ್‌. ನಾರಾಯಣ್, ಈ ಬಗೆಯ ಕಥನವನ್ನು ಹಲವು ಬಾರಿ ವಿವಿಧ ಮಗ್ಗುಲಲ್ಲಿ ಎಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆ ಎಂದು ಬರಡು ಭೂಮಿಯ ಹಿನ್ನೆಲೆಯಲ್ಲಿ ಮಂಡ್ಯ ಶೈಲಿಯ ಸಂಭಾಷಣೆ ಹರಿಸಿದ್ದಾರೆ. ನೂರು ವರ್ಷದಿಂದ ಮಳೆ ಬಾರದಿದ್ದರೂ ಉಳುಮೆ ಮಾಡಿಟ್ಟ ಭೂಮಿಯಲ್ಲಿ ಪ್ರೇಮದ ಫಸಲು ತೆಗೆಯುವ ಸಾಹಸವಿದು.

‘ಚೈತ್ರದ ಪ್ರೇಮಾಂಜಲಿ’ಯಲ್ಲಿ ಶುರುವಾದ ಪ್ರೇಮಕಥೆಗಳನ್ನು ಹೇಳುವ ಎಸ್.ನಾರಾಯಣ್‌ ಅವರ ಶೈಲಿ ಇಂದಿಗೂ ಬದಲಾಗಿಲ್ಲ. ಲವ್‌ಸ್ಟೋರಿಯನ್ನು ಸಿಂಪಲ್ಲಾಗಿ ಹೇಳುವ ಯುಗದಲ್ಲಿ ನಾರಾಯಣ್‌ ‘ಅಪ್ಪಯ್ಯ’ನ ಕಾಲದಲ್ಲೇ ಇದ್ದಾರೆ. ‘ಚೈತ್ರದ ಪ್ರೇಮಾಂಜಲಿ’ಯನ್ನು ಇಲ್ಲಿ ನೆನಪಿಸಿಕೊಳ್ಳಲು ಮತ್ತೊಂದು ಕಾರಣವಿದೆ. ಆ ಚಿತ್ರದಲ್ಲಿ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿದ್ದ ನಾರಾಯಣ್‌ ಇಲ್ಲಿಯೂ ಆತನ ಜೊತೆಯಾಗಿದ್ದಾರೆ. ಸ್ನೇಹಿತನ ನೋವಿಗೆ ಮುಲಾಮು ಹಚ್ಚುವ, ನಗುವಿನ ಪಾಲುದಾರನಾಗುವ, ಹಳಸಲು ಹಾಸ್ಯವನ್ನು ಬಿತ್ತುವ ಪರಂಪರೆಯನ್ನು ಮುಂದುವರೆಸಿದ್ದಾರೆ.

‘ಅಪ್ಪಯ್ಯ’ ತೀರಾ ಅಸಹನೀಯ ಸಿನಿಮಾವಲ್ಲ. ದುಡಿಮೆ– ಬದುಕು–ಪ್ರೀತಿಯ ನಡುವಿನ ಸಂಘರ್ಷದ ಭಾವುಕ ಚಿತ್ರಣ ಇಲ್ಲಿದೆ. ಹಳ್ಳಿಯ ಪರಿಸರವನ್ನು ವಾಸ್ತವಕ್ಕೆ ಹತ್ತಿರವಾಗಿ ಕಟ್ಟಿಕೊಡುವ ಪ್ರಯತ್ನವಿದೆ. ಥಟ್ಟನೆ ಕುಡಿಯೊಡೆಯುವ ಪ್ರೀತಿಯಿದೆ. ಆದರೆ ಶ್ರೀನಗರ ಕಿಟ್ಟಿ ಕೈಯಲ್ಲಿ ಮಚ್ಚು ಹಿಡಿಸುವ ಪ್ರಯೋಗ ಮತ್ತು ಬಂಜರು ನೆಲದ ಮೇಲೆ ನೆತ್ತರಿನ ಮಳೆ ಸುರಿಸುವ ಕ್ರೌರ್ಯ ಸಹನೀಯ ಎನಿಸುವುದಿಲ್ಲ. ನಾರಾಯಣ್‌ ಸಿನಿಮಾಗಳ ತಥಾಗಥಿತ ದೃಶ್ಯಗಳು ಪುನರಾವರ್ತನೆಯಾಗುತ್ತವೆ. ಇದೆಲ್ಲದರ ಹೊರತಾಗಿ ಅಂತ್ಯ ಆಪ್ತವೆನಿಸುತ್ತದೆ.

ತಾಂತ್ರಿಕವಾಗಿ ‘ಅಪ್ಪಯ್ಯ’ ಅಚ್ಚುಕಟ್ಟಾಗಿದೆ. ಜಗದೀಶ್‌ ವಾಲಿ ಛಾಯಾಗ್ರಹಣ ಕುಸುರಿ ಕೆಲಸ ಮಾಡಿದೆ. ನಾರಾಯಣ್‌ ಅವರೇ ಸಂಯೋಜಿಸಿದ ಹಾಡುಗಳೂ ಮೆಚ್ಚುವಂತಿವೆ. ಅಭಿನಯದಲ್ಲಿ ಭಾಮಾ ಎಲ್ಲರಿಗಿಂತ ಮುಂದೆ. ಇಲ್ಲಿನ ಹಳ್ಳಿಗಳಲ್ಲೇ ಬೆಳೆದವರೇನೋ ಎಂಬಂತೆ ಮಲಯಾಳಿ ನಟಿ ಭಾಮಾ ಪಾತ್ರದಲ್ಲಿ ತೊಡಗಿಕೊಂಡಿರುವ ರೀತಿ ಅಚ್ಚರಿ ಮೂಡಿಸುತ್ತದೆ. ಕಿಟ್ಟಿ ಮುಗ್ಧತೆ ಮತ್ತು ಮಚ್ಚು ಬೀಸಿ ಕೊಚ್ಚುವ ಬಗೆಯಲ್ಲೂ ಗಮನ ಸೆಳೆಯುತ್ತಾರೆ.

‘ಅಪ್ಪಯ್ಯ’ ಅತ್ತ ಪರಿಪೂರ್ಣ ಪ್ರೇಮಕಾವ್ಯವೂ ಅಲ್ಲದ, ಇತ್ತ ರಕ್ತಪಾತದ ಕ್ರೌರ್ಯ ಕಥಾನಕವೂ ಅಲ್ಲದ ಸಿನಿಮಾ. ಅನುಭವಿ ನಿರ್ದೇಶಕ ನಾರಾಯಣ್‌ ನಿರೂಪಣೆಯ ನಿಟ್ಟಿನಲ್ಲಾದರೂ ಈ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಸಿನಿಮಾಗಳನ್ನು ನೀಡುವ ಮಟ್ಟಿಗೆ ಬದಲಾಗುವ ಪ್ರಯತ್ನ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT