ADVERTISEMENT

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾ ವಿಮರ್ಶೆ: ಅಪ್ರಬುದ್ಧ ಹುಡುಗರ ದರೋಡೆ ಕಥನ

ಅಭಿಲಾಷ್ ಪಿ.ಎಸ್‌.
Published 27 ನವೆಂಬರ್ 2025, 15:45 IST
Last Updated 27 ನವೆಂಬರ್ 2025, 15:45 IST
ದೀಕ್ಷಿತ್‌, ಬೃಂದಾ 
ದೀಕ್ಷಿತ್‌, ಬೃಂದಾ    

ಬ್ಯಾಂಕ್‌ ದರೋಡೆಗೆ ಸಂಬಂಧಿಸಿದ ಹಲವು ಸಿನಿಮಾಗಳು ಈಗಾಗಲೇ ಬಂದಿವೆ. ‘ದರೋಡೆ’ ಈ ಕಥೆಗಳ ಮುಖ್ಯ ವಿಷಯವಾದರೂ ತಂತ್ರಗಳು ಭಿನ್ನ. ಕನ್ನಡದ ‘ನಿಷ್ಕರ್ಷ’, ಹಿಂದಿಯ ‘ಆಂಕೆ’ ಹೀಗೆ ಬ್ಯಾಂಕ್‌ ದರೋಡೆಯ ಕಥೆಗಳನ್ನು ಪ್ರೇಕ್ಷಕರು ನೋಡಿದ್ದಾರೆ. ಇದಕ್ಕೆ ಸೇರ್ಪಡೆ ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’. ಇದರ ಕಥೆ ಸರಳವಾಗಿದ್ದು, ಭಿನ್ನವಾಗಿಯೂ ಇದೆ. ಆದರೆ ಅದನ್ನು ಹೇಳುವ ವಿಧಾನವನ್ನು ನಿರ್ದೇಶಕರೇ ಸಂಕೀರ್ಣಗೊಳಿಸಿರುವ ಕಾರಣ ಕಿರುಚಿತ್ರವೊಂದನ್ನು ಬೇಕೆಂದೇ ಸಿನಿಮಾ ಮಾಡಿದಂತೆ ಅನಿಸುತ್ತದೆ. 

ಅಪ್ರಬುದ್ಧ, ಹುಡುಗುಬುದ್ಧಿಯ ಯುವಕರ ತಂಡವೊಂದು ಬ್ಯಾಂಕ್‌ ದರೋಡೆ ಮಾಡುವ ಕಥೆ ಇದು. ‘ಕನಕ’ (ದೀಕ್ಷಿತ್‌ ಶೆಟ್ಟಿ) ಈ ಗುಂಪಿನ ನಾಯಕ. ಸಣ್ಣ ಪುಟ್ಟ ಕಳ್ಳತನ ಮಾಡಿಕೊಂಡಿದ್ದ ಈ ಗುಂಪು ಗ್ರಾಮೀಣ ಭಾಗದಲ್ಲಿರುವ ‘ಭಾಗ್ಯಲಕ್ಷ್ಮಿ ಸಹಕಾರಿ ಬ್ಯಾಂಕ್‌’ ದರೋಡೆಗೆ ಇಳಿಯುತ್ತದೆ. ಅದು ಚುನಾವಣೆ ಸಂದರ್ಭವೂ ಆಗಿರುತ್ತದೆ. ಲಕ್ಷಾಂತರ ರೂಪಾಯಿ ದೋಚುವ ಕನಸು ಹೊತ್ತು ಬಂದ ಗುಂಪು ಬ್ಯಾಂಕ್‌ನಲ್ಲಿ ಸಿಲುಕಿಕೊಂಡಾಗ ಕಥೆ ತೆರೆದುಕೊಂಡು ಮುಂದಡಿ ಇಡುತ್ತದೆ.  

ಸರಳವಾಗಿ ಸಾಗಬೇಕಾದ ಕಥೆಯನ್ನು ನಿರ್ದೇಶಕರೇ ಕ್ಲಿಷ್ಟವಾಗಿಸಿ ಚಿತ್ರಕಥೆ ರೂಪಿಸಿದ್ದಾರೆ. ಇದು ಅನಗತ್ಯವಾದ ದೃಶ್ಯಗಳು ಹಾಗೂ ಪಾತ್ರಗಳನ್ನು ಸೃಷ್ಟಿಸಿರುವುದಲ್ಲದೆ, ಸಿನಿಮಾ ಅವಧಿಯನ್ನೂ ಹೆಚ್ಚಿಸಿದೆ. ಇದನ್ನು ಗಮನಕ್ಕೆ ತಂದುಕೊಂಡು ಬರವಣಿಗೆಯನ್ನು ಇನ್ನಷ್ಟು ಚುರುಕಾಗಿಸಬಹುದಿತ್ತು. ದ್ವಿತೀಯಾರ್ಧಕ್ಕೆ ಹೋಲಿಸಿದರೆ ಚಿತ್ರದ ಮೊದಲಾರ್ಧವೇ ಗಟ್ಟಿಯಾಗಿದೆ. ನಗಿಸುವ ಅಂಶಗಳು ಭರಪೂರವಾಗಿವೆ. ಅಪ್ರಬುದ್ಧವಾಗಿದ್ದ ಹುಡುಗರನ್ನು ಪ್ರಬುದ್ಧಗೊಳಿಸಿದ್ದೇ ದ್ವಿತೀಯಾರ್ಧ ಎಡವಲು ಕಾರಣವಾದಂತಿದೆ. ಊರೊಂದರಲ್ಲಿ ಬ್ಯಾಂಕ್‌ ದರೋಡೆ ನಡೆಯುತ್ತಿದ್ದರೂ, ಆ ಊರಿನ ಕೆಲ ಜನ ಅದರೊಳಗೆ ಸಿಲುಕಿದ್ದರೂ ಊರ ಜಾತ್ರೆ ಸರಾಗವಾಗಿ ನಡೆಯಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಯನ್ನು ಉಳಿಸುತ್ತದೆ. ಕಥೆಯಲ್ಲಿ ತಿರುವುಗಳಿದ್ದರೂ, ಕ್ಲೈಮ್ಯಾಕ್ಸ್‌ನಲ್ಲಿ ‘ವಾವ್‌’ ಎನಿಸುವಂಥ ಅಂಶಗಳಿಲ್ಲ. ಈ ಬಗ್ಗೆ ಹೆಚ್ಚಿನ ಗಮನಹರಿಸಬಹುದಿತ್ತು. 

ADVERTISEMENT

‘ಆನಂದ’ ಪಾತ್ರದಲ್ಲಿ ಶ್ರೀವತ್ಸ ಮೊದಲಾರ್ಧದಲ್ಲಿ ನಗಿಸುವ ಜವಾಬ್ದಾರಿ ಹೊತ್ತಿದ್ದಾರೆ. ಹುಡುಗುಬುದ್ಧಿಯ ಹುಡುಗರ ಗುಂಪು ‘ಹಾಸ್ಟೆಲ್‌ ಹುಡುಗ’ರನ್ನು ನೆನಪಿಸುತ್ತದೆ. ದೀಕ್ಷಿತ್‌ ಹಾಗೂ ಬೃಂದಾ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಿರ್ದೇಶಕರು ವಿಎಫ್‌ಎಕ್ಸ್‌ ಕ್ಷೇತ್ರದಲ್ಲೇ ಇರುವ ಕಾರಣದಿಂದ ಹಾಡಿನ ದೃಶ್ಯಗಳು ತೆರೆಯಲ್ಲಿ ಅದ್ಭುತವಾಗಿ ಕಾಣಿಸುತ್ತವೆ. ‘ಅಕ್ಕರೆ ಆಗಿದೆ...’ ಹಾಗೂ ‘ಮಿರ್‍ಯಾಕಲ್‌...’ ಹಾಡುಗಳು ಇಂಪಾಗಿವೆ.  

ನೋಡಬಹುದಾದ ಚಿತ್ರ   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.